ದೇಶದ 13 ರಾಜ್ಯಗಳಲ್ಲೀಗ ವಂದೇ ಭಾರತ್ ರೈಲು ಸೇವೆ
ಮಧ್ಯಪ್ರದೇಶದ ಕಮಲಾಪತಿ ರೈಲು ನಿಲ್ದಾಣದಲ್ಲಿ ಭೋಪಾಲ್-ದೆಹಲಿ ವಂದೇಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು.
ಭೋಪಾಲ್: ಮಧ್ಯಪ್ರದೇಶದ ಕಮಲಾಪತಿ ರೈಲು ನಿಲ್ದಾಣದಲ್ಲಿ ಭೋಪಾಲ್-ದೆಹಲಿ ವಂದೇಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು. ಇದರಿಂದಾಗಿ ದೇಶಕ್ಕೆ 11ನೇ ವಂದೇಭಾರತ್ ರೈಲು ಸೇರ್ಪಡೆ ಆದಂತಾಗಿದೆ. ದೇಶದ ಅತಿವೇಗದ ರೈಲು ಎಂಬ ಹೆಗ್ಗಳಿಕೆಯನ್ನು ‘ವಂದೇಭಾರತ್’ ಹೊಂದಿದ್ದು, 13 ರಾಜ್ಯಗಳಿಗೆ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಭೋಪಾಲ್-ದಿಲ್ಲಿ ವಂದೇಭಾರತ್ ರೈಲು ಗಂಟೆಗೆ ಗರಿಷ್ಠ 160 ಕಿ.ಮೀ. ವೇಗದಲ್ಲಿ ಚಲಿಸುವ ಮೂಲಕ ಸುಮಾರು 7 ಗಂಟೆಗಳಲ್ಲಿ 708 ಕಿ.ಮೀ ದೂರವನ್ನು ಕ್ರಮಿಸಲಿದೆ. ಈ ಮುಂಚಿನ ಹಲವು ಸಾಮಾನ್ಯ ಎಕ್ಸ್‌ಪ್ರೆಸ್ ರೈಲುಗಳು ಭೋಪಾಲ್‌ನಿಂದ ದಿಲ್ಲಿ ತಲುಪಲು 10 ತಾಸು ಸಮಯ ತೆಗೆದುಕೊಳ್ಳುತ್ತಿದ್ದವು.
13 ರಾಜ್ಯಕ್ಕೆ ವ್ಯಾಪ್ತಿ ವಿಸ್ತಾರ:
ದೇಶದ ಮೊದಲ ಮೊದಲ ವಂದೇಭಾರತ್ ರೈಲು ದಿಲ್ಲಿ-ವಾರಾಣಸಿ ನಡುವೆ ಆರಂಭವಾಗಿತ್ತು. ನಂತರ ಈವರೆಗೆ ಇನ್ನೂ 10 ರೈಲುಗಳನ್ನು ಆರಂಭಿಸಲಾಗಿದ್ದು, ದೇಶದ 13 ರಾಜ್ಯಗಳನ್ನು ವಂದೇಭಾರತ್ ರೈಲುಗಳು ಸಂಪರ್ಕಿಸಿದಂತಾಗಿದೆ. ವಾರಾಣಸಿ-ದಿಲ್ಲಿ, ನವದೆಹಲಿ-ಕಟ್ರಾ, ಗಾಂಧಿನಗರ-ಮುಂಬೈ, ದೆಹಲಿ-ಅಂಬ್ ಅಂದೂರಾ (ಹಿಮಾಚಲ), ಚೆನ್ನೈ-ಮೈಸೂರು, ನಾಗಪುರ-ಬಿಲಾಸ್‌ಪುರ, ಹೌರಾ-ನ್ಯೂಜಲಪೈಗುರಿ, ಸಿಕಂದರಾಬಾದ್-ವಿಶಾಖಪಟ್ಟಣಂ, ಮುಂಬೈ-ಸೊಲ್ಲಾಪುರ, ಮುಂಬೈ-ಶಿರಡಿ ಹಾಗೂ ಭೋಪಾಲ್-ದೆಹಲಿ ನಡುವೆ ಈಗ ವಂದೇಭಾರತ್ ರೈಲುಗಳು ಸಂಚರಿಸುತ್ತಿವೆ.
ವಂದೇ ಭಾರತ್ ರೈಲಿಗೆ ಕಲ್ಲೆಸೆದರೆ 5 ವರ್ಷ ಜೈಲು, ಎಚ್ಚರಿಕೆ ನೀಡಿದ ಭಾರತೀಯ ರೈಲ್ವೇ!
ಇನ್ನೂ 3 ರೈಲು ಶೀಘ್ರ:
ದೆಹಲಿ-ಜೈಪುರ, ಸಿಕಂದರಾಬಾದ್-ತಿರುಪತಿ ಮತ್ತು ಚೆನ್ನೈ-ಕೊಯಮತ್ತೂರು ನಡುವೆ ಶೀಘ್ರದಲ್ಲೇ 3 ವಂದೇಭಾರತ್ ರೈಲು ಆರಂಭವಾಗಲಿವೆ ಎಂದು ಮೂಲಗಳು ಹೇಳಿವೆ. ಬೆಂಗಳೂರು-ಧಾರವಾಡ ವಂದೇಭಾರತ್ ಕೂಡ ಕೆಲವು ತಿಂಗಳಲ್ಲಿ ಆರಂಭವಾಗಬಹುದು ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು-ಧಾರವಾಡ ಮಾರ್ಗದ ಜೋಡಿಮಾರ್ಗ ಹಾಗೂ ವಿದ್ಯುದೀಕರಣ ಭರದಿಂದ ಸಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ 75 ವಂದೇಭಾರತ್ ರೈಲು ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತು.
ದೇಶದ ವಂದೇ ಭಾರತ್ ರೈಲಿನ ಮೇಲೆ ಇರಲಿದೆ ಇನ್ನು ಟಾಟಾ ಹೆಸರು!