ಲಂಡನ್(ಜ.25)‌: ಕೊರೋನಾ ಲಸಿಕೆ ಪಡೆದ ವ್ಯಕ್ತಿಗಳಿಂದ ವೈರಸ್‌ ಮತ್ತೊಬ್ಬರಿಗೆ ಹಬ್ಬುವುದಿಲ್ಲ ಎಂಬುದಕ್ಕೆ ಸ್ಪಷ್ಟಸಾಕ್ಷ್ಯ ಇಲ್ಲ. ಹೀಗಾಗಿ ಲಸಿಕೆ ಪಡೆದವರಿಂದಲೂ ಕೊರೋನಾ ಹಬ್ಬುವ ಸಾಧ್ಯತೆ ಇರುತ್ತದೆ ಎಂದು ಬ್ರಿಟನ್‌ನ ಉಪ ಮುಖ್ಯ ವೈದ್ಯಾಧಿಕಾರಿ ಪ್ರೊ. ಜೋನಾಥನ್‌ ವಾನ್‌- ಟಾಮ್‌ ಅವರು ಎಚ್ಚರಿಕೆ ನೀಡಿದ್ದಾರೆ.

ಲಸಿಕೆ ಪಡೆದವರಲ್ಲಿ ರೋಗ ನಿರೋಧಕ ಶಕ್ತಿ ರೂಪುಗೊಳ್ಳಲು ಕನಿಷ್ಠ 3 ವಾರಗಳು ಬೇಕಾಗುತ್ತವೆ. ಹೀಗಾಗಿ ಕಠಿಣ ಕೊರೋನಾ ನಿಯಮಗಳನ್ನು ಜನತೆ ಈಗಲೂ ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ. ಗಂಭೀರ ಕಾಯಿಲೆಗಳನ್ನು ಲಸಿಕೆ ತಡೆಯುತ್ತದೆ ಎಂಬುದು ನಿಜ.

ಆದರೆ ವೈರಾಣುವನ್ನು ಒಬ್ಬರಿಂದ ಮತ್ತೊಬ್ಬರಿಗೆ ಸಾಗಿಸುತ್ತದೆಯೇ ಎಂಬುದು ತಿಳಿದಿಲ್ಲ. ಹೀಗಾಗಿ ನಮ್ಮ ರಕ್ಷಣಾ ವ್ಯವಸ್ಥೆಯನ್ನು ನಾವು ಬಿಡಬಾರದು. ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನೂ ಮುಂದುವರಿಸಬೇಕು ಎಂದು ಹೇಳಿದ್ದಾರೆ.