ತಿರುವನಂತಪುರ [ಮಾ.08]: ಮಾರಕ ಕೊರೋನಾ ವೈರಸ್‌ ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿರುವಾಗಲೇ ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಕೋಳಿಕೋಡ್‌ ಜಿಲ್ಲೆಯ ಎರಡು ಪೌಲ್ಟಿ್ರ ಫಾಮ್‌ರ್‍ಗಳಲ್ಲಿ ಎಚ್‌5ಎನ್‌1 ವೈರಸ್‌ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸುಮಾರು 13 ಸಾವಿರ ಕೋಳಿಗಳನ್ನು ಕೊಲ್ಲಲು ಸರ್ಕಾರ ಸಿದ್ಧತೆಯಲ್ಲಿ ತೊಡಗಿದೆ.

ವಿಶ್ವಾದ್ಯಂತ 3500 ಮಂದಿಯನ್ನು ಬಲಿ ಪಡೆದಿರುವ ಕೊರೋನಾ ವೈರಸ್‌ ಭಾರತದಲ್ಲಿ ಮೊದಲ ಬಾರಿಗೆ ಕಂಡುಬಂದಿದ್ದು ಕೇರಳದಲ್ಲಿ. ರಾಜ್ಯದಲ್ಲಿ ಸೋಂಕಿಗೆ ತುತ್ತಾಗಿದ್ದ ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಕೆಲವೇ ದಿನಗಳ ಅಂತರದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವುದರಿಂದ ಸಹಜವಾಗಿಯೇ ಭೀತಿ ಕಂಡುಬರುತ್ತಿದೆ.

ಲ್ಯಾಬ್‌ ಪರೀಕ್ಷೆಯಲ್ಲೂ ದೃಢ:

ಕೋಳಿಕ್ಕೋಡ್‌ ಜಿಲ್ಲೆಯ ಕೊಡಿಯಾತೂರ್‌ ಹಾಗೂ ವೆಂಗೇರಿ ಗ್ರಾಮಗಳ ಎರಡು ಪೌಲ್ಟಿ್ರ ಫಾಮ್‌ರ್‍ಗಳಲ್ಲಿ ಹಲವಾರು ಕೋಳಿಗಳು ಸಾವಿಗೀಡಾಗಿದ್ದವು. ಈ ಹಿನ್ನೆಲೆಯಲ್ಲಿ ಮಾದರಿ ಸಂಗ್ರಹಿಸಿ ಭೋಪಾಲ್‌ನಲ್ಲಿರುವ ರಾಷ್ಟ್ರೀಯ ಪ್ರಾಣಿ ವ್ಯಾಧಿ ಸಂಸ್ಥೆಗೆ ರವಾನಿಸಲಾಗಿತ್ತು. ಅಲ್ಲಿಂದ ವರದಿ ಬಂದಿದ್ದು, ಎಚ್‌5ಎನ್‌1 ಸೋಂಕು ದೃಢಪಟ್ಟಿದೆ.

ಕೋಳಿ ಫಾಮ್‌ರ್‍ನಲ್ಲಿರುವ ಕೋಳಿಗಳು ಮಾತ್ರವೇ ಅಲ್ಲದೇ ಗ್ರಾಮದ ಆಸುಪಾಸಿನ ಕೋಳಿಗಳು ಹಾಗೂ ಇತರೆ ಹಕ್ಕಿಗಳನ್ನೂ ಕೊಲ್ಲಬೇಕಾಗುತ್ತದೆ. ಈಗಾಗಲೇ ಆರೋಗ್ಯ ಇಲಾಖೆ ತಲಾ 5 ಸದಸ್ಯರನ್ನು ಒಳಗೊಂಡ 25 ತಂಡಗಳನ್ನು ರಚನೆ ಮಾಡಿದ್ದು, ಪರಿಸ್ಥಿತಿ ನಿರ್ವಹಿಸುವ ಹೊಣೆಗಾರಿಕೆ ಕೊಟ್ಟಿದೆ. ಸೋಂಕು ಕಂಡುಬಂದಿರುವ ಪ್ರದೇಶದ 10 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವ ಎಲ್ಲರಿಗೂ ಈ ಕುರಿತು ಮಾಹಿತಿ ನೀಡಲಾಗಿದೆ.

ಗಾಜಿಯಾಬಾದ್‌ ವ್ಯಕ್ತಿಗೆ ಕೊರೋನಾ: 30ಕ್ಕೆ ಏರಿದ ಸೋಂಕು ಪೀಡಿತರ ಸಂಖ್ಯೆ!.

ಕೇರಳದಲ್ಲಿ ಎಚ್‌5ಎನ್‌1 ಕಂಡುಬರುತ್ತಿರುವುದು ಇದೇ ಮೊದಲಲ್ಲ. 2016ರಲ್ಲಿ ಆಲಪ್ಪುಳದಲ್ಲಿ ಹಕ್ಕಿ ಜ್ವರ ಕಂಡುಬಂದಿತ್ತು. ಸಾವಿರಾರು ಕೋಳಿಗಳನ್ನು ಕೊಲ್ಲಲಾಗಿತ್ತು. ನಷ್ಟಅನುಭವಿಸಿದ ರೈತರಿಗೆ ಸರ್ಕಾರದಿಂದ ಪರಿಹಾರ ಕೊಡಲಾಗಿತ್ತು. ಆದರೆ ಈ ಬಾರಿ ಕೊರೋನಾ ಉಪಟಳವಿರುವಾಗಲೇ ಈ ವೈರಸ್‌ ಬಾಧೆ ಕೂಡ ಕಂಡುಬಂದಿರುವುದರಿಂದ ಆತಂಕ ಹೆಚ್ಚಾಗಿದೆ.

ಹೆದರಬೇಕಿಲ್ಲ

ಹಕ್ಕಿ ಜ್ವರದ ಬಗ್ಗೆ ಹೆದರಬೇಕಿಲ್ಲ. ಬೇಸಿಗೆ ಬಂದಾಗ ಹಕ್ಕಿಗಳನ್ನು ಇಂತಹ ಕಾಯಿಲೆಗಳು ಕಾಡುತ್ತವೆ. ಪರಿಸ್ಥಿತಿ ನಿಯಂತ್ರಿಸಲು ಆರೋಗ್ಯ ಹಾಗೂ ಪಶು ಸಂಗೋಪನೆ ಇಲಾಖೆಯ ತಂಡಗಳನ್ನು ರಚಿಸಲಾಗಿದೆ. ಸೋಂಕು ಹರಡದಂತೆ ಆ ತಂಡಗಳು ಪ್ರಯತ್ನಿಸುತ್ತಿವೆ. ಕೋಳಿಗಳನ್ನು ಕೊಲ್ಲಲು ಎಲ್ಲ ವ್ಯವಸ್ಥೆ ಮಾಡಲಾಗಿದೆ.

- ಕೆ.ಕೆ. ಶೈಲಜಾ ಕೇರಳ ಆರೋಗ್ಯ ಸಚಿವೆ

ಏನಿದು ಹಕ್ಕಿ ಜ್ವರ? ಮನುಷ್ಯರಿಗೂ ಹಬ್ಬುತ್ತಾ?

ಎಚ್‌5ಎನ್‌1 ಎನ್ನುವುದು ಒಂದು ಬಗೆಯ ವೈರಸ್‌. ಇದನ್ನು ಹಕ್ಕಿ ಜ್ವರ ಎಂದೂ ಕರೆಯಲಾಗುತ್ತದೆ. ಹಕ್ಕಿಗಳ ಉಸಿರಾಟಕ್ಕೆ ಸಂಬಂಧಿಸಿದ ಸೋಂಕು ಇದಾಗಿದೆ. ಸೋಂಕು ತಗುಲಿದ ಅಥವಾ ಸೋಂಕಿನಿಂದ ಮೃತಪಟ್ಟಹಕ್ಕಿಯ ಜತೆ ಸಂಪರ್ಕಕ್ಕೆ ಬರುವ ಮಾನವರಿಗೂ ಈ ವೈರಸ್‌ ಹಬ್ಬುವ ಸಾಧ್ಯತೆ ಇರುತ್ತದೆ. ಆದರೆ ಅದು ವಿರಳ. ಅಲ್ಲದೆ ಮಾನವರಿಂದ ಮಾನವರಿಗೆ ಹರಡುವ ಸಾಧ್ಯತೆಯೂ ಕಡಿಮೆ. ಈ ಸೋಂಕಿಗೆ ತುತ್ತಾದ ಮಾನವರ ಸಾವಿನ ಪ್ರಮಾಣ ಶೇ.60ರಷ್ಟು.