Asianet Suvarna News Asianet Suvarna News

ವಿಶ್ವಕರ್ಮ ಯೋಜನೆಯಿಂದ ಸ್ವದೇಶಿ ಉತ್ಪನ್ನ ಜಾಗತಿಕ ಪೇಟೆಗೆ : ಮೋದಿ

‘ವಿಶ್ವಕರ್ಮ ಯೋಜನೆ ಹಾಗೂ ಯಶೋಭೂಮಿ ಕೇಂದ್ರಗಳು ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Vishwakarma Yojana and Yashobhoomi Centers play a huge role in marketing local products globally PM Naredra Modi akb
Author
First Published Sep 18, 2023, 8:29 AM IST

ನವದೆಹಲಿ: ದೇಶದ ಕುಶಲಕರ್ಮಿಗಳ ಸಾಂಪ್ರದಾಯಿಕ ಕಲೆ ಹಾಗೂ ಉತ್ಪಾದನೆಗಳಿಗೆ ನೆರವು ನೀಡುವ ‘ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ’ ಹಾಗೂ ದಿಲ್ಲಿಯ ದ್ವಾರಕಾದಲ್ಲಿ ನಿರ್ಮಿಸಲಾಗಿರುವ ವಿಶಿಷ್ಟ ‘ಯಶೋಭೂಮಿ’ ಸಭಾಂಗಣ/ವಸ್ತು ಪ್ರದರ್ಶನ ಕೇಂದ್ರದ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು. ‘ವಿಶ್ವಕರ್ಮ ಯೋಜನೆ ಹಾಗೂ ಯಶೋಭೂಮಿ ಕೇಂದ್ರಗಳು ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತವೆ’ ಎಂದು ಹೇಳಿದರು.

ವಿಶ್ವಕರ್ಮ ಯೋಜನೆಯು (Vishwakarma Yojana) 13 ಸಾವಿರ ಕೋಟಿ ರು. ಮೊತ್ತದ್ದಾಗಿದ್ದು ದೇಶದ 18 ಸಾಂಪ್ರದಾಯಿಕ ವೃತ್ತಿಗಳ ಸುಮಾರು 30 ಲಕ್ಷ ಕುಶಲಕರ್ಮಿಗಳಿಗೆ ತಲಾ 3 ಲಕ್ಷ ರು. ಸಾಲದ ನೆರವು ಹಾಗೂ ಕರಕುಶಲ ತರಬೇತಿ ನೀಡುವ ಉದ್ದೇಶ ಹೊಂದಿದೆ. ಇನ್ನು ಯಶೋಭೂಮಿ ವಸ್ತುಪ್ರದರ್ಶನ ಕೇಂದ್ರವು ಭಾರತೀಯ ಸಾಂಪ್ರದಾಯಿಕ ಉತ್ಪನ್ನಗಳ ವಸ್ತುಪ್ರದರ್ಶನ (Yashobhoomi Exhibition Center) ಹಾಗೂ ಮಾರಾಟಕ್ಕೆ ಉತ್ತೇಜನ ನೀಡಲಿದೆ.

ಈ ಬಗ್ಗೆ ತಮ್ಮ ಭಾಷಣದಲ್ಲಿ ಸುದೀರ್ಘವಾಗಿ ಮಾತನಾಡಿದ ಮೋದಿ, ‘ಭವಿಷ್ಯದಲ್ಲಿ ತಂತ್ರಜ್ಞಾನ, ಉಪಕರಣಗಳು ಮತ್ತು ತರಬೇತಿ ಅತ್ಯಗತ್ಯ. ‘ಪಿಎಂ ವಿಶ್ವಕರ್ಮ’ ಯೋಜನೆಯಡಿ ವಿಶ್ವಕರ್ಮ ಪಾಲುದಾರರಿಗೆ ವಿಶೇಷ ತರಬೇತಿ ನೀಡಲು ಸರ್ಕಾರ ಗಮನಹರಿಸಲಿದೆ’ ಎಂದರು.

‘ತರಬೇತಿ ನಡೆಯುತ್ತಿರುವಾಗ ನಿಮಗೆ 500 ರು.ಗಳನ್ನು ನೀಡಲಾಗುತ್ತದೆ. ನೀವು 1,500 ರು. ಮೌಲ್ಯದ ಟೂಲ್‌ಕಿಟ್ ವೋಚರ್ ಅನ್ನು ಸಹ ಪಡೆಯಿರಿ. ನೀವು ತಯಾರಿಸುವ ಉತ್ಪನ್ನಗಳನ್ನು ಬ್ರ್ಯಾಂಡಿಂಗ್, ಪ್ಯಾಕೇಜಿಂಗ್ ಮತ್ತು ಮಾರ್ಕೆಟಿಂಗ್ (marketing) ಮಾಡಲು ಸರ್ಕಾರವು ನಿಮಗೆ ಸಹಾಯ ಮಾಡುತ್ತದೆ. ಇದಕ್ಕೆ ಪ್ರತಿಯಾಗಿ, ನೀವು ಜಿಎಸ್‌ಟಿ ನೋಂದಾಯಿತ ಅಂಗಡಿಗಳಿಂದ ಮಾತ್ರ ಟೂಲ್‌ಕಿಟ್‌ (ವೃತ್ತಿಗೆ ಸಂಬಂಧಿಸಿದ ಸಲಕರಣೆಗಳು) ಖರೀದಿಸಬೇಕು’ ಎಂದರು.

ರಾಷ್ಟ್ರ ರಾಜಧಾನಿಯ ದ್ವಾರಕಾದಲ್ಲಿ ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ ''ಯಶೋಭೂಮಿ''ಯನ್ನು ಉದ್ಘಾಟಿಸಿದ ಮೋದಿ, ‘ಇಂದು ರಾಷ್ಟ್ರಕ್ಕೆ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ ಯಶೋಭೂಮಿ ಸಿಕ್ಕಿದೆ. ಇದು ನನ್ನ ವಿಶ್ವಕರ್ಮ ಸಹೋದರರ ತಪಸ್ಸನ್ನು ತೋರಿಸುತ್ತದೆ. ನಾನು ಈ ಕೇಂದ್ರವನ್ನು ರಾಷ್ಟ್ರದ ಪ್ರತಿಯೊಬ್ಬ ವಿಶ್ವಕರ್ಮರಿಗೂ ಸಮರ್ಪಿಸುತ್ತೇನೆ. ಇದು ವಿಶ್ವಕರ್ಮರಿಗೆ ಸಹಕಾರಿಯಾಗಲಿದೆ. ಭಾರತೀಯ ಕಲೆ ಮತ್ತು ಕರಕುಶಲ ವಸ್ತುಗಳನ್ನು ಜಾಗತಿಕ ಮಟ್ಟಕ್ಕೆ ತಲುಪಿಸಲು ಇದು ರೋಮಾಂಚಕ ಕೇಂದ್ರವಾಗಲಿದೆ. ಇದು ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಮಾಡುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ. ನಮ್ಮ ದೇಹದಲ್ಲಿ ಬೆನ್ನುಮೂಳೆಯು ಹೇಗೆ ಅವಶ್ಯಕವೋ, ನಮ್ಮ ವಿಶ್ವಕರ್ಮರು ಸಮಾಜಕ್ಕೆ ಅತ್ಯಗತ್ಯ. ಅವರಿಲ್ಲದೆ ದೈನಂದಿನ ಜೀವನವು ಊಹಿಸಲೂ ಸಾಧ್ಯವಿಲ್ಲ. ದೇಶದ ಜನರು ಪ್ರತಿ ಗಣೇಶ ಚತುರ್ಥಿ, ದೀಪಾವಳಿ, ಧನತ್ರಯೋದಶಿ ವೇಳೆ ಸ್ಥಳೀಯ ಉತ್ಪನ್ನವನ್ನೇ ಖರೀದಿಸಬೇಕು’ ಎಂದರು.

ಕಾನ್ಫರೆನ್ಸ್‌ ಟೂರಿಸಂ: ವಾರ್ಷಿಕ 25 ಲಕ್ಷ ಕೋಟಿ ರು. ವಹಿವಾಟಿನ ಜಾಗತಿ ...

ವಿಶ್ವಕರ್ಮ ಯೋಜನೆ ಕುರಿತು ಮಾತನಾಡಿದ ಅವರು, ‘ನಮ್ಮ ವಿಶ್ವಕರ್ಮ ಪಾಲುದಾರರನ್ನು ಗುರುತಿಸುವುದು ಮತ್ತು ಅವರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಬೆಂಬಲಿಸುವುದು ಇಂದಿನ ಅಗತ್ಯವಾಗಿದೆ. ನಮ್ಮ ಸರ್ಕಾರ ನಮ್ಮ ವಿಶ್ವಕರ್ಮ ಪಾಲುದಾರರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ಯೋಜನೆಯಡಿಯಲ್ಲಿ, 18 ವಿವಿಧ ಕ್ಷೇತ್ರಗಳ ಅಡಿಯಲ್ಲಿ ಕೆಲಸ ಮಾಡುವ ವಿಶ್ವಕರ್ಮ ಪಾಲುದಾರರು ಗಮನಹರಿಸಬೇಕು. ಪ್ರಧಾನಿ ವಿಶ್ವಕರ್ಮ ಯೋಜನೆಗೆ ಸರ್ಕಾರ 13,000 ಕೋಟಿ ರು. ಖರ್ಚು ಮಾಡಲಿದೆ’ ಎಂದರು.

‘ಇಂದು ವಿಶ್ವಕರ್ಮ ಜಯಂತಿ, ಈ ದಿನವನ್ನು ನಾಡಿನ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳಿಗೆ ಸಮರ್ಪಿಸಲಾಗಿದೆ, ಇಂದು ನಮ್ಮ ವಿಶ್ವಕರ್ಮ ಸದಸ್ಯರನ್ನು ಸೇರಲು ನನಗೆ ಅವಕಾಶ ಸಿಕ್ಕಿದೆ, ಕಲಾವಿದರು ಮತ್ತು ಕುಶಲಕರ್ಮಿಗಳ ಭರವಸೆಯ ಕಿರಣವಾಗಿ ಹೊರಹೊಮ್ಮುವ ''ಪಿಎಂ ವಿಶ್ವಕರ್ಮ'' ಯೋಜನೆಯನ್ನು ಇಂದು ಪ್ರಾರಂಭಿಸಲಾಗಿದೆ. ಯೋಜನೆಯಡಿಯಲ್ಲಿ, ಸರ್ಕಾರವು ಯಾವುದೇ (ಬ್ಯಾಂಕ್) ಗ್ಯಾರಂಟಿ ಇಲ್ಲದೆ 3 ಲಕ್ಷ ರು.ವರೆಗೆ ಸಾಲವನ್ನು ನೀಡುತ್ತದೆ. ಬಡ್ಡಿದರವೂ ತುಂಬಾ ಕಡಿಮೆಯಾಗಿದೆ. ಪ್ರಾರಂಭದಲ್ಲಿ 1 ರು. ಲಕ್ಷ ಸಾಲವನ್ನು ನೀಡಲು ಸರ್ಕಾರ ನಿರ್ಧರಿಸಿದೆ ಮತ್ತು ಅದನ್ನು ಮರುಪಾವತಿಸಿದಾಗ, ಹೆಚ್ಚುವರಿ 2 ಲಕ್ಷ ರು. ಸಾಲವನ್ನು ನೀಡುತ್ತದೆ’ ಎಂದು ವಿವರಿಸಿದರು.

ಇದೇ ವೇಳೆ ವಸ್ತುಪ್ರದರ್ಶನಗಳ ಮಹತ್ವದ ಬಗ್ಗೆ ವಿವರಿಸಿದ ಅವರು, ‘ಭಾರತಕ್ಕೆ ಅನಿಯಮಿತ ಸಾಧ್ಯತೆಗಳನ್ನು ಹೊಂದಿರುವ ವಸ್ತುಪ್ರದರ್ಶನ ಪ್ರವಾಸೋದ್ಯಮವು (ಕಾನ್ಫರೆನ್ಸ್‌ ಟೂರಿಸಂ) ವಿಶ್ವದಲ್ಲಿ ಹೆಚ್ಚುತ್ತಿದೆ. ವಸ್ತುಪ್ರದರ್ಶನ ಪ್ರವಾಸೋದ್ಯಮವು ವಿಶ್ವದಲ್ಲಿ 25 ಲಕ್ಷ ಕೋಟಿ ರು.ಗಿಂತ ಹೆಚ್ಚು ಮೌಲ್ಯದ್ದಾಗಿದೆ. ಪ್ರಪಂಚದಲ್ಲಿ ಪ್ರತಿ ವರ್ಷ 32,000 ಕ್ಕೂ ಹೆಚ್ಚು ದೊಡ್ಡ ಪ್ರದರ್ಶನಗಳು ನಡೆಯುತ್ತವೆ. 2ರಿಂದ 5 ಕೋಟಿ ಜನಸಂಖ್ಯೆ ಇರುವ ದೇಶಗಳೂ ವಸ್ತಪ್ರದರ್ಶನ ಏರ್ಪಡಿಸುತ್ತವೆ. ನಮ್ಮ ಜನಸಂಖ್ಯೆ 140 ಕೋಟಿ. ನಮ್ಮಲ್ಲಿ ವಸ್ತುಪ್ರದರ್ಶನಕ್ಕೆಂದೇ ಬರುವ ಪ್ರವಾಸಿಗರು ಮಾಮೂಲಿ ಪ್ರವಾಸಿಗರಿಗಿಂತ ಹೆಚ್ಚು ಹಣ ವ್ಯಯಿಸುತ್ತಾರೆ. ಆದರೆ ವಸ್ತುಪ್ರದರ್ಶನಗಳಲ್ಲಿ ಭಾರತೀಯರ ಭಾಗವಹಿಸುವಿಕೆ ಕೇವಲ ಶೇ.1ರಷ್ಟು ಇದೆ. ಆದರೆ ಇನ್ನು ಮುಂದೆ ‘ನವ ಭಾರತ’ವು ವಸ್ತುಪ್ರದರ್ಶನ ಪ್ರವಾಸೋದ್ಯಮಕ್ಕೆ ತನ್ನನ್ನು ತಾನು ತೆರೆದುಕೊಳ್ಳಲಿದೆ. ಸರ್ಕಾರ ಇದಕ್ಕೆ ಪೂರಕ ವಾತಾವರಣ ನಿರ್ಮಿಸಲಿದೆ. ಭಾರತ ಮಂಟಪ ಮತ್ತು ಯಶೋಭೂಮಿ ಕೇಂದ್ರಗಳು ದೆಹಲಿಯನ್ನು ‘ವಸ್ತುಪ್ರದರ್ಶನ ಪ್ರವಾಸೋದ್ಯಮ’ದ ಅತಿದೊಡ್ಡ ಕೇಂದ್ರವನ್ನಾಗಿ ಮಾಡಲಿವೆ’ ಎಂದರು.

ಈ ಸಂದರ್ಭದಲ್ಲಿ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್‌ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉಪಸ್ಥಿತರಿದ್ದರು.

Follow Us:
Download App:
  • android
  • ios