ರಸಗುಲ್ಲಾಕ್ಕಾಗಿ ಬಿತ್ತು ಹೆಣ: ಮದುವೆ ಮನೆಯಾಯ್ತು ಮಸಣ

ಇಲ್ಲೊಂದು ಕಡೆ ರಸಗುಲ್ಲಾ ಖಾಲಿಯಾಯ್ತು ಎಂಬ ಕಾರಣಕ್ಕೆ ಮದುವೆ ಮನೆಯಲ್ಲಿ ಹೆಣ ಬಿದ್ದಿದ್ದು, ಸಂಭ್ರಮಿಸಬೇಕಾದ ಸ್ಥಳ ಮಸಣವಾಗಿದೆ. ಉತ್ತರಪ್ರದೇಶದಲ್ಲಿ ಈ ಅನಾಹುತಕಾರಿ ಘಟನೆ ನಡೆದಿದೆ.

Uttar Pradesh wedding hall turned as hell after guest start fighting for rasagulla in Agra akb

ಅಗ್ರಾ: ಭಾರತೀಯ ವಿವಾಹಗಳು ಯಾವುದೇ ಗಲಾಟೆ ಗದ್ದಲಗಳಿಲ್ಲದೇ ನಡೆಯುವುದೇ ಅಪರೂಪ. ಒಂದಲ್ಲಾ ಒಂದು ಕಾರಣಕ್ಕೆ ಸಣ್ಣಪುಟ್ಟ ಕಿರಿಕಿರಿಗಳು ಮದುವೆ ಮನೆಯವರನ್ನು ನೆಂಟರಿಷ್ಟರನ್ನು ಸಂಕಷ್ಟಕ್ಕೆ ಸಿಲುಕಿಸುತ್ತವೆ. ಸಣ್ಣಪುಟ್ಟ ಕ್ಷುಲ್ಲಕ ಕಾರಣಗಳೇ ದೊಡ್ಡದಾಗಿ ಮದುವೆ ಮನೆಯವರು ಪರದಾಡುವಂತೆ ಮಾಡುತ್ತದೆ. ನಾವು ಹೇಳಿದ ಸಿಹಿ ಪದಾರ್ಥ ಮಾಡಿಲ್ಲ. ಸಂಪ್ರದಾಯ ಸರಿಯಾಗಿ ಪಾಲಿಸಿಲ್ಲ. ಮದುವೆ ಮನೆಗೆ ವಿಳಂಬವಾಗಿ ಬಂದರು ಹೀಗೆ ಸಣ್ಣಪುಟ್ಟ ಕಾರಣಕ್ಕೆ ದೊಡ್ಡ ಗಲಾಟೆಯೇ ನಡೆದು ಮದುವೆ ಮನೆ ರಣರಂಗವಾದ ನಿದರ್ಶನಗಳಿವೆ. ಅದೇ ರೀತಿ ಇಲ್ಲೊಂದು ಕಡೆ ರಸಗುಲ್ಲಾ ಖಾಲಿಯಾಯ್ತು ಎಂಬ ಕಾರಣಕ್ಕೆ ಮದುವೆ ಮನೆಯಲ್ಲಿ ಹೆಣ ಬಿದ್ದಿದ್ದು, ಸಂಭ್ರಮಿಸಬೇಕಾದ ಸ್ಥಳ ಮಸಣವಾಗಿದೆ.

ಉತ್ತರಪ್ರದೇಶದಲ್ಲಿ ಈ ಅನಾಹುತಕಾರಿ ಘಟನೆ ನಡೆದಿದೆ. ಅಗ್ರಾದ ಎತ್ಮಾದಪುರದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಲ್ಲಿನ ವಿನಾಯಕ ಭವನದಲ್ಲಿ ನಡೆದ ವಿವಾಹದಲ್ಲಿ ರಸಗುಲ್ಲಾದ (Rasagulla) ಕಾರಣಕ್ಕೆ ಆರಂಭವಾದ ಜಗಳ ಅತಿಥಿಗಳು ಪರಸ್ಪರ ತಟ್ಟೆ ಗ್ಲಾಸುಗಳಲ್ಲಿ ಹೊಡೆದಾಡಿಕೊಳ್ಳುವಷ್ಟರ ಮಟ್ಟಿಗೆ ಮುಂದುವರೆದಿದೆ. ಘಟನೆ ಬಗ್ಗೆ ಎತ್ಮಾದಪುರದ ಪೊಲೀಸ್‌ ಠಾಣೆಯ ಮುಖ್ಯಸ್ಥ ಸರ್ವೇಶ್‌ ಕುಮಾರ್ (Sarvesh Kumar) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಇಸ್ಮಾನ್ ಅಹ್ಮದ್ ಎಂಬುವವರ ಇಬ್ಬರು ಹೆಣ್ಣು ಮಕ್ಕಳಿಗೆ ವಾಕರ್ ಅಹ್ಮದ್ ಎಂಬುವವರ ಇಬ್ಬರು ಗಂಡು ಮಕ್ಕಳೊಂದಿಗೆ ವಿವಾಹ ನಿಶ್ಚಯವಾಗಿತ್ತು. ಈ ಮದುವೆಯಲ್ಲಿ ಎರಡು ಕುಟುಂಬದ ನೆಂಟರಿಷ್ಟರ ಮಧ್ಯೆ ರಸಗುಲ್ಲಾ ನೀಡಿಲ್ಲ ಎಂಬ ವಿಚಾರಕ್ಕೆ ಗಲಾಟೆ ನಡೆದಿದೆ. ಆದರೆ ಮದುವೆ ಮನೆಯಲ್ಲಿದ್ದ ಎರಡು ಕಡೆಯ ತರುಣರು ಈ ಸಣ್ಣ ಜಗಳವನ್ನು ವಿಕೋಪಕ್ಕೆ ತಿರುಗಿಸಿದ್ದಾರೆ. ಎರಡು ಕಡೆಯವರು ಪರಸ್ಪರ ಚೇರುಗಳು, ಪ್ಲೇಟುಗಳನ್ನು ಒಬ್ಬರ ಮೇಲೊಬ್ಬರು ಎಸೆದುಕೊಂಡಿದ್ದಾರೆ. 

40 ಗಂಟೆಗಳ ಕಾಲ ನೂರಾರು ರೈಲುಗಳು ರದ್ದು: ಇದಕ್ಕೆಲ್ಲಾ ಕಾರಣ ರಸಗುಲ್ಲಾ!

ಪರಿಣಾಮ ಎಲ್ಲರೂ ಕಿತ್ತಾಟ ಕೈ ಕೈ ಮಿಲಾಯಿಸಿ ಹೊಡೆದಾಡಿಕೊಳ್ಳುವ ಹಂತ ತಲುಪಿದ್ದು, ಎರಡೂ ಕಡೆಯವರು ಸೌಟು ಹಾಗೂ ಚಾಕುಗಳಿಂದ ಹೊಡೆದಾಡಿಕೊಂಡಿದ್ದಾರೆ. ಪರಿಣಾಮ ಮದುವೆ ಮನೆಯಲ್ಲಿ ಚಾಕು ಇರಿತಕೊಳಗಾಗಿ ಓರ್ವ ಸಾವನ್ನಪ್ಪಿದ್ದಾನೆ. ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಅಲ್ಲದೇ ಎರಡೂ ಕಡೆಯವರನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ. ವಿಧಿ ವಿಜ್ಞಾನ (forensic team) ತಂಡವನ್ನು ಸ್ಥಳಕ್ಕೆ ಕರೆಯಿಸಿ ಸ್ಥಳದಲ್ಲಿದ್ದ ಸಾಕ್ಷಿ ಹಾಗೂ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಎತ್ಮಾದಪುರ (Etmadpur) ಸರ್ಕಲ್ ಇನ್ಸ್‌ಪೆಕ್ಟರ್ ರವಿ ಕುಮಾರ್ ಗುಪ್ತಾ (Ravi Kumar Gupta) ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮದುವೆಯಲ್ಲಿ ಮಾಡಿಸಿದ್ದ ಸಿಹಿ ಮುಗಿದಿದ್ದೆ ಘಟನೆಗೆ ಕಾರಣ ಎಂದು ಹೇಳಿದ್ದಾರೆ.  ರಸಗುಲ್ಲಾ ಮುಗಿದಿದ್ದರಿಂದ ಕುಪಿತಗೊಂಡ ಜನ ಚಾಕುವಿಂದ (knife) ಮದುವೆಗೆ ಬಂದವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಅವಘಡದಲ್ಲಿ ಗಂಭೀರ ಗಾಯಗೊಂಡ 22 ವರ್ಷ ಪ್ರಾಯದ ಸನ್ನಿ ಎಂಬಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಆತನನ್ನು ಮೊದಲಿಗೆ ಸಮುದಾಯ ಆಸ್ಪತ್ರೆಗೆ ಹಾಗೂ ನಂತರ ಅಲ್ಲಿಂದ ಸರೋಜಿನಿ ನಾಯ್ಡು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ. ಆತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ (post-mortem) ಕಳುಹಿಸಲಾಗಿದೆ ಎಂದು ಗುಪ್ತಾ ಹೇಳಿದರು. 

ಇದು ಚೇಸಿಂಗ್ ದೃಶ್ಯವಲ್ಲ: ನವ ಜೋಡಿಯ ಮದುವೆ ಫೋಟೋಶೂಟ್ ವೈರಲ್

ಈ ಜಗಳದಲ್ಲಿ ಒಟ್ಟು ಐವರು ಗಾಯಗೊಂಡಿದ್ದಾರೆ. ಅವರನ್ನು ಎತ್ಮಾದಪುರದ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ದುರಂತದಲ್ಲಿ ಮೃತನಾದ ಸನ್ನಿಯ ಕುಟುಂಬಸ್ಥರು ಕೂಡ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಆದರೆ ಘಟನೆಗೆ ಸಂಬಂಧಿಸಿದಂತೆ ಯಾರನ್ನು ಕೂಡ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios