ಡೆಹ್ರಾಡೂನ್‌/ ತಪೋವನ(ಫೆ.11): ಉತ್ತರಾಖಂಡದಲ್ಲಿ ಫೆ.7ರಂದು ಸಂಭವಿಸಿದ ನೀರ್ಗಲ್ಲು ಸ್ಫೋಟ ಹಾಗೂ ಪ್ರವಾಹದಿಂದಾದ ದುರಂತದಲ್ಲಿ ನಾಪತ್ತೆಯಾದ 174 ಮಂದಿ, ಘಟನೆ ಸಂಭವಿಸಿದ 4 ದಿನದ ಬಳಿಕವೂ ಪತ್ತೆಯಾಗಿಲ್ಲ. ಅಲ್ಲದೆ, ತಪೋವನ ಎಂಬಲ್ಲಿ 1500 ಮೀಟರ್‌ ಉದ್ದದ ವಿದ್ಯುತ್‌ ಯೋಜನೆಯ ಸುರಂಗದೊಳಗೆ ಕೆಸರಿನಲ್ಲಿ ಸಿಲುಕಿರುವ ಸುಮಾರು 25-35 ಮಂದಿಯ ರಕ್ಷಣೆಯೂ ಸಾಧ್ಯವಾಗಿಲ್ಲ. ಹೀಗಾಗಿ ಸಮಯ ಮೀರುತ್ತಿರುವ ಈ ಸಂದರ್ಭದಲ್ಲಿ ಇವರನ್ನು ರಕ್ಷಿಸಲು ಡ್ರೋನ್‌, ಥರ್ಮಲ್‌ ಸ್ಕಾ್ಯನಿಂಗ್‌ ಹಾಗೂ ರಿಮೋಟ್‌ ಸೆನ್ಸಿಂಗ್‌ ಉಪಕರಣಗಳ ಮೂಲಕ ರಕ್ಷಣಾ ಸಿಬ್ಬಂದಿ ಅವಿರತವಾಗಿ ಹೋರಾಡುತ್ತಿದ್ದಾರೆ. ಪ್ರತಿ ಕ್ಷಣವೂ ಅಮೂಲ್ಯವೆನ್ನಿಸಿದೆ.

ಇದರ ನಡುವೆಯೇ ರಕ್ಷಣಾ ಸಿಬ್ಬಂದಿ ಈ ಸುರಂಗದೊಳಗೆ ಕೇವಲ 80 ಮೀಟರ್‌ನಷ್ಟುಮಾತ್ರ ಮುಂದೆ ಹೋಗಲು ಸಾಧ್ಯವಾಗಿದ್ದು, ಸಿಲುಕಿದವರನ್ನು ತಲುಪಲು ಕನಿಷ್ಠ ಇನ್ನೂ 100 ಮೀಟರ್‌ ಒಳಗೆ ಹೋಗಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಸುರಂಗದೊಳಗೆ ಸಿಲುಕಿರುವವರು ಬದುಕುಳಿದಿರುವ ಸಾಧ್ಯತೆ ಕ್ಷೀಣಿಸಿದೆ ಎಂದು ಹೇಳಲಾಗುತ್ತಿದೆ.

600ಕ್ಕೂ ಹೆಚ್ಚು ಸಿಬ್ಬಂದಿ:

ನಾಪತ್ತೆಯಾಗಿರುವ ಜನರನ್ನು ಹುಡುಕಲು ಈಗ ಡ್ರೋನ್‌, ರಿಮೋಟ್‌ ಸೆನ್ಸಿಂಗ್‌, ಥರ್ಮಲ್‌ ಸ್ಕಾ್ಯನಿಂಗ್‌ ಉಪಕರಣ ಹಾಗೂ ಇನ್ನೂ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 600ಕ್ಕೂ ಹೆಚ್ಚು ಸೈನಿಕರು, ಐಟಿಬಿಪಿ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಎಸ್‌ಎಸ್‌ಬಿ ಮುಂತಾದ ರಕ್ಷಣಾ ಪಡೆಗಳು ಹುಡುಕಾಟದಲ್ಲಿ ತೊಡಗಿವೆ. ದುರಂತ ಸಂಭವಿಸಿದ ನಂತರ ಇಲ್ಲಿಯವರೆಗೆ 32 ಮೃತದೇಹಗಳು ದೊರೆತಿದ್ದು, ಅವುಗಳಲ್ಲಿ 8 ದೇಹಗಳ ಗುರುತು ಮಾತ್ರ ದೊರೆತಿದೆ. ಸಂತ್ರಸ್ತರ ಹುಡುಕಾಟಕ್ಕೆ ಹೆಚ್ಚೆಚ್ಚು ಯಂತ್ರೋಪಕರಣಗಳು ಹಾಗೂ ಉನ್ನತ ತಂತ್ರಜ್ಞಾನಗಳನ್ನು ನಿಯೋಜಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.

ಸೇತುವೆ ಕೊಚ್ಚಿಕೊಂಡು ಹೋಗಿರುವುದರಿಂದ ಸುಮಾರು 2500 ಜನರಿರುವ ಮಲಾರಿ ಎಂಬ ಹಳ್ಳಿಯು ಸಂಪೂರ್ಣ ಸಂಪರ್ಕ ಕಳೆದುಕೊಂಡಿದ್ದು, ಅಲ್ಲಿನ ಜನರಿಗೆ ಹೆಲಿಕಾಪ್ಟರ್‌ನಲ್ಲಿ ಆಹಾರ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ.