ಪೌರತ್ವ ಗಲಭೆಕೋರರ ಆಸ್ತಿ ಜಪ್ತಿ, 67 ಅಂಗಡಿಗಳಿಗೆ ಸೀಲ್!
ಪೌರತ ಗಲಭೆಕೋರರ ಆಸ್ತಿ ಉ.ಪ್ರ.ದಲ್ಲಿ ಜಪ್ತಿ!| 67 ಅಂಗಡಿಗಳಿಗೆ ಸೀಲ್ ಹಾಕಿದ ಯೋಗಿ ಸರ್ಕಾರ| ಲಖನೌ, ರಾಮಪುರದಲ್ಲೂ ಪ್ರಕ್ರಿಯೆ ಪ್ರಾರಂಭ
ನವದೆಹಲಿ[ಡಿ.23]: ‘ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಗಲಭೆ ನಡೆಸುತ್ತಿರುವ ದಂಗೆಕೋರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತೇವೆ’ ಎಂದು ಹೇಳಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈಗ ಅದನ್ನು ಕಾರ್ಯರೂಪಕ್ಕೆ ತರುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಗಲಭೆಪೀಡಿತ ಮುಜಫ್ಫರ್‌ನಗರದಲ್ಲಿ ದಂಗೆಕೋರರಿಗೆ ಸೇರಿದ 67 ಅಂಗಡಿಗಳಿಗೆ ಸೀಲ್ ಜಡಿದು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ ಲಖನೌನಲ್ಲಿ ಕೂಡ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಗಲಭೆಕೋರರನ್ನು ಗುರುತಿಸಿ ಅವರಿಗೆ ನೋಟಿಸ್‌ಗಳನ್ನು ನೀಡಲಾಗುತ್ತಿದೆ. ಒಂದು ವೇಳೆ ಇವರು ದಂಡ ಪಾವತಿಸಲು ವಿಫಲವಾದಲ್ಲಿ, ಅವರ ಆಸ್ತಿಪಾಸ್ತಿ ಜಪ್ತಿ ಮಾಡಲಾಗುತ್ತದೆ. ರಾಂಪುರದಲ್ಲಿ 25 ಗಲಭೆಕೋರರ ಆಸ್ತಿ ಜಪ್ತಿಗೆ ಪ್ರಕ್ರಿಯೆಗಳು ಆರಂಭವಾಗಿವೆ. ಉಳಿದ ಹಿಂಸಾಪೀಡಿತ ಜಿಲ್ಲೆಗಳಲ್ಲಿ ಈ ಕ್ರಮಕ್ಕೆ ಇನ್ನಷ್ಟೇ ಚಾಲನೆ ಸಿಗಬೇಕಿದೆ.
ಉತ್ತರ ಪ್ರದೇಶದ 12 ಜಿಲ್ಲೆಗಳಲ್ಲಿ ಹಿಂಸಾಚಾರ ಸಂಭವಿಸಿದ್ದು, ಮುಜಫ್ಫರ್‌ನಗರದಲ್ಲಿ ಶುಕ್ರವಾರದ ಮಧ್ಯಾಹ್ನದ ಪ್ರಾರ್ಥನೆ ನಂತರ ಗಲಭೆ ನಡೆದಿತ್ತು. 10 ಬೈಕ್‌ಗಳು, ಹಲವು ಕಾರುಗಳು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಿ ಹಾಗೂ ಕಲ್ಲು ತೂರಿ ಹಾನಿ ಮಾಡಲಾಗಿತ್ತು. 12 ಪೊಲೀಸರು ಸೇರಿದಂತೆ 30 ಜನರು ಗಾಯಗೊಂಡಿದ್ದರು.
ಕೋರ್ಟ್ ತೀರ್ಪೇ ಬಲ
‘ಸಾರ್ವಜನಿಕ ಆಸ್ತಿಹಾನಿಗೆ ದಂಗೆಕೋರರೇ ಹೊಣೆಯಾಗುತ್ತಾರೆ. ಅವರ ಆಸ್ತಿ ಜಪ್ತಿ ಮಾಡುವ ಮೂಲಕ ಹಾನಿಯನ್ನು ಭರಿಸಬೇಕು ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡಬೇಕು’ ಎಂದು 2018ರಲ್ಲಿ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ಆದೇಶಿಸಿತ್ತು. ಇದಲ್ಲದೆ, 2010ರಲ್ಲಿ ಅಲಹಾಬಾದ್ ಹೈಕೋರ್ಟ್ ಕೂಡ ಇದೇ ಆದೇಶ ನೀಡಿತ್ತು. ಇದೇ ಆದೇಶವನ್ನು ಮಾನದಂಡವಾಗಿ ಇರಿಸಿಕೊಂಡಿರುವ ಯೋಗಿ ಸರ್ಕಾರ, ಗಲಭೆಕೋರರ ಮೇಲೆ ಸಮರ ಸಾರಿದೆ.
‘ಈ ಹಿಂಸಾಚಾರದ ತನಿಖೆ ಇನ್ನೂ ನಡೆಯುತ್ತಿದೆ. ಗಲಭೆಕೋರರನ್ನು ವಿಡಿಯೋ ದೃಶ್ಯಾವಳಿಯನ್ನು ನೋಡಿ ಗುರುತಿಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಎನ್‌ಎಸ್‌ಎ ಅಡಿ ಕೇಸು:
‘ಗಲಭೆಕೋರರ ಮೇಲೆ ಕಠಿಣವಾದ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ಮುಜಫ್ಫರ್‌ನಗರ ಜಿಲ್ಲಾ ಪೊಲೀಸ್ ಅಧೀಕ್ಷಕ ಸಚೀಂದ್ರ ಪಟೇಲ್ ಹೇಳಿದ್ದಾರೆ. ಗಲಭೆ ಸಂಭವಿಸುವುದನ್ನು ತಡೆಯಲು ಈ ಕಾಯ್ದೆಯಡಿ ಮುಂಜಾಗ್ರತಾ ಕ್ರಮವಾಗಿ ವ್ಯಕ್ತಿಗಳನ್ನು ಬಂಧಿಸಲು ಪೊಲೀಸರಿಗೆ ಅವಕಾಶವಿರುತ್ತದೆ.
ಡಿಸೆಂಬರ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ