ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷದ್‌ ದೇಣಿಗೆ ಸಂಗ್ರಹ| ಜ.15ರಿಂದ ರಾಮಮಂದಿರಕ್ಕೆ ದೇಣಿಗೆ ಸಂಗ್ರಹ: ವಿಎಚ್‌ಪಿ| 20 ಸಾವಿರಕ್ಕಿಂತ ಹೆಚ್ಚು ದೇಣಿಗೆ ನೀಡಲು ಬಯಸುವವರು ಚೆಕ್‌ ಮೂಲಕ ಹಣ ಪಾವತಿಸಬೇಕು

ನವದೆಹಲಿ(ಡಿ.30): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷದ್‌ ಜ.15ರಿಂದ ದೇಣಿಗೆ ಸಂಗ್ರಹ ಅಭಿಯಾನವನ್ನು ಆರಂಭಿಸಲಿದೆ. ರಾಮ ಮಂದಿರಕ್ಕೆ ಜನರು ಸ್ವ ಇಚ್ಛೆಯಿಂದ ಎಷ್ಟುಬೇಕಾದರೂ ದೇಣಿಗೆ ನೀಡಬಹುದಾಗಿದ್ದು, 20 ಸಾವಿರಕ್ಕಿಂತ ಹೆಚ್ಚು ದೇಣಿಗೆ ನೀಡಲು ಬಯಸುವವರು ಚೆಕ್‌ ಮೂಲಕ ಹಣ ಪಾವತಿಸಬೇಕು.

ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ವಿಎಚ್‌ಪಿಯ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌, ದೇಶದ 5,25,000 ಹಳ್ಳಿಗಳಲ್ಲಿ ದೇಣಿಗೆ ಸಂಗ್ರಹ ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ. ಪಾರದರ್ಶಕ ವಿಧಾನದ ಮೂಲಕ ಮಂದಿರಕ್ಕೆ ಹಣ ಸಂಗ್ರಹಿಸಲಾಗುವುದು. ದೇಣಿಗೆ ಸಂಗ್ರಹಕ್ಕೆ ನಿಯೋಜನೆಗೊಂಡಿರುವ ತಂಡಗಳು 48 ಗಂಟೆಗಳ ಒಳಗಾಗಿ ಹಣವನ್ನು ಬ್ಯಾಂಕ್‌ ಖಾತೆಗಳಿಗೆ ಠೇವಣಿ ಮಾಡಲಿವೆ. 5 ಮಂದಿ ಸ್ವಯಂ ಸೇವಕರನ್ನು ಒಳಗೊಂಡ ತಂಡಗಳು ಜ.15ರಿಂದ ಫೆ.27ರವರೆಗೆ ದೇಣಿಗೆ ಸಂಗ್ರಹ ಅಭಿಯಾನ ನಡೆಸಲಿವೆ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ನ ಅಂಗ ಸಂಸ್ಥೆ ಆಗಿರುವ ವಿಎಚ್‌ಪಿ ರಾಮ ಮಂದಿರ ನಿರ್ಮಾಣಕ್ಕಾಗಿ ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದೆ.