ನವದೆಹಲಿ[ಫೆ.22]: ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ), 3 ದಶಕದ ಹಿಂದೆ ಸಿದ್ಧಪಡಿಸಿದ್ದ ಪ್ರಸ್ತಾವಿತ ಅಯೋಧ್ಯಾ ರಾಮಮಂದಿರ ಕಟ್ಟಡದ ನೀಲನಕ್ಷೆಯನ್ನು ಕೇಂದ್ರ ಸರ್ಕಾರದಿಂದ ರಚಿತವಾಗಿರುವ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಬದಲಿಸುವ ಸಾಧ್ಯತೆ ಇದೆ. ಮಂದಿರದ ಎತ್ತರ ಹೆಚ್ಚಿಸುವ ಉದ್ದೇಶದಿಂದ ಈ ಬದಲಾವಣೆ ಮಾಡುವ ಇರಾದೆಯನ್ನು ಟ್ರಸ್ಟ್‌ ಹೊಂದಿದೆ.

ವಿಎಚ್‌ಪಿ ನೀಡಿದ ನೀಲನಕ್ಷೆಯಲ್ಲಿ ಮಂದಿರದ ಎತ್ತರ 125 ಅಡಿ ಇತ್ತು. ಇದನ್ನು 160 ಅಡಿಗೆ ಏರಿಸುವ ಉದ್ದೇಶ ಇರಿಸಿಕೊಳ್ಳಲಾಗಿದೆ. ಈ ಬಗ್ಗೆ ಮಂದಿರ ನಿರ್ಮಾಣ ಸಮಿತಿ ನೂತನ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರನ್ನು ಭೇಟಿಯಾದ ಟ್ರಸ್ಟ್‌ನ ಸದಸ್ಯರಾದ ಚಂಪತ್‌ ರಾಯ್‌, ವಿಮಲೇಂದ್ರ ಮಿಶ್ರಾ ಹಾಗೂ ಅನಿಲ್‌ ಮಿಶ್ರಾ ಅವರು ಗುರುವಾರ ಚರ್ಚೆ ನಡೆಸಿದರು.

‘ನೃಪೇಂದ್ರ ಮಿಶ್ರಾ ಅವರು ಇದೇ ವಿಚಾರವಾಗಿ ತಜ್ಞರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಬಳಿಕ ಮಂದಿರದ ವಿನ್ಯಾಸ, ಯೋಜನೆ ಹಾಗೂ ನಿರ್ಮಾಣ ಆರಂಭದ ದಿನಾಂಕ ಅಂತಿಮಗೊಳಿಸಲಾಗುವುದು’ ಎಂದು ಟ್ರಸ್ಟ್‌ ಮೂಲಗಳು ಹೇಳಿವೆ.

ಎರಡು ಅಂತಸ್ತಿನ ಬದಲು 3 ಅಂತಸ್ತಿನ ಮಂದಿರ ನಿರ್ಮಾಣದ ಬಗ್ಗೆ ಚರ್ಚಿಸಲಾಗುತ್ತಿದೆ ಹಾಗೂ ಶಿಖರದ ಎತ್ತರ 35 ಅಡಿ ಎತ್ತರ ಇರಬಹುದು ಎಂದು ಟ್ರಸ್ಟ್‌ ಸದಸ್ಯರೊಬ್ಬರು ಹೇಳಿದ್ದಾರೆ. ನಿರ್ಮಾಣಕ್ಕೆ 1.75 ಲಕ್ಷ ಕ್ಯೂಬಿಕ್‌ ಅಡಿ ಕಲ್ಲು ಬೇಕಾಗುತ್ತದೆ. ವಿಷ್ಣುವಿನ ಮೆಚ್ಚಿನ ಅಷ್ಟಭುಜಾಕೃತಿಯ ಮಂದಿರ ಇದಾಗಲಿದೆ.

ಆದರೆ ತನ್ನ ಮೂಲ ವಿನ್ಯಾಸ ಬದಲಿಸುವ ಬಗ್ಗೆ ವಿಎಚ್‌ಪಿ ಆಕ್ಷೇಪ ಹೊಂದಿದೆ. ವಿನ್ಯಾಸ ಬದಲಿಸಿದರೆ ಮಂದಿರ ನಿರ್ಮಾಣ ವಿಳಂಬಾಗುತ್ತದೆ ಎಂಬುದು ವಿಎಚ್‌ಪಿ ಅನಿಸಿಕೆ.

ವಿಎಚ್‌ಪಿ ಪ್ರಸ್ತಾವದ ಪ್ರಕಾರ 270 ಅಡಿ ಉದ್ದ, 135 ಅಡಿ ಅಗಲ ಹಾಗೂ 125 ಅಡಿ ಎತ್ತರದ ಮಂದಿರ ಇರಬೇಕು. ಪ್ರತಿ ಅಂತಸ್ತಿನಲ್ಲಿ 106 ಕಂಬ ಹಾಗೂ 185 ಬೀಮ್‌ಗಳಿರಬೇಕು. ಮಂದಿರದ ಬಾಗಿಲು ಕಟ್ಟಿಗೆಯದ್ದಾಗಿರಬೇಕು ಹಾಗೂ ಅಮೃತಶಿಲೆಯ ಚೌಕಟ್ಟು ಹೊಂದಿರಬೇಕು. ನೆಲಮಹಡಿಯಲ್ಲಿ ರಾಮನ ವಿಗ್ರಹ, ಮೊದಲ ಅಂತಸ್ತಿನಲ್ಲಿ ರಾಮನ ದರ್ಬಾರು ಇರಬೇಕು. ಮಂದಿರ 5 ದ್ವಾರ ಹೊಂದಿರಬೇಕು.