ಹೋಟೆಲ್‌ನಲ್ಲಿ ಸ್ಕ್ವಿಡ್ ತೋರನ್ ಮತ್ತು ಮೀನಿನ ಮೊಟ್ಟೆ ತಿಂದ ಕೆಲವೇ ಗಂಟೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ದುರಂತಕ್ಕೆ ಫುಡ್ ಪಾಯ್ಸನಿಂಗ್ ಅಥವಾ ತೀವ್ರ ಅಲರ್ಜಿ ಕಾರಣವೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ತಿರುವನಂತಪುರಂ: "ನಾವು ಒಟ್ಟಿಗೆ ಕೂತು ಸ್ಕ್ವಿಡ್ ತೋರನ್, ಮೀನಿನ ಮೊಟ್ಟೆ, ಮರಗೆಣಸು ಮತ್ತು ಪರೋಟ ಆರ್ಡರ್ ಮಾಡಿ ತಿಂದ್ವಿ. ಊಟ ಮುಗಿಸಿ ವಾಪಸ್ ಹೊರಟ ಕೆಲವೇ ಕ್ಷಣಗಳಲ್ಲಿ ಎಲ್ಲವೂ ಬದಲಾಗಿ ಹೋಯ್ತು" - ಇದು ವಿಳಿಂಜಂನಲ್ಲಿ ಊಟ ಮಾಡಿದ ನಂತರ ಇಬ್ಬರು ಸಾವನ್ನಪ್ಪಿದ ಘಟನೆಯಲ್ಲಿ, ಅವರ ಜೊತೆಗಿದ್ದ ಸ್ನೇಹಿತ ಕಣ್ಣನ್ ಹೇಳಿದ ಮಾತುಗಳು.

Add Asianetnews Kannada as a Preferred SourcegooglePreferred

ಆಹಾರ ಸೇವಿಸಿದ ಕೆಲವೇ ಗಂಟೆಯಲ್ಲಿ ಇಬ್ಬರ ಸಾವು

ವಿಳಿಂಜಂನ 'ಅಸ್ಮಾಕ್' ಹೋಟೆಲ್‌ನಲ್ಲಿ ಊಟ ಮಾಡಿದ್ದ ಕೊಲ್ಲಂ ನಿವಾಸಿಗಳಾದ ಶಾಜಿ ಮತ್ತು ಅವರ ಅತ್ತೆ ರಶೀದಾ ಬೀವಿ (58) ಸಾವನ್ನಪ್ಪಿದ್ದಾರೆ. ಈ ಸಾವಿಗೆ ಫುಡ್ ಪಾಯ್ಸನಿಂಗ್ ಕಾರಣವೋ ಅಥವಾ ತೀವ್ರ ಅಲರ್ಜಿಯೋ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಊಟ ಮುಗಿಸಿ ವಾಪಸ್ ಬರುವಾಗ ಉಂಟಾದ ಅಸ್ವಸ್ಥತೆ ಬಗ್ಗೆ ಸ್ನೇಹಿತ ಕಣ್ಣನ್ ವಿವರಿಸಿದ್ದು ಹೀಗೆ

"ನಾವು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಹೋಟೆಲ್‌ನಿಂದ ಹೊರಟೆವು. ಸ್ವಲ್ಪ ಸಮಯದಲ್ಲೇ ರಶೀದಾ ಬೀವಿ ಅವರಿಗೆ ಎದೆನೋವು ಕಾಣಿಸಿಕೊಂಡಿತು. ನಂತರ ಅವರ ನಾಲಿಗೆ ತೊದಲಲು ಶುರುವಾಗಿ, ಇಡೀ ದೇಹ ನಿತ್ರಾಣಗೊಂಡಿತು. ಬಳಿಕ ಅವರು ಕುಡಿಯಲು ನೀರು ಕೇಳಿದರು. ನಾವು ಅವರಿಗೆ ಬ್ಲ್ಯಾಕ್ ಟೀ ಕೊಡಿಸಿದೆವು. ಅಷ್ಟರಲ್ಲೇ ಶಾಜಿ ಕೂಡ ತೀವ್ರವಾಗಿ ವಾಂತಿ ಮಾಡಲು ಆರಂಭಿಸಿದರು."

ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ರಶೀದಾ ಬೀವಿ ಅವರನ್ನು ಪಾರಿಪಳ್ಳಿ ಮೆಡಿಕಲ್ ಕಾಲೇಜಿಗೆ ಮತ್ತು ಶಾಜಿ ಅವರನ್ನು ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟರು. ಶಾಜಿ ಅವರ ಪತ್ನಿ ಸಜೀನಾ ಅವರಿಗೂ ಇದೇ ರೀತಿಯ ಲಕ್ಷಣಗಳು ಕಾಣಿಸಿಕೊಂಡಿದ್ದು, ತಿರುವನಂತಪುರಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊದಲು ಸಜೀನಾ ಅವರನ್ನು ಪಾರಿಪಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಸ್ಥಿತಿ ಗಂಭೀರವಾದ ಕಾರಣ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಸದ್ಯಕ್ಕೆ ಅವರ ಜೊತೆಗಿದ್ದ ಮಕ್ಕಳಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿರುವುದು ಸಮಾಧಾನದ ಸಂಗತಿ.

ಇದನ್ನೂ ಓದಿ: ಬಕೆಟ್‌ನಲ್ಲಿ ಹೀಟರ್ ಇಟ್ಟು ಸ್ನಾನಕ್ಕೆ ನೀರು ಬಿಸಿ ಮಾಡುವಾಗ ಕರೆಂಟ್ ಶಾಕ್: 7ನೇ ಕ್ಲಾಸ್ ಬಾಲಕ ಸಾವು

ಹೋಟೆಲ್ ಬಾಗಿಲಿಗೆ ಬಿತ್ತು ಬೀಗ

ಈ ಘಟನೆಯ ನಂತರ ವಿಳಿಂಜಂ ಪೊಲೀಸರು ಮತ್ತು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 'ಅಸ್ಮಾಕ್' ಹೋಟೆಲ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಆಹಾರದ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ. ಸಾವಿಗೆ ನಿಖರ ಕಾರಣ ಫುಡ್ ಪಾಯ್ಸನಿಂಗ್ ಅಥವಾ ತೀವ್ರ ಅಲರ್ಜಿಯೇ ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಾಪತ್ತೆಯಾಗಿದ್ದ ಇಬ್ಬರು ಮುಸ್ಲಿಂ ಯುವತಿಯರು ಹಿಂದೂ ಸೋದರರನ್ನು ಮದುವೆಯಾಗಿ ಪ್ರತ್ಯಕ್ಷ: ರಕ್ಷಣೆ ಕೋರಿ ಮನವಿ