ವಡೋದರಾ(ಏ.14): ಮತ್ತೆ ಕೊರೋನಾ ತನ್ನ ಬಲ ಪ್ರಯೋಗಿಸುತ್ತಿದ್ದು, ವಿಶ್ವದಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ. ಮೊದಲ ಅಲೆಯ ಹೊಡೆತದಿಂದ ಇನ್ನೂ ಸುಧಾರಿಸದ ಜನ ಸಾಮಾನ್ಯರಿಗೆ ಎರಡನೇ ಅಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಿರುವಾಗ ಬಡತನದಿಂದಾಗಿ ಹಲವರಿಗೆ ದಿನದೂಡುವುದೇ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡಲು ಮುಂದಾದ ಸಹೃದಯಿಗಳಿಂದಾಗಿ ಮಾನವೀಯತೆ ಎಂಬುವುದು ಬದುಕುಳಿದಿದೆ. ಇದಕ್ಕೆ ಕಳೆದ ವರ್ಷ ಕೊರೋನಾ ಹೊಡೆತದ ವೇಳೆ ಕಂಡು ಬಂದ ಘಟನೆಗಳೇ ಸಾಕ್ಷಿ. ಲಾಕ್‌ಡೌನ್‌ನಿಂದ ಕಂಗಾಲಾಗಿ ಕಾಲ್ನಡಿಗೆಯಲ್ಲೇ ತಮ್ಮ ಮನೆಗಳಿಗೆ ಹೊರಟಿದ್ದ ಅನೇಕರ ಪಾಲಿಗೆ ಇಂತಹ ಸಹೃದಯಿಗಳೇ ದೇವರಾಗಿ ಬಂದು ಊಟ, ತಿಂಡಿ ವಿತರಿಸಿದ್ದರು. ಸದ್ಯ ಈ ಬಾರಿಯೂ ವಡೋದರದ ವ್ಯಕ್ತಿಯೊಬ್ಬರ ಮಾನವೀಯತೆ ಮತ್ತೆ ಸದ್ದು ಮಾಡುತ್ತಿದೆ. 

ಹೌದು ವಡೋದರಾದ ಈ ವ್ಯಕ್ತಿ ಕೊರೋನಾ ಸೊಂಕಿತರ ಮನೆ ಬಾಗಿಲಿಗೆ ಶುದ್ಧ, ಸ್ವಚ್ಛ, ಉಚಿತ ಆಹಾರವನ್ನು ತಲುಪಿಸುತ್ತಿದ್ದು, ಅವರ ಈ ಮಾನವೀಯ ನಡೆ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ವಡೋದರಾದ ಶುಭಲ್ ಶಾ 'ವಡೋದರಾ ಈ ಕೊರೋನಾತಂಕದ ನಡುವೆ ನಾವು ನಿಮ್ಮ ಜೊತೆಗಿದ್ದೇವೆ. ಒಂದು ವೇಳೆ ನಿಮ್ಮ ಕುಟುಂಬ ಕೊರೋನಾದಿಂದ ನಲುಗುತ್ತಿದ್ದರೆ, ನಾವು ನಿಮಗೆ ಶುಚಿಯಾದ ಊಟ, ತಿಂಡ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೇವೆ. ಕ್ವಾರಂಟೈನ್‌ ಇರುವವರೆಗೂ ಉಚಿತವಾಗಿ ಈ ಸೇವೆ ನೀಡುತ್ತೇವೆ' ಎಂದಿದ್ದಾರೆ.

ಸದ್ಯ ಇಂತಹ ಕಠಿಣ ಸಂದರ್ಭದಲ್ಲಿ ಶಾ ಮಾನವೀಯ ಗುಣ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ತಾನು, ತಮ್ಮವರೇ ಎಂದು ಯೋಚಿಸುತ್ತಿರುವ ಇಂತಹ ಸಂದರ್ಭದಲ್ಲಿ ಇಂತಹ ನಿಸ್ವಾರ್ಥ ಸೇವೆ ಎಲ್ಲರನ್ನೂ ಭಾವುಕರನ್ನಾಗಿಸಿದೆ.