ಭಾರಿ ಮಳೆ, ದಿಢೀರ್ ಪ್ರವಾಹ ಪರಿಸ್ಥಿತಿ ಸುಂದರ ಪ್ರವಾಸವನ್ನು ದುರಂತ ಮಾಡುವ ಸಾಧ್ಯತೆ ಹೆಚ್ಚು.ಹೀಗೆ ಜಲಪಾತ ವೀಕ್ಷಿಸಲು ತೆರಳಿದ್ದ 6 ಯುವತಿರು ಏಕಾಏಕಿ ಹೆಚ್ಚಾದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಜಲಪಾತದ ಅಂಚಿನಿಂದ ಯುವತಿಯರ ರಕ್ಷಿಸಲಾಗಿದೆ. ವಿಡಿಯೋ ಇಲ್ಲಿದೆ.

ಪಾಟ್ನಾ (ಜೂ. 30) ದೇಶದ ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಮಳೆ, ಗುಡ್ಡ ಕುಸಿತ, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ಆತಂಕದ ಪರಿಸ್ಥಿತಿ ಎದುರಾಗಿದೆ. ಮಳೆಗಾಲದಲ್ಲಿ ಜಲಪಾತ,ಪ್ರಕೃತಿ ಸೌಂದರ್ಯ ಆಸ್ವಾದಿಸಲು ತೆರಳುವ ಪ್ರವಾಸಿಗರು ಅತೀವ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಕಾರಣ ಜಲಪಾತ ವೀಕ್ಷಿಸಲು ತೆರಳಿದ್ದ 6 ಯುವತಿಯರ ಏಕಾಏಕಿ ನೀರು ಹೆಚ್ಚಾಗಿ ಕೊಚ್ಚಿ ಹೋದ ಘಟನೆ ನಡೆದಿದೆ. ಇನ್ನೇನು ಜಲಪಾತದ ಅಂಚಿನಿಂದ ಪ್ರಪಾತಕ್ಕೆ ಬೀಳಬೇಕು ಅನ್ನುವಷ್ಟರಲ್ಲೇ ಸ್ಥಳೀಯರು ಯುವತಿಯರನ್ನು ರಕ್ಷಿಸಿದ್ದಾರೆ. ಈ ರೋಚಕ ವಿಡಿಯೋ ವೈರಲ್ ಆಗಿದೆ.

ನೀರಿನಲ್ಲಿ ಆಟವಾಡುತ್ತಿರುವಾಗ ಪ್ರವಾಹ ಪರಿಸ್ಥಿತಿ ನಿರ್ಮಾಣ

ಈ ಘಟನೆ ನಡೆದಿರುವುದು ಬಿಹಾರದ ಗಯಾ ಜಿಲ್ಲೆಯಲ್ಲಿರುವ ಲಂಗುರಿಯಾ ಬೆಟ್ಟದ ಜಲಪಾತದ ಬಳಿ ನಡೆದಿದೆ. ಇದು ಪ್ರವಾಸಿ ತಾಣ. ಪ್ರತಿ ದಿನ ಜಲಾಪತ ವೀಕ್ಷಿಸಲು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಹೀಗೆ ಯುವತಿಯರು ತೆರಳಿದ್ದಾರೆ. ಜಲಪಾತದ ಮೇಲ್ಬಾಗದಲ್ಲಿ ನೀರಿಗಿಳಿದು ಆಟವಾಡಲು ಶುರು ಮಾಡಿದ್ದಾರೆ. ಆದರ ಏಕಾಏಕಿ ನದಿಯ ನೀರಿನ ಮಟ್ಟ ಹೆಚ್ಚಾಗಿದೆ. ಒಂದೇ ಭಾರಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಹರಿವು ಹೆಚ್ಚಾಗಿದೆ.

Scroll to load tweet…

ಸಾವಿನ ದವಡೆಯಿಂದ ಪಾರಾದ ಯುವತಿಯರು

ದಿಢೀರ್ ನೀರು ಹೆಚ್ಚಾದ ಕಾರಣ ಯುವತಿಯರು ಆತಂಕಗೊಂಡಿದ್ದಾರೆ. ಇತ್ತ ದಡ ಸೇರುವುದು ಅಸಾಧ್ಯವಾಗಿದೆ. ಒರ್ವ ಯುವತಿ ಕಲ್ಲಿನಿಂದ ಕಲ್ಲಿಗೆ ಹಾರಿದ್ದಾಳೆ. ಈ ವೇಳೆ ಸ್ಥಳೀಯರು ಆಕೆಯನ್ನು ಹಿಡಿದು ರಕ್ಷಿಸಿದ್ದಾರೆ. ಆದರೆ ಇದೇ ರೀತಿ ಮತ್ತೆ ಮೂವರು ಯುವತಿಯರು ಕಲ್ಲಿನಿಂದ ಜಿಗಿಯಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಕಾರಣ ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆ ಕೊಚ್ಚಿ ಹೋಗಿದ್ದಾರೆ. ಭಾರಿ ರಭಸದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಈ ಮವರು ಯುವತಿಯರು ಜಲಪಾತದ ಬಳಿ ತಲುಪಿದ್ದಾರೆ. ಕೆಲವೇ ಮೀಟರ್ ದೂರದಲ್ಲಿ ಜಲಪಾತ ಪ್ರಪಾತಕ್ಕೆ ಧಮುಕಲಿದೆ. ಇದಕ್ಕೂ ಮುನ್ನ ಸ್ಥಲೀಯರು ಈ ಮೂವರು ಯುವತಿಯರನ್ನು ರಕ್ಷಿಸಿದ್ದಾರೆ.

ಇನ್ನು 5ನೇ ಯುವತಿಯನ್ನು ನದಿಯ ಮತ್ತೊಂದು ಬದಿಯಿಂದ ರಕ್ಷಿಸಲಾಗಿದೆ. ಇದೇ ವೇಳೆ 6ನೇ ಯುವತಿ ಕಲ್ಲನ್ನು ಗಟ್ಟಿಯಾಗಿ ಹಿಡಿದು ನಿಂತಿದ್ದಾಳೆ. ನೀರಿನ ರಭಸ ಹೆಚ್ಚಾದ ಕಾರಣ ಸ್ಥಳೀಯರು ಕೆಲ ನಿಮಿಷಗಳ ಕಾರ್ಯಾಚರಣೆ ನಡೆಸಿ 6ನೇ ಯುವತಿಯನ್ನು ರಕ್ಷಿಸಿದ್ದಾರೆ. ಈ ಮೂಲಕ 6 ಯುವತಿಯರ ಪ್ರಾಣ ಉಳಿದಿದೆ. ಯುವತಿಯರು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಹಾಗೂ ರಕ್ಷಣೆ ಮಾಡುತ್ತಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇದೇ ಮೊದಲ ಬಾರಿಗೆ ನೀರು ಈ ಪ್ರಮಾಣದಲ್ಲಿ ಏರಿಕೆ

ಲಂಗುರಿಯಾ ಬೆಟ್ಟದ ಜಲಪಾತ ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಜಲಪಾತ ಮೇಲೆ ನೀರಿನಲ್ಲಿ ಆಟವಾಡುತ್ತಾ ಕಾಲ ಕಳೆಯಲು ಹಲವರು ಇಲ್ಲಿಗೆ ಆಗಮಿಸುತ್ತಾರೆ. ಬೆಟ್ಟದ ಮೇಲಿನಿಂದ ನೀರು ಹರಿದು ಬರುತ್ತದೆ. ಸ್ಥಳೀಯರ ಪ್ರಕಾರ ಇದೇ ಮೊದಲ ಬಾರಿಗೆ ಈ ರೀತಿ ಏಕಾಏಕಿ ನೀರು ಏರಿಕೆಯಾಗಿದೆ. ಇಷ್ಟು ವರ್ಷಗಳಲ್ಲಿ ಜುಲೈ ಆಗಸ್ಟ್ ತಿಂಗಳಳಲ್ಲಿ ಭಾರಿ ಮಳೆಯಾಗುವ ಸಮಯದಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತದೆ. ಆದರೆ ಈ ಬಾರಿ ಜಲಪಾತ ಹಾಗೂ ಸುತ್ತ ಮುತ್ತ ಹೆಚ್ಚಿನ ಮಳೆಯಾಗದಿದ್ದರೂ ಏಕಾಏಕಿ ನೀರು ಏರಿಕೆಯಾಗಿದೆ. ಈ ರೀತಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು ಇದೇ ಮೊದಲು ಎಂದು ಸ್ಥಳೀಯರು ಹೇಳಿದ್ದಾರೆ.

ಮಕ್ಕಳು ಸೇರಿದಂತೆ ಹಲವರು ನೀರಿನಲ್ಲಿ ಆಟವಾಡುತ್ತಿದ್ದರು. ಈ ಪ್ರವಾಹಕ್ಕೂ ಕೆಲವೇ ನಿಮಿಷಗಳ ಮೊದಲು ಕೆಲ ಮಕ್ಕಳು ನೀರಿನಿಂದ ಎದ್ದು ದಡ ಸೇರಿದ್ದರು. ಆದರೆ ಕೆಲ ಯುವತಿಯರು ನೀರಿನಲ್ಲೇ ಆಟವಾಡುತ್ತಿದ್ದರು. ಈ ರೀತಿ ನೀರು ಏರಿಕೆಯಾಗುತ್ತೆ ಅನ್ನೋ ಯಾವುದೇ ಸುಳಿವು ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.