ಉತ್ತರಖಂಡ ಮೇಘಸ್ಫೋಟದ ವಿಡಿಯೋ ಬಹಿರಂಗವಾಗಿದೆ. ಕೆಲವೇ ಸೆಕೆಂಡ್ ಅಂತರದಲ್ಲಿ ಪ್ರವಾಹ ಇಡೀ ಗ್ರಾಮವನ್ನೇ ಮುಗಿಸಿಬಿಟ್ಟಿದೆ ಜನರು ದಿಕ್ಕಾಪಾಲಾಗಿ ಓಡುತ್ತಿದ್ದಂತೆ ಪ್ರವಾಹ ಅಪ್ಪಳಿಸಿ ಸಮಾಧಿಯಾಗಿರುವ ಭೀಕರ ವಿಡಿಯೋ ಹೊರಬಂದಿದೆ.
ಉತ್ತರಕಾಶಿ (ಆ.05) ಉತ್ತರಖಂಡದ ಮೇಘಸ್ಫೋಟ ದೇಶವನ್ನೇ ಬೆಚ್ಚಿ ಬೀಳಿಸಿದೆ. ಕಳೆದ ವರ್ಷ ವಯಾನಾಡಿನಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹ ರೀತಿಯಲ್ಲೇ ಇದೀಗ ಉತ್ತರಖಂಡದಲ್ಲಿ ಸಂಭವಿಸಿದೆ. ಮೇಘಸ್ಫೋಟದ ಪರಿಣಾಮ ಒಂದೇ ಸಮನೆ ನೀರು ಅದರ ಜೊತೆ ಬೆಟ್ಟ, ಗುಡ್ಡ ಕುಸಿದು ಹರಿದು ಒಂದು ಇಡೀ ಗ್ರಾವವನ್ನೇ ನೆಲಸಮ ಮಾಡಿದೆ. ಪಕ್ಕದ ಬೆಟ್ಟದಲ್ಲಿನ ಕಟ್ಟಡಗಳಿಂದ ಕೂಗಿಕೊಳ್ಳುತ್ತಿದ್ದಂತೆ ಪ್ರವಾಹ ಅಪ್ಪಳಿಸಿದೆ. ಜನರು ದಿಕ್ಕಾಪಾಲಾಗಿ ಓಡಲು ಆರಂಭಿಸಿದ್ದಾರೆ. ಜನರಿಗೆ ಪ್ರಾಣ ಉಳಿಸಿಕೊಳ್ಳಲು ಒಂದು ನಿಮಿಷದ ಸಮಯವೂ ಇರಲಿಲ್ಲ. ಕೆಲವೇ ಕೆಲವು ಸೆಕೆಂಡ್‌ನಲ್ಲಿ ಎಲ್ಲರನ್ನೂ ಸಮಾಧಿ ಮಾಡಿದೆ.
ಧಾರಾಲಿ ಗ್ರಾಮ ನೆಲೆಸಮ
ಉತ್ಕರ್ಷ ಜಿಲ್ಲೆಯ ಧಾರಾಲಿ ಗ್ರಾಮದಲ್ಲಿ ಇದೀಗ ಸ್ಮಶಾನ ಮೌನ ಆವರಿಸಿದೆ. ಖೀರ್ ಗಂಗಾ ನದಿ ಒಮ್ಮಲೆ ರಣಭೀಕರವಾಗಿ ಸ್ಫೋಟಗೊಂಡಿದೆ. ಬೆಟ್ಟದಲ್ಲಿ ಮೇಘಸ್ಫೋಟದಲ್ಲಿ ಇಡೀ ಗುಡ್ಡ ಬೆಟ್ಟ ನೀರಿನೊಂದಿಗೆ ಹರಿದು ಬಂದಿದೆ. ಖೀರ್ ಗಂಗಾ ನದಿ ತಟದಲ್ಲಿರುವ ಧಾರಾಲಿ ಗ್ರಾಮದ ಮೇಲೆ ಅಪ್ಪಳಿಸಿದೆ. ಈ ಮೇಘಸ್ಫೋಟದಲ್ಲಿ ಸಾವಿನ ಸಂಖ್ಯೆ ಎಷ್ಟು ಅನ್ನೋದು ನಿಖರ ಮಾಹಿತಿ ಹೊರಬಂದಿಲ್ಲ. ವಿಡಿಯೋಗಳ ಪ್ರಕಾರ 50ಕ್ಕೂ ಹೆಚ್ಚು ಮಂದಿ ಈ ಘಟನೆಯಲ್ಲಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಧಿಕೃತ ಮಾಹಿತಿ ಪ್ರಕಾರ ನಾಲ್ಕು ಸಾವಾಗಿದೆ. ಹಲವರು ನಾಪತ್ತೆಯಾಗಿದ್ಾದರೆ.
ದೂರದಿಂದ ಸೆರೆ ಹಿಡಿದ ವಿಡಿಯೋದಲ್ಲಿ ದಾರಾಲಿ ಗ್ರಾಮದ ಭೀಕರತೆ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಮನೆ, ಹೊಟೆಲ್, ಕಟ್ಟಡಗಳು ಒಂದೇ ಸಮನೆ ನೆಲಸಮಗೊಂಡಿದೆ. ಮಕ್ಕಳು, ಪ್ರವಾಸಿಗರು, ಗ್ರಾಮಸ್ಥರು ಸೇರಿದಂತೆ ಇಡೀ ಗ್ರಾಮದಲ್ಲಿದ್ದ ಜನರು ಈ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಘಟನೆ ಭೀಕರತೆ ಸಾವು ನೋವಿನ ಕುರಿತು ಇನ್ನು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ರಕ್ಷಣಾ ಕಾರ್ಯಾಚರಣೆ
ಭಾರಿ ಪ್ರಮಾಣದ ಮಣ್ಣು, ಕಲ್ಲು ಗ್ರಾಮದಲ್ಲಿ ತುಂಬಿಕೊಂಡಿದೆ. ಮನೆ, ಕಟ್ಟಡಗಳು ನೆಲಸಮಗೊಂಡಿದೆ. ಇದರಡಿ ಸಿಲುಕಿರುವವ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸೇರಿದಂತೆ ಸ್ಥಳೀಯ ರಕ್ಷಣಾ ತಂಡಗಳು ನಿರಂತರವಾಗಿ ಶ್ರಮಿಸುತ್ತಿದೆ. ರಕ್ಷಣಾ ಕಾರ್ಯಾಚರಣೆಗೂ ಕೆಲ ಸಮಸ್ಯೆಗಳು ಎದುರಾಗಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಗೆಸ್ಟ್ ಹೌಸ್, ಪ್ರವಾಸಿಗರ ಅತಿಥಿ ಗೃಹಗಳು, ಹೊಟೆಲ್ ಇತ್ತು. ಇದೆಲ್ಲವೂ ಕೊಚ್ಚಿ ಹೋಗಿದೆ.
ಉತ್ತರಖಂಡ ಸರ್ಕಾರಕ್ಕೆ ನೆರವು ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿಗೆ ಕರೆ ಮಾಡಿ ಮಾತನಾಡಿದ್ದಾರೆ. ಕೇಂದ್ರದಿಂದ ಎಲ್ಲಾ ನೆರವು ನೀಡುವುದಾಗಿ ಹೇಳಿದ್ದಾರೆ. ಕಾರ್ಯಾಚರಣೆ ತೀವ್ರಗೊಳಿಸಲು ಸೂಚಿಸಲಾಗಿದೆ. ಹೆಚ್ಚಿನ ಸಿಬ್ಬಂದಿಗಳ ನಿಯೋಜನೆಗೆ ಸೂಚನೆ ನೀಡಲಾಗಿದೆ. ಇದೇ ವೇಳೆ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್, ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಲು ಸೂಚಿಸಿದ್ದಾರೆ.
ಗ್ರಾಮದಲ್ಲಿದ್ದ ಜಾನುವಾರು, ನಾಯಿ, ಕಾರು ಬೈಕ್ ಸೇರಿದಂತೆ ವಾಹನಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ.
