ಮುಂಬೈ(ಏ.19): ಈಗಾಗಲೇ ನಿತ್ಯ 60000ಕ್ಕೂ ಹೆಚ್ಚು ಕೇಸುಗಳಿಂದಾಗಿ ತತ್ತರಿಸಿ ಹೋಗಿರುವ ಮಹಾರಾಷ್ಟ್ರದಲ್ಲಿ ಶೀಘ್ರವೇ ಕೊರೋನಾ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸಿಎಂ ಉದ್ಧವ್‌ ಠಾಕ್ರೆ ಅವರ ಪುತ್ರ, ಸಚಿವ ಆದಿತ್ಯ ಠಾಕ್ರೆ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ‘ಕೊರೋನಾ 3ನೇ ಅಲೆ ಯಾವಾಗ ಬೇಕಾದರೂ ಎದುರಾಗಬಹುದು. ಅದು 2ನೇ ಅಲೆಗಿಂತ ಪ್ರಬಲವಾಗಿ ಇರಲಿದೆಯೇ ಅಥವಾ ದುರ್ಬಲವಾಗಿ ಇರಲಿದೆಯೇ ಎಂದು ಈಗಲೇ ಹೇಳುವುದು ಕಷ್ಟ. ಹೀಗಾಗಿ ಅರೆ-ಬರೆ ತಯಾರಿಯಿಂದ ಯಾವುದೇ ಪ್ರಯೋಜನ ಇಲ್ಲ.

ಕಳೆದ ವರ್ಷ ರಚಿಸಿದ್ದ ಕಾರ್ಯಪಡೆ ನೀಡುವ ಸಲಹೆ, ವಿಜ್ಞಾನ ಮತ್ತು ವೈದ್ಯಕೀಯ ಸಾಕ್ಷ್ಯಗಳ ಆಧಾರದ ಮೇಲೆ ನಾವು ಪ್ರತಿಯೊಂದು ನಿರ್ಧಾರಗಳನ್ನು ಕೈಗೊಂಡಿದ್ದೇವೆಯೇ ಹೊರತು, ರಾಜಕೀಯವಾಗಿ ಅಲ್ಲ. 3ನೇ ಅಲೆ ತಡೆಗೆ ಈಗಿನಿಂದಲೇ ಸಿದ್ಧವಾಗಬೇಕಿದೆ. ಸದ್ಯ ನಾವು ಆಮ್ಲಜನಕ ಸೌಲಭ್ಯ ಇರುವ 5 ಲಕ್ಷ ಹಾಸಿಗೆಯನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ.