ಡೆಹ್ರಾಡೂನ್‌(ಫೆ.24): ಉತ್ತರಾಖಂಡದ ಚಮೋಲಿಯಲ್ಲಿ ಫೆಬ್ರವರಿ 7ರಂದು ಸಂಭವಿಸಿದ ಹಿಮಕುಸಿತ ದುರಂತದಲ್ಲಿ ಕಾಣೆಯಾಗಿರುವ 136 ಜನರನ್ನು ‘ಮೃತರು’ ಎಂದು ಘೋಷಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಶೀಘ್ರ ಈ ಘೋಷಣೆ ಮಾಡುವ ಸಾಧ್ಯತೆ ಇದೆ.

ರಕ್ಷಣಾ ತಂಡಗಳು ಈವರೆಗೆ 68 ಶವಗಳನ್ನು ಚಮೋಲಿಯ ವಿದ್ಯುತ್‌ ಸ್ಥಾವರ ನಿರ್ಮಾಣ ಪ್ರದೇಶದ ಗಣಿ ಹಾಗೂ ಇತರ ಭಾಗಗಳಲ್ಲಿ ಪತ್ತೆ ಮಾಡಿದ್ದಾರೆ. ಆದರೆ 136 ಜನ ಇನ್ನೂ ನಾಪತ್ತೆಯಾಗಿದ್ದಾರೆ. ಇವರು ಬದುಕುಳಿದ ಸಾಧ್ಯತೆ ಕಮ್ಮಿ. ಹಾಗಾಗಿ ಇವರನ್ನು ‘ಮೃತರು’ ಎಂದು ಘೋಷಣೆ ಮಾಡಿದರೆ ಅವರ ಕುಟುಂಬಕ್ಕೆ ಸರ್ಕಾರದಿಂದ ದೊರಕುವ ಪರಿಹಾರ ಹಾಗೂ ಇತರ ಸವಲತ್ತುಗಳೆಲ್ಲ ಕೂಡಲೇ ದೊರಕುತ್ತವೆ. ಈ ಕಾರಣಕ್ಕೆ ಮೃತರು ಎಂದು ಘೋಷಿಸಲು ಸರ್ಕಾರ ನಿರ್ಧರಿಸಿದೆ.

ಸಾಮಾನ್ಯವಾಗಿ ಪ್ರಾಕೃತಿಕ ದುರಂತಗಳಲ್ಲಿ ನಾಪತ್ತೆಯಾಗಿ 7 ವರ್ಷ ಆದ ಬಳಿಕ ‘ಮೃತ’ ಎಂದು ಘೋಷಿಸುತ್ತಾರೆ. ಆದರೆ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿರುವ ಸರ್ಕಾರ, 1969ರ ಜನನ ಹಾಗೂ ಮರಣ ಕಾಯ್ದೆಯ ಅನುಸಾರ ಕೂಡಲೇ ‘ಮೃತರು’ ಎಂದು ಘೋಷಿಸುವ ಕ್ರಮಕ್ಕೆ ಮುಂದಾಗಿದೆ. ಈ ಹಿಂದೆ ಕೇದಾರನಾಥ ದುರಂತ ಸಂಭವಿಸಿದಾಗಲೂ ಇದೇ ಕ್ರಮವನ್ನು ಸರ್ಕಾರ ಅನುಸರಿಸಿತ್ತು.

ಸಾವಿನ ಘೋಷಣೆ ಬಳಿಕ ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ 2 ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ 4 ಲಕ್ಷ ರು. ಪರಿಹಾರ ದೊರಕಲಿದೆ.