: 2012ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಪ್ರಯಾಗ್‌ರಾಜ್‌ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರಿಗೆ ಲಖನೌ ನ್ಯಾಯಾಲಯ ಶುಕ್ರವಾರ ಆರು ತಿಂಗಳ ಜೈಲು ಶಿಕ್ಷೆ ಮತ್ತು 1,100 ರು. ದಂಡ ವಿಧಿಸಿದೆ.

ಲಖನೌ: 2012ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಪ್ರಯಾಗ್‌ರಾಜ್‌ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರಿಗೆ ಲಖನೌ ನ್ಯಾಯಾಲಯ ಶುಕ್ರವಾರ ಆರು ತಿಂಗಳ ಜೈಲು ಶಿಕ್ಷೆ ಮತ್ತು 1,100 ರು. ದಂಡ ವಿಧಿಸಿದೆ.

ಮೂಲತಃ ಕಾಂಗ್ರೆಸ್‌ ನಾಯಕಿಯಾಗಿದ್ದ ರೀಟಾ 2017ರ ವಿಧಾನಸಭೆ ಚುನಾವಣೆ ಮುನ್ನ ಬಿಜೆಪಿ ಸೇರಿ ಬಳಿಕ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈ ಮೊದಲು 2012ರ ವಿಧಾನಸಭೆ ಚುನಾವಣೆಯಲ್ಲಿ ರೀಟಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಆಗ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ, ಪ್ರಚಾರಕ್ಕೆ ತೆರೆಬಿದ್ದ ಮೇಲೂ ರೀಟಾ, ಕೃಷ್ಣನಗರದ ಬಜರಂಗನಗರ ಪ್ರದೇಶದಲ್ಲಿ ಬಹಿರಂಗ ಸಾರ್ವಜನಿಕ ಪ್ರಚಾರ ಸಭೆ ನಡೆಸಿದ್ದರು. ಇದೇ ಆರೋಪದಡಿ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲೀಗ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 2012ರಲ್ಲೇ ರೀಟಾ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಲಾಗಿತ್ತು. ಬಳಿಕ 2021ರಲ್ಲಿ ರೀಟಾರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ನಂತರ 20,000 ರು. ಬಾಂಡ್ ಮತ್ತು ಶ್ಯೂರಿಟಿ ಮೇರೆಗೆ ರೀಟಾರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಬಾರೀ ಹೈಡ್ರಾಮಾ : ಕೇಜ್ರಿವಾಲ್ ಮನೇಲಿ 5 ತಾಸು ಕಾದು ನೋಟಿಸ್‌ ಕೊಟ್ಟ ಪೊಲೀಸ್‌

ನವದೆಹಲಿ: ತಲಾ 25 ಕೋಟಿ ರು. ಆಫರ್‌ ನೀಡುವ ಮೂಲಕ 7 ಆಪ್‌ ಶಾಸಕರನ್ನು ಬಿಜೆಪಿ ಖರೀದಿಸುತ್ತಿದೆ ಎಂದು ಆರೋಪ ಹೊರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್‌ ನಾಯಕ ಅರವಿಂದ್‌ ಕೇಜ್ರಿವಾಲ್‌ಗೆ ನೋಟಿಸ್‌ ನೀಡಲು ದಿಲ್ಲಿ ಪೊಲೀಸರು ಐದು ಗಂಟೆಗಳ ಕಾಲ ಕಾದು ಕುಳಿತ ಹೈಡ್ರಾಮಾ ನಡೆದಿದೆ.

ನೋಟಿಸ್‌ ನೀಡಲು ಶುಕ್ರವಾರವೇ ಕೇಜ್ರಿವಾಲ್‌ ಮನೆಗೆ ಆಗಮಿಸಿದ್ದ ಪೊಲೀಸರು, ಕೇಜ್ರಿವಾಲ್‌ ಮನೆಯಲ್ಲಿಲ್ಲದ ಕಾರಣಕ್ಕೆ ನೋಟಿಸ್‌ ನೀಡದೇ ಹಿಂದಿರುಗಿದ್ದರು. ಖುದ್ದು ಕೇಜ್ರಿವಾಲ್‌ಗೇ ನೋಟಿಸ್‌ ಹಸ್ತಾಂತರಿಸುವ ಉದ್ದೇಶದಿಂದ ಮತ್ತೆ ಶನಿವಾರ ಅವರ ನಿವಾಸಕ್ಕೆ ಆಗಮಿಸಿದ್ದ ಪೊಲೀಸರು ಐದು ಗಂಟೆಗಳ ಕಾಲ ಅವರಿಗಾಗಿ ಕಾದ ಬಳಿಕ ನೋಟಿಸ್‌ ನೀಡಿ ತೆರಳಿದ್ದಾರೆ.

ಆಪ್‌ ಶಾಸಕರನ್ನು ಬಿಜೆಪಿ ಖರೀದಿಸುತ್ತಿದೆ ಎಂಬ ಕೇಜ್ರಿವಾಲ್‌ ಆರೋಪ ಸುಳ್ಳು ಎಂದು ಬಿಜೆಪಿ ದೂರು ನೀಡಿತ್ತು. ಈ ಪ್ರಕರಣದಲ್ಲಿ ನೋಟಿಸ್‌ ನೀಡಲಾಗಿದೆ. ಶುಕ್ರವಾರವೇ ಕೇಜ್ರಿವಾಲ್‌ಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ ಎನ್ನಲಾಗಿತ್ತಾದರೂ, ಅವರು ನೋಟಿಸ್‌ ನೀಡದೇ ಹಿಂದಿರುಗಿದ್ದರು ಎಂಬುದು ಶನಿವಾರ ತಿಳಿದು ಬಂದಿದೆ.

ಪೇಟಿಎಂಗೆ ಇ.ಡಿ. ಬಿಸಿ: ಅಕ್ರಮ ಹಣ ವರ್ಗ ಬಗ್ಗೆ ತನಿಖೆ ಸಾಧ್ಯತೆ

ನವದೆಹಲಿ: ಆರ್‌ಬಿಐನಿಂದ ಹಲವು ನಿರ್ಬಂಧಕ್ಕೆ ಒಳಗಾಗಿರುವ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಶನಿವಾರ ಮತ್ತೊಂದು ಆಘಾತವಾಗಿದೆ. ಪೇಮೆಂಟ್ಸ್‌ ಬ್ಯಾಂಕ್‌ನಿಂದ ಹಣದ ಸೈಫೋನಿಂಗ್‌ (ದುರುದ್ದೇಶಕ್ಕಾಗಿ ಗ್ರಾಹಕರ ಹಣ ಬಳಕೆ) ನಡೆದಿದ್ದ ಪಕ್ಷದಲ್ಲಿ, ಆ ಕುರಿತು ಜಾರಿ ನಿರ್ದೇಶನಾಲಯದಿಂದ (ಇ.ಡಿ.) ತನಿಖೆ ನಡೆಸಲಾಗುವುದು ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಸಂಜಯ್‌ ಮಲ್ಹೋತ್ರಾ ತಿಳಿಸಿದ್ದಾರೆ.

ಈ ಕುರಿತು ರಾಯಿಟರ್ಸ್‌ ಸುದ್ದಿಸಂಸ್ಥೆಗೆ ತಿಳಿಸಿರುವ ಅವರು, ‘ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಫೆ.29ರ ಬಳಿಕ ಯಾವುದೇ ಹೊಸ ಹೂಡಿಕೆಗಳನ್ನು ಸ್ವೀಕರಿಸದಂತೆ ಸೂಚಿಸಲಾಗಿದೆ. ಆದಾಗ್ಯೂ ಬ್ಯಾಂಕ್‌ ವತಿಯಿಂದ ಹಣದ ಸೈಫೋನಿಂಗ್‌ ನಡೆದರೆ ಇಡಿಯಿಂದ ತನಿಖೆ ನಡೆಸಿ ಕಾನೂನು ರೀತ್ಯಾ ಇ.ಡಿ. ಕ್ರಮ ಕೈಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.