ಮಹಾಕುಂಭ ಮೇಳದಲ್ಲಿ ಭಕ್ತರಿಗಾಗಿ ಸಿದ್ಧಪಡಿಸಿದ್ದ ಆಹಾರದಲ್ಲಿ ಪೊಲೀಸ್ ಅಧಿಕಾರಿ ಮಣ್ಣು ಮತ್ತು ಬೂದಿ ಸೇರಿಸಿರುವ ವಿಡಿಯೋ ವೈರಲ್ ಆಗಿದೆ.
ಪ್ರಯಾಗ್‌ರಾಜ್: ಮಹಾಕುಂಭ ಮೇಳದಲ್ಲಿ ಭಾಗಿಯಾಗಲು ಆಗಮಿಸುವ ಭಕ್ತರಿಗಾಗಿ ಸಿದ್ಧಪಡಿಸಿದ್ದ ಆಹಾರದಲ್ಲಿ ಪೊಲೀಸ್ ಅಧಿಕಾರಿ ಮಣ್ಣು ಮತ್ತು ಬೂದಿ ಸೇರಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಂಗಮ ಕ್ಷೇತ್ರದಲ್ಲಿ ಪುಣ್ಯ ಸ್ನಾನ ಮಾಡಲು ಜನರು ಪ್ರಯಾಗ್‌ರಾಜ್‌ಗಾಗಿ ಆಗಮಿಸುತ್ತಿರುವ ಹಿನ್ನೆಲೆ ಸಂಘ-ಸಂಸ್ಥೆಗಳು, ಸ್ಥಳೀಯರು ಭಕ್ತರಿಗಾಗಿ ಉಚಿತವಾಗಿ ಆಹಾರ ವಿತರಣೆ ಮಾಡುತ್ತಿದ್ದಾರೆ. ಇದೇ ರೀತಿಯಲ್ಲಿ ಸಿದ್ಧಪಡಿಸಲಾಗಿದ್ದ ಆಹಾರವನ್ನು ಪೊಲೀಸ್ ಅಧಿಕಾರಿ ಹಾಳು ಮಾಡಿದ್ದಾನೆ. ಈ ಘಟನೆ ಪ್ರಯಾಗ್‌ರಾಜ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಬೆನ್ನಲ್ಲೇ ಆಹಾರ ಕೆಡಸಿದ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ಅಮಾನುತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಪ್ರಯಾಗ್‌ರಾಜ್‌ಗೆ ಪ್ರತಿನಿತ್ಯ ಕೋಟ್ಯಂತರ ಭಕ್ತರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಪ್ರಯಾಗ್‌ರಾಜ್ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಜನರು ಉಚಿತವಾಗಿ ಆಹಾರ ವಿತರಿಸುತ್ತಿದ್ದಾರೆ. ಈ ಹಿನ್ನೆಲೆ ರಸ್ತೆ ಬದಿಯಲ್ಲಿ ಒಲೆಗಳನ್ನು ಹಾಕಿಕೊಂಡು ದೊಡ್ಡ ಪ್ರಮಾಣದಲ್ಲಿ ಆಹಾರ ಸಿದ್ಧಪಡಿಸಲಾಗುತ್ತಿದೆ. ಇದೇ ರೀತಿ ಸಿದ್ಧಪಡಿಸಿದ್ದ ಆಹಾರದಲ್ಲಿ ಪೊಲೀಸ್ ಅಧಿಕಾರಿ, ಮಣ್ಣು ಮತ್ತು ಬೂದಿಯನ್ನು ಹಾಕಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಪೊಲೀಸ್ ಅಧಿಕಾರಿಯ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ವೈರಲ್ ಆಗಿರುವ ವಿಡಿಯೋವನ್ನು ಹಂಚಿಕೊಂಡಿರುವ ಉತ್ತರ ಪ್ರದೇಶದ ಮಾಜಿ ಸಿಎಂ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಇದೊಂದು ದೌರ್ಭಾಗ್ಯ, ಮಹಾಕುಂಭ ಮೇಳಕ್ಕೆ ಆಗಮಿಸಿದ ಭಕ್ತರಿಗಾಗಿ ಜನರು ಉಚಿತವಾಗಿ ಆಹಾರ-ನೀರು ವಿತರಣೆ ಮಾಡುತ್ತಿದ್ದಾರೆ. ಮಹಾಕುಂಭದಲ್ಲಿ ಸಿಲುಕಿರುವ ಜನರಿಗೆ ಅನ್ನ-ನೀರಿನ ವ್ಯವಸ್ಥೆ ಮಾಡುತ್ತಿರುವವರ ಸದುದ್ದೇಶದ ರಾಜಕೀಯ ವೈಷಮ್ಯದಿಂದ ಹಾಳುಗೆಡವುತ್ತಿರುವುದು ವಿಷಾದನೀಯ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ ಕುಂಭಮೇಳದ ತಯಾರಿ ಪರಿಶೀಲಿಸಿದ ಸಿಎಂ ಯೋಗಿ
ಪ್ರಯಾಗ್‌ರಾಜ್-ಪ್ರತಾಪ್‌ಗಢ ಮಾರ್ಗದಲ್ಲಿ ಚತುರಿ ಗ್ರಾಮದ ಸೋರಾಂವ್ ಮಲಕ್ ಎಂಬವರು ಸ್ಥಳೀಯರ ಸಹಾಯದಿಂದ ಮಹಾಕುಂಭದ ಭಕ್ತರಿಗಾಗಿ ಮೂರು ದೊಡ್ಡ ಪಾತ್ರೆಗಳಲ್ಲಿ ಆಹಾರ ಸಿದ್ಧಪಡಿಸಿದ್ದರು. ಒಂದು ಕಡೆ ಆಹಾರ ತಯಾರಿಕೆ ಕೆಲಸ ನಡೆಯುತ್ತಿದ್ದರೆ, ಮತ್ತೊಂದು ಕಡೆ ಭಕ್ತರು ಆಹಾರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಪೊಲೀಸರು ಆಹಾರ ತಯಾರಿಸೋದನ್ನು ನಿಲ್ಲಿಸುವಂತೆ ಹೇಳಿದ್ದಾರೆ.
ಆಹಾರ ತಯಾರಿಕೆ ಮತ್ತು ವಿತರಣೆಯಿಂದಾಗಿ ಮಾರ್ಗ ಮಧ್ಯೆ ಟ್ರಾಫಿಕ್ ಜಾಮ್ ಉಂಟಾಗುತ್ತೆ ಎಂಬುವುದು ಪೊಲೀಸರ ವಾದವಾಗಿತ್ತು. ಆದ್ರೆ ಗ್ರಾಮಸ್ಥರು ಪೊಲೀಸರ ಮಾತನ್ನು ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ಪೊಲೀಸ್ ಅಧಿಕಾರಿ ಆಹಾರದಲ್ಲಿ ಮಣ್ಣು ಮತ್ತು ಬೂದಿ ಹಾಕುವ ಮೂಲಕ ದರ್ಪ ಮೆರೆದಿದ್ದಾನೆ. ಪೊಲೀಸ್ ಅಧಿಕಾರಿಯ ಈ ವರ್ತನೆ ಕಂಡು ಸ್ಥಳೀಯರೆಲ್ಲರೂ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಕೋಟಿ ಮೌಲ್ಯದ ಪರ್ಫ್ಯೂಮ್ ಉದ್ಯಮ ಬಿಟ್ಟು, ಸನ್ಯಾಸತ್ವ ಪಡೆದ ಜಲಂಧರ್‌ನ ಸ್ವಾಮಿ ಅನಂತ ಗಿರಿ
