ಗಾಜಿಯಾಬಾದ್‌ (ಜ.29): ಟ್ರ್ಯಾಕ್ಟರ್‌ ರಾರ‍ಯಲಿ ವೇಳೆ ಪ್ರತಿಭಟನಾಕಾರರು ದೆಹಲಿಯ ಕೆಂಪು ಕೋಟೆಗೆ ಮುತ್ತಿಗೆ ಹಾಕಿದ ಬೆನ್ನಲ್ಲೇ, ಪ್ರತಿಭಟನಾನಿರತ ರೈತರನ್ನು ದೆಹಲಿಯ ಗಡಿಯಿಂದ ಬಲವಂತವಾಗಿ ತೆರವುಗೊಳಿಸುವ ಯತ್ನಕ್ಕೆ ಉತ್ತರ ಪ್ರದೇಶ ಸರ್ಕಾರ ಕೈಹಾಕಿದೆ. ದೆಹಲಿ-ಮೇರಠ್‌ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿರುವ ಗಾಜಿಪುರದ ಯುಪಿ ಗೇಟ್‌ನಿಂದ ಜಾಗ ಖಾಲಿ ಮಾಡುವಂತೆ ಗಾಜಿಯಾಬಾದ್‌ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಗುರುವಾರ ಮಧ್ಯರಾತ್ರಿಯ ಒಳಗಾಗಿ ಪ್ರತಿಭಟನಾ ಸ್ಥಳ ತೆರಗೊಳಿಸಲು ಜಿಲ್ಲಾಡಳಿತ ಸೂಚನೆ ನೀಡಿದ್ದಾರೆ. ಆದರೆ, ಪ್ರತಿಭಟನಾ ಸ್ತಳದಿಂದ ರೈತರು ಕದಲಲೇ ಇದ್ದ ಕಾರಣ ಗಾಜಿಪುರ್‌ ಗಡಿಯಲ್ಲಿ ಭಾರೀ ಸಂಖ್ಯೆಯ ಪೊಲೀಸ್‌ ಪಡೆಗಳನ್ನು ಗಡಿಗೆ ನಿಯೋಜನೆ ಮಾಡಲಾಗಿದೆ.

'ಪ್ರತಿಭಟನೆ ಮಾಡಲು ಬಿಡಲ್ಲ, ಇಲ್ಲಿಂದ ಜಾಗ ಖಾಲಿ ಮಾಡಿ' .

ಈ ಮಧ್ಯೆ ಗಾಜಿಪುರ ಗಡಿಯನ್ನು ತೆರವುಗೊಳಿಸಲು ರೈತರು ನಿರಾಕರಿಸಿದ್ದರಿಂದ ಗುರುವಾರ ಗಡಿಯಲ್ಲಿ ಭಾರೀ ಹೈಡ್ರಾಮ ಸೃಷ್ಟಿಯಾಗಿತ್ತು. ಉತ್ತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಬಾಗಪತ್‌ನಲ್ಲಿ ಪ್ರತಿಭಟಿಸುತ್ತಿದ್ದ ರೈತರನ್ನು ಪೊಲೀಸರು ಬುಧವಾರ ಬಲವಂತವಾಗಿ ತೆರವುಗೊಳಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ವಿರುದ್ಧ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ ಎಂದು ರೈತರು ಹೇಳಿದ್ದಾರೆ.

ಆತ್ಮಹತ್ಯೆ ಬೆದರಿಕೆ: ಇದೇ ವೇಳೆ ಭಾರತ್‌ ಕಿಸಾನ್‌ ಯೂನಿಯನ್‌ ಮುಖಂಡ ರಾಕೇಶ್‌ ಟಿಕಾಯತ್‌ ಪ್ರತಿಭಟನೆ ಅಂತ್ಯಗೊಳಿಸಲು ನಿರಾಕರಿಸಿದ್ದಾರೆ. ‘ಬಲವಂತವಾಗಿ ಪ್ರತಿಭಟನೆ ತೆರವುಗೊಳಿಸಲು ಯತ್ನಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವೆ’ ಎಂದು ಬೆದರಿಕೆ ಹಾಕಿದ್ದಾರೆ.

ತಮ್ಮ ಸಂಘಟನೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದೆ. ಆದರೂ ಪೊಲೀಸರು ಬಲಂತವಾಗಿ ಪ್ರತಿಭಟನಾಕಾರರನ್ನು ತೆರವುಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಅವರು ಕಣ್ಣೀರು ಹಾಕಿದ್ದಾರೆ. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಘೋಷಿಸಿಕೊಂಡಿದ್ದಾರೆ.

ಭಾರತೀಯ ಕಿಸಾನ್‌ ಯೂನಿಯನ್‌ ಹಾಗೂ ಇತರ ಸಂಘಟನೆಗಳ ರೈತರು ನ.28ರಿಂದ ಗಾಜಿಪುರ್‌ ಗಡಿಯನ್ನು ಬಂದ್‌ ಮಾಡಿ ಪ್ರತಿಭಟನೆ ಕೈಗೊಂಡಿದ್ದಾರೆ. ಗಾಜಿಪುರ್‌ ಗಡಿ ದೆಹಲಿಗೆ ಸಮೀಪ ಇದ್ದು, ಜ.26ರಂದು ಟ್ರ್ಯಾಕ್ಟರ್‌ ರಾರ‍ಯಲಿಯ ವೇಳೆ ದಾಳಿಕೋರರು ಇದೇ ಗಡಿಯ ಮೂಲಕ ಆಗಮಿಸಿದ್ದರು ಎನ್ನಲಾಗಿದೆ.