* ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಚರಣಜಿತ್ ಸಿಂಗ್ ಚನ್ನಿ* ಪಂಜಾಬ್‌ಗೆ ಮೊದಲ ದಲಿತ ಸಿಎಂ ನಾಯಕ* ಚನ್ನಿ ಜೊತೆ ಪ್ರಮಾಣವಚನ ಸ್ವೀಕರಿಸಿದ ಇಬ್ಬರು ಡಿಸಿಎಂಗಳು* ಸಿಎಂ ಆದ ಬೆನ್ನಲ್ಲೇ ರೈತರಿಗೆ ನೆಮ್ಮದಿ ಕೊಟ್ಟ ಚನ್ನಿ
ಚಂಡೀಗಢ(ಸೆ.20): ಚರಣಜಿತ್ ಸಿಂಗ್ ಚನ್ನಿ ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ರಾಜ್ಯಪಾಲ ಬಿಎಲ್ ಪುರೋಹಿತ್ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದ್ದಾರೆ. ಪಂಜಾಬ್‌ನಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳ ನೇಮಿಸಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇನ್ನು ರಾಹುಲ್ ಗಾಂಧಿ ಕೊಂಚ ತಡವಾಗಿ ತಲುಪಿದ ಕಾರಣ ಪ್ರಮಾಣವಚನ ಸಮಾರಂಭ 15-20 ನಿಮಿಷ ತಡವಾಗಿ ಆರಂಭವಾಯಿತು. ಇನ್ನು ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಮಾರಂಭಕ್ಕೆ ಗೈರಾಗಿದ್ದರೆಂಬುವುದು ಉಲ್ಲೇಖನೀಯ. ಪಂಜಾಬ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಚರಣಜಿತ್ ಸಿಂಗ್ ಚನ್ನಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು,'ಪಂಜಾಬ್ ಜನರ ಒಳಿತಿಗಾಗಿ ಪಂಜಾಬ್ ಸರ್ಕಾರದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ' ಎಂದಿದ್ದಾರೆ.
ಸಿಎಂ ಆದ ಬೆನ್ನಲ್ಲೇ ಪ್ರಮುಖ ಘೋಷಣೆ
ಚರಣಜಿತ್ ಸಿಂಗ್ ಚನ್ನಿ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು ಪಂಜಾಬ್ ಸರ್ಕಾರ ರಾಜ್ಯದ ರೈತರ ವಿದ್ಯುತ್ ಮತ್ತು ನೀರಿನ ಬಿಲ್ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಅಲ್ಲದೇ, ಅವರು ರೈತರ ಚಳುವಳಿಗೆ ಸಂಬಂಧಿಸಿದಂತೆ ರೈತರೊಂದಿಗಿದ್ದೇನೆ ಎಂದಿದ್ದು, ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪಂಜಾಬಿನ ಮೊದಲ ದಲಿತ ಮುಖ್ಯಮಂತ್ರಿಯಾದ ಚರಣಜಿತ್ ಸಿಂಗ್ ಚನ್ನಿ, ನವಜೋತ್ ಸಿಂಗ್ ಸಿಧು ಮತ್ತು ಪಂಜಾಬ್‌ನ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಅವರೊಂದಿಗೆ ರಾಜಭವನಕ್ಕೆ ತೆರಳಿದ್ದರು. ಪಂಜಾಬ್‌ಗೆ ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಿಸಲಾಗಿದೆ. ಆರಂಭದಲ್ಲಿ ಬ್ರಹ್ಮಮೋಹೀಂದ್ರ ಅವರ ಹೆಸರು ಉಪ ಮುಖ್ಯಮಂತ್ರಿಯಾಗಿ ಘೋಷಿಸಲಾಗಿತ್ತು. ಆದರೆ ಅವರು ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗೆ ಆಪ್ತರಾಗಿದ್ದ ಕಾರಣ ಈ ರೇಸ್‌ನಿಂದ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ಒಪಿ ಸೋನಿ ಹೆಸರು ಆಯ್ಕೆಯಾಗಿದ್ದು, ಎರಡನೇ ಉಪ ಮುಖ್ಯಮಂತ್ರಿ ಸುಖಜಿಂದರ್ ರಾಂಧವ ಆಯ್ಕೆಯಾಗಿದ್ದಾರೆ. ಇನ್ನು ರಾಂಧವ ಜಾಟ್ ಸಿಖ್ ಸಮುದಾಯದವರಾಗಿದ್ದರೆ, ಒಪಿ ಸೋನಿ ಹಿಂದೂ ನಾಯಕ.
ಚನ್ನಿ ಯಾರು?
- ಸಿಖ್ ದಲಿತ ಸಮುದಾಯಕ್ಕೆ ಸೇರಿದ ಪ್ರಬಲ ನಾಯಕ
- 58 ವರ್ಷದ ನಾಯಕ. 3 ಬಾರಿ ಶಾಸಕರಾಗಿದ್ದಾರೆ.
- 2015ರಿಂದ 2 ವರ್ಷ ಪ್ರತಿಪಕ್ಷ ನಾಯಕರಾಗಿದ್ದರು
- ಅಮರೀಂದರ್ ಸಂಪುಟದಲ್ಲಿ ತಾಂತ್ರಿಕ ಶಿಕ್ಷಣ ಸಚಿವರಾಗಿದ್ದರು
- ಅಮರೀಂದರ್ ನಾಯಕತ್ವದ ವಿರುದ್ಧ ದನಿ ಎತ್ತಿದ್ದರು
ದಲಿತರಿಗೇ ಏಕೆ ಸಿಎಂ ಪಟ್ಟ?
ಇತ್ತ ಬಿಜೆಪಿ ಕೂಡ ಮುಂದಿನ ಚುನಾವಣೆಯಲ್ಲಿ ದಲಿತ ಮುಖವನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿಲು ಸಿದ್ಧತೆ ಮಾಡಿಕೊಂಡಿದೆ. ಒಂದು ವೇಳೆ ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದರೆ ದಲಿತ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಬಿಜೆಪಿ ಘೋಷಣೆ ಮಾಡಿದೆ. ಅದೇ ರೀತಿ ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಹೊರಟಿರುವ ಶಿರೋಮಣಿ ಅಕಾಲಿದಳ ಉಪ ಮುಖ್ಯಮಂತ್ರಿ ಅಭ್ಯರ್ಥಿ ದಲಿತ ಸಮುದಾಯದವರೇ ಆಗಲಿದ್ದಾರೆ ಎಂದು ಹೇಳಿದೆ. ಪಂಜಾಬ್‌ನಲ್ಲಿ ದಲಿತ ಸಮುದಾಯದ ಮತಗಳು ಮೂರನೇ ಒಂದರಷ್ಟಿದ್ದು, ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಚರಣ್‌ಜಿತ್ ಸಿಂಗ್ ಆಯ್ಕೆ ಮಹತ್ವ ಪಡೆದುಕೊಂಡಿದೆ.
