* ಕರ್ನಾಟಕ-ತಮಿಳ್ನಾಡು ಗಡಿಯಲ್ಲಿ ನಕ್ಸಲ್ ಚಟುವಟಿಕೆ* ತಮಿಳುನಾಡು ಮುಖಾಂತರ ಸತ್ಯಮಂಗಲ ಹುಲಿ ರಕ್ಷಿತಾರಣ್ಯ ಪ್ರದೇಶ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಚಟುವಟಿಕೆ* ಚಾಮರಾಜನಗರ ಗಡಿಭಾಗದಲ್ಲಿ ಭದ್ರತೆ ಹೆಚ್ಚಳ
ಈರೋಡ್(ಜೂ.17): ತಮಿಳುನಾಡು ಮುಖಾಂತರ ಸತ್ಯಮಂಗಲ ಹುಲಿ ರಕ್ಷಿತಾರಣ್ಯ ಪ್ರದೇಶ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಮಾವೋವಾದಿ(ನಕ್ಸಲರು)ಗಳ ಚಟುವಟಿಕೆಗಳು ಹೆಚ್ಚುತ್ತಿವೆ ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು-ಕರ್ನಾಟಕ ಗಡಿ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.
ಮಾವೋವಾದಿಗಳ ನುಸುಳುವಿಕೆ ತಡೆಯಲು ಕರ್ನಾಟಕ ಮತ್ತು ತಮಿಳುನಾಡಿನ ಗಡಿ ಪ್ರದೇಶಗಳಾದ ತಾಳವಾಡಿ, ಹಸ್ಸನೂರ್, ಭವಾನಿಸಾಗರ, ಕಡಂಬೂರು ಮತ್ತು ಬರಗೂರು ಪೊಲೀಸ್ ಠಾಣೆಗಳಲ್ಲಿ ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಬುಧವಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಲ್ಲದೆ ಈರೋಡ್ ಜಿಲ್ಲೆಯ ಅರಣ್ಯಗಳಿಂದ ನಕ್ಸಲೀಯರು ನುಸುಳದಂತೆ ತಮಿಳುನಾಡು-ಕರ್ನಾಟಕದ ಗಡಿಯ 10 ಚೆಕ್ಪೋಸ್ಟ್ಗಳಲ್ಲಿ ದಿನದ 24 ಗಂಟೆಯೂ ಗಸ್ತು ತಿರುಗಲು ಹೆಚ್ಚುವರಿ ಸಶಸ್ತ್ರಪಡೆಗಳನ್ನು ನಿಯೋಜಿಸಲಾಗಿದೆ. ಜೊತೆಗೆ ವಿಶೇಷ ತರಬೇತಿ ಪಡೆದ ಕಮಾಂಡೋ ಸಿಬ್ಬಂದಿಯನ್ನು ಸಶಸ್ತ್ರ ಮೀಸಲು ಪೊಲೀಸ್ ಪಡೆಯಿಂದ ಆಯ್ಕೆ ಮಾಡಲಾಗಿದ್ದು, ಅವರನ್ನು ಪೊಲೀಸರ ಜತೆ ಅರಣ್ಯಗಳಿಗೆ ರವಾನಿಸಲಾಗುತ್ತದೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ವಿ. ಶಶಿಮೋಹನ್ ತಿಳಿಸಿದ್ದಾರೆ.
