* ಸಾರ್ವಜನಿಕ ಆಸ್ತಿ ನಾಶಕ್ಕೆ ಜನರಿಗೆ ದಿನಕ್ಕೆ 500 ರು. ನೀಡಿ ನೇಮಕ ಮಾಡಿಕೊಳ್ಳಲಾಗಿದೆ* ಈಗ ನಡೆಯುತ್ತಿರುವುದೆಲ್ಲಾ ಟೂಲ್‌ಕಿಟ್ ಆಧರಿತವಾಗಿದೆ* ಎಲ್ಲಾ ರಾಜ್ಯಗಳಲ್ಲೂ ನೌಕರಿಗೆ ಸಂಬಂಧಿಸಿದಂತೆ ಮಾಜಿ ಯೋಧರಿಗೆ ಎಂಬ ಕೋಟಾ ಇರುತ್ತದೆ
ನವದೆಹಲಿ(ಜೂ.19): ‘ಅಗ್ನಿಪಥ್ ವಿರೋಧಿ ಪ್ರತಿಭಟನೆ ವೇಲೆ ಸಾರ್ವಜನಿಕ ಆಸ್ತಿಗಳಿಗೆ ಬೆಂಕಿ ಹಚ್ಚಲು, ವಿಪಕ್ಷಗಳು ಕೆಲವು ಜನರನ್ನು ನೇಮಕ ಮಾಡಿವೆ’ ಎಂದು ನಿವೃತ್ತ ಸೇನಾ ಮುಖ್ಯಸ್ಥ, ಕೇಂದ್ರ ಸಚಿವ ವಿ.ಕೆ.ಸಿಂಗ್ ಶನಿವಾರ ಕಿಡಿಕಾರಿದ್ದಾರೆ.
‘ಸಾರ್ವಜನಿಕ ಆಸ್ತಿ ನಾಶಕ್ಕೆ ಈ ಜನರಿಗೆ ದಿನಕ್ಕೆ 500 ರು. ನೀಡಿ ನೇಮಕ ಮಾಡಿಕೊಳ್ಳಲಾಗಿದೆ. ಈಗ ನಡೆಯುತ್ತಿರುವುದೆಲ್ಲಾ ಟೂಲ್‌ಕಿಟ್ ಆಧರಿತವಾಗಿದೆ’ ಎಂದು ಅವರು ಆರೋಪಿಸಿದ್ದಾರೆ. ಈ ಯೋಜನೆಯ ಮೂಲಕ ಸೇನೆ, ವಾಯುಪಡೆಗೆ, ನೌಕಾದಳಕ್ಕೆ ನೇಮಕವಾಗುವ ಅಗ್ನಿವೀರರಿಗೆ ಇತರ ಸೈನಿಕರಂತೆಯೇ ತರಬೇತಿ ನೀಡಲಾಗುವುದು. ಆದರೆ ಈ ಯೋಜನೆಯ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ವಿನಾಕಾರಣ ತಪ್ಪು ಭಾವನೆಯನ್ನು ಹರಡಲಾಗುತ್ತಿದೆ ಎಂದು ಹೇಳಿದರು.
ಅಗ್ನಿಪಥ ದಿಕ್ಕಿಲ್ಲದ ಯೋಜನೆ, ಪ್ರತಿಭಟನಕಾರರಿಗೆ ಆಸ್ಪತ್ರೆಯಿಂದಲೇ ಬೆಂಬಲ ಸೂಚಿಸಿದ ಸೋನಿಯಾ ಗಾಂಧಿ!
ಎಲ್ಲಾ ರಾಜ್ಯಗಳಲ್ಲೂ ನೌಕರಿಗೆ ಸಂಬಂಧಿಸಿದಂತೆ ಮಾಜಿ ಯೋಧರಿಗೆ ಎಂಬ ಕೋಟಾ ಇರುತ್ತದೆ. ಈ ಪ್ರಮಾಣವನ್ನು ಹೆಚ್ಚು ಮಾಡಲು ಎಲ್ಲಾ ರಾಜ್ಯಗಳಿಗೂ ಮನವಿ ಮಾಡಲಾಗಿದೆ. ಹಾಗಾಗಿ ಈ ಯೋಜನೆಯ ಮೂಲಕ ಸೈನ್ಯಕ್ಕೆ ಸೇರುವವರು ಭವಿಷ್ಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
