ಉತ್ತರಖಂಡ ಹಿಮಸ್ಫೋಟದಿಂದ ಪ್ರವಾಹ; 150 ಮಂದಿ ಕಣ್ಮರೆ, ಪರಿಸ್ಥಿತಿ ಅವಲೋಕಿಸಿದ ಮೋದಿ!
ಉತ್ತರಖಂಡಕ್ಕೆ ಭಾನುವಾರ ಕರಾಳ ದಿನವಾಗಿ ಮಾರ್ಪಟ್ಟಿದೆ. ಭಾರಿ ಹಿಮಸ್ಫೋಟದಿಂದ ಪ್ರವಾಹ ಸೃಷ್ಟಿಯಾಗಿದ್ದು, 150ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಉತ್ತರಖಂಡ(ಫೆ.07): ಹಿಮಪಾತದಿಂದ ಸೃಷ್ಟಿಯಾಗಿರುವ ಪ್ರವಾಹಕ್ಕೆ ಉತ್ತರಖಂಡದ ಚಮೋಲಿ ಜಿಲ್ಲೆ ನಲುಗಿ ಹೋಗಿದೆ. ಜೋಶಿಮತ್ ಪ್ರದೇಶದ ಧೌಲಿ ಗಂಗಾ ಕಣಿವೆಯಲ್ಲಿ ಹಿಮಪಾತವಾಗಿದ್ದು , ಜಲವಿದ್ಯುತ್ ಘಟಕ ಹಾಗೂ ಡ್ಯಾಮ್‌ಗೆ ತೀವ್ರ ಹಾನಿಯಾಗಿದೆ. ವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 150ಕ್ಕೂ ಹೆಚ್ಚು ಕಾರ್ಮಿಕರು ಕಣ್ಮರೆಯಾಗಿದ್ದಾರೆ.
ಉತ್ತರಾಖಂಡ್ ಹಿಮಗಡ್ಡೆ ಸಿಡಿದು ಜಲ ಪ್ರಳಯ: ಹರಿದ್ವಾರದವರೆಗೆ ಹೈ ಅಲರ್ಟ್!...
ಭೀಕರ ಪ್ರವಾಹದಿಂದ ರಿಷಿಗಂಗಾ ಅಣೆಕಟ್ಟು ಧ್ವಂಸಗೊಂಡಿದೆ. ತಕ್ಷಣ ಕಾರ್ಯಪ್ರವೃತ್ತರಾಗಿರುವ ಕೇಂದ್ರ ಸರ್ಕಾರ NDRF(ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ)ತಂಡವನ್ನು ಉತ್ತರಖಂಡದಲ್ಲಿ ನಿಯೋಜಿಸಲಾಗಿದೆ. ಹೆಚ್ಚುವರಿ ಸೇನಾ ಪಡೆಯನ್ನು ದೆಹಲಿಯಿಂದ ರವಾನಿಸಲಾಗಿದೆ.
ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ಉತ್ತರಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಜೊತೆ ಮಾತುಕತೆ ನಡೆಸಿದ್ದಾರೆ. ಖುದ್ದು ಪ್ರಧಾನಿ ನರೇಂದ್ರ ಮೋದಿ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ. ಎಲ್ಲಾ ಅಗತ್ಯ ನೆರವು ನೀಡಲು ಸೂಚನೆ ನೀಡಿದ್ದಾರೆ.
ಕೇಂದ್ರ ನಾಲ್ಕು NDRF ತಂಡವನ್ನು ದೆಹಲಿಯಿಂದ ಉತ್ತರಖಂಡಕ್ಕೆ ಕಳುಹಿಸಿದೆ. ಸದ್ಯ ಚಮೋಲಿಯಲ್ಲಿ ಒಂದು NDRF ತಂಡ ನದಿ ಪಾತ್ರದ ಜರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುತ್ತಿದೆ. ಇತ್ತ ವಿದ್ಯುತ್ ಘಟಕದಲ್ಲಿ ಕಣ್ಮರೆಯಾಗಿರುವ ಹಾಗೂ ಘಟಕದ ಸುತ್ತ ರಕ್ಷಣಾ ಪಡೆ ಕಾರ್ಯ ಆರಂಭಿಸಿದೆ. ಸದ್ಯ ಪ್ರವಾಹದ ತೀವ್ರತೆ ಕಡಿಮೆಯಾಗಿದ್ದು, ರಕ್ಷಣಾ ಕಾರ್ಯ ತೀವ್ರಗೊಂಡಿದೆ.