ನವದೆಹಲಿ(ಜ.03) ಭಾರತದಲ್ಲಿ ಸೀರಂ ಇನ್ಸ್ಟಿಟ್ಯೂಟ್ ಹಾಗೂ ಭಾರತ್ ಬಯೋಟೆಕ್ ಲಸಿಕೆಯನ್ನು ತುರ್ತು ಬಳಕೆಗೆ ಅನುಮತಿ ನೀಡಿದೆ. ಹೀಗಿರುವಾಗ ಅತ್ತ ವಿರೋಧ ಪಕ್ಷದ ಕೆಲ ನಾಯಕರು ಇದರ ವಿಶ್ವಾಸಾರ್ಹತೆ ಬಗ್ಗೆಯೇ ಸವಾಲೆಸೆದಿದ್ದಾರೆ. ಸಮಾಜವಾದಿ ಪಕ್ಷ ಅಖಿಲೇಶ್ ಯಾದವ್ ಬೆನ್ನಲ್ಲೇ ಈಗ ಮತ್ತೊಬ್ಬ ಕಾಂಗ್ರೆಸ್ ನಾಯಕ ಈ ಲಸಿಕೆಯನ್ನು 'ಫ್ರಾಡ್' ಎಂದು ಕರೆದಿದ್ದಾರೆ. ಹೀಗಿರುವಾಗ ಸೋಶಿಯಲ್ ಮೀಡಿಯಾ ಬಳಕೆದಾರರು ಅವರ ಕ್ಲಾಸ್ ತೆಗೆದುಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ಓರ್ವ ಬಳಕೆದಾರ ಸಲ್ಮಾನ್ ನಿಜಾಮೀಯನ್ನೇ ಫ್ರಾಡ್‌ ಎಂದು ಕರೆದಿದ್ದಾರೆ. ಅಷ್ಟಕ್ಕೂ ಸಲ್ಮಾನ್ ನಿಜಾಮಿ ಯಾರಪ್ಪಾ ಅನ್ನೋ ಪ್ರಶ್ನೆ ಕಾಡೋದು ಸಹಜ. ಸಲ್ಮಾನ್ ತನ್ನನ್ನು ತಾನು ಓರ್ವ ಕಾಂಗ್ರೆಸ್ ನಾಯಕ ಹಾಗೂ ಲೇಖಕ ಎಂದು ಕರೆಯುತ್ತಾರೆ. ಅವರು ಜಮ್ಮು ಕಾಶ್ಮೀರ ಕಾಂಗ್ರೆಸ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಗುಜರಾಥ್ ವಿಧಾನಸಭಾ ಚುನಾವಣೆಯಲ್ಲಿ ಅವರು ಪಿಎಂ ಮೋದಿ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಾದ ಬಳಿಕ ಪಿಎಂ ಮೋದಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದರು.

ಲಸಿಕೆಯನ್ನು ಫ್ರಾಡ್ ಎಂದ ಅಖಿಲೇಶ್

ಇನ್ನು ಶನಿವಾರವಷ್ಟೇ ಲಸಿಕೆ ಸಂಬಂಧ ಸವಾಲೆಸೆದಿದ್ದ ಅಖಿಲೇಶ್ ಯಾದವ್ 'ತಾನು ಲಸಿಕೆ ಸ್ವೀಕರಿಸಲ್ಲ, ನನಗೆ ಲಸಿಕೆ ಕೆಲಸ ಮಾಡುತ್ತದೆ ಎಂಬ ವಿಶ್ವಾಸವಿಲ್ಲ' ಎಂದಿದ್ದರು. ಜೊತೆಗೆ ಅದನ್ನು ಬಿಜೆಪಿ ಲಸಿಕೆ ಎಂದೂ ಕರೆದಿದ್ದರು.

ಎಲ್ಲಾ ಆರೋಪವನ್ನೂ ತಳ್ಳಿ ಹಾಕಿದ DCGI

ಅತ್ತ ಡಿಸಿಜಿಐ ಈ ಎಲ್ಲಾ ಆರೋಪವನ್ನು ತಳ್ಳಿ ಹಾಕಿದೆ. ಅಲ್ಲದೇ ಈ ಎರಡೂ ಲಸಿಕೆಗಳು ಸುರಕ್ಷಿತ ಹಾಗೂ ಕೊರೋನಾ ನಿಯಂತ್ರಣದಲ್ಲಿ ಪರಿಣಾಮಕಾರಿ ಎಂದಿವೆ.