Asianet Suvarna News Asianet Suvarna News

UP Election: ಯಾದವೇತರರು ಒಟ್ಟಿಗೆ ಬಂದರೆ ಬಿಜೆಪಿಗೆ ಲಾಭ, ಬರದೇ ಹೋದರೆ ಅಖಿಲೇಶ್‌ಗೆ ಲಾಭ

ಇವತ್ತು ಚುನಾವಣೆ ನಡೆಯುವ ಇಟಾ, ಕಾಸಗಂಜ್‌, ಮೈನಪುರಿ, ಕನೌಜ್‌, ಫಿರೋಜಾಬಾದ್‌ ಇವೆಲ್ಲವೂ ಯಾದವ ಬಾಹುಳ್ಯ ಕ್ಷೇತ್ರಗಳು. 2017ರಲ್ಲಿ ಈಗ ನಡೆಯುವ 59 ಕ್ಷೇತ್ರಗಳಲ್ಲಿನ 29 ಯಾದವ ಬಾಹುಳ್ಯ ಕ್ಷೇತ್ರಗಳಲ್ಲಿ 23ರಲ್ಲಿ ಬಿಜೆಪಿ ಗೆದ್ದಿತ್ತು.

Uttar Pradesh Elections Akhilesh Bet in Yadav Belt hls
Author
Bengaluru, First Published Feb 20, 2022, 11:09 AM IST

ಯಾದವರು ಕಾಂಗ್ರೆಸ್‌ ವಿರುದ್ಧ ಸೆಡ್ಡು ಹೊಡೆದು ಹೊರಬಂದ ಜಾಟ್‌ ನಾಯಕ ಚೌಧರಿ ಚರಣ್‌ ಸಿಂಗ್‌ ಹಿಂದೆ ಗಟ್ಟಿಯಾಗಿ ನಿಂತವರು. ಆದರೆ ಮಂಡಲ ಚಳುವಳಿ ಆರಂಭವಾದ ನಂತರ ಜಾಟರ ಕಿರಿಯ ತಮ್ಮನಂತಿದ್ದ ಯಾದವರು ಮುಸ್ಲಿಂರ ಜೊತೆ ಸೇರಿಕೊಂಡು ಉತ್ತರಪ್ರದೇಶದಲ್ಲಿ ಮುಲಾಯಂ ಸಿಂಗ್‌ ಯಾದವರ ನೇತೃತ್ವದಲ್ಲಿ ರಾಜಕೀಯ ಸಾಮ್ರಾಜ್ಯ ಸ್ಥಾಪಿಸಿದವರು.

1989ರ ನಂತರ ನಡೆದ ಪ್ರತಿಯೊಂದು ಚುನಾವಣೆಯ ಫೋಕಸ್‌ ಪಾಯಿಂಟ್‌ ಯಾದವರು. ಆದರೆ ರಾಜಕೀಯ ನಿಂತ ನೀರಲ್ಲ ನೋಡಿ, ಜಾತಿ ಸಮೀಕರಣಗಳು ಇಲ್ಲಿ 5 ವರ್ಷಕ್ಕೊಮ್ಮೆ ಬದಲಾಗುತ್ತವೆ. 2014ರ ನಂತರ ನಡೆದ ಪ್ರತಿ ಚುನಾವಣೆಯನ್ನು ಬಿಜೆಪಿ ಯಾದವ-ಮುಸ್ಲಿಮರ ಕೂಡುವಿಕೆಯ ವಿರುದ್ಧ ತಿರುಗಿಸಿದ್ದರಿಂದ ಯಾದವರ ಶಕ್ತಿ ಕುಂದಿದೆ. ಯಾವ ಸಮುದಾಯಗಳು ಮಂಡಲ ಚಳುವಳಿ ಕಾರಣದಿಂದ ತಥಾಕಥಿತ ಮೇಲು ಜಾತಿಗಳ ವಿರುದ್ಧ ಯಾದವರ ಬೆನ್ನ ಹಿಂದೆ ಬಂದು ನಿಂತಿದ್ದವೋ, ಅವು ಈಗ ಯಾದವರ ವಿರುದ್ಧ ಬಿಜೆಪಿ ಪರವಾಗಿ ಹೋಗಿ ನಿಂತಿವೆ. ಹೀಗಾಗಿಯೇ ಕಳೆದ ಬಾರಿ ಯಾದವ ಬಾಹುಳ್ಯ ಕ್ಷೇತ್ರಗಳಲ್ಲೂ ಬಿಜೆಪಿ 70 ಪ್ರತಿಶತ ಸೀಟು ಗೆದ್ದಿತ್ತು.

UP Election: ಮೈನಪುರಿಯ ಕರಹಲ್‌ನಲ್ಲಿ ಎಸ್‌ಪಿ-ಬಿಜೆಪಿ ಜಿದ್ದಾಜಿದ್ದಿ

ಇವತ್ತು ಮತದಾನ ನಡೆಯುವ ಪಶ್ಚಿಮ ಯುಪಿ ಅವಧ್‌, ಬುಂದೇಲಖಂಡದ 59 ಕ್ಷೇತ್ರಗಳಲ್ಲಿ ಬಹುಪಾಲು ಯಾದವ ಬಾಹುಳ್ಯ ಕ್ಷೇತ್ರಗಳು. ಇಲ್ಲಿ ಯಾದವೇತರರು ಒಟ್ಟಿಗೆ ಬಂದರೆ ಬಿಜೆಪಿಗೆ ಮರಳಿ ಲಾಭ. ಒಟ್ಟಿಗೆ ಬರದೇ ಹೋದರೆ ಅಖಿಲೇಶ್‌ ಯಾದವ್‌ ಅವರಿಗೆ ಲಾಭ. ಯುಪಿ, ಬಿಹಾರದಲ್ಲಿ ಎರಡು ಕಡೆ ಅಧಿ​ಕಾರ ಕಳೆದುಕೊಂಡಿರುವ ಯಾದವ ಸಮುದಾಯಕ್ಕೆ ಈಗ ಏನಕೇನ ಉತ್ತರಪ್ರದೇಶದಲ್ಲಿ ಅಧಿ​ಕಾರ ಬೇಕು. ಆದರೆ ಅನೇಕ ಬಾರಿ ಈ ದೊಡ್ಡ ಸಮುದಾಯಗಳ ಬಹಿರಂಗ ಕ್ರೋಢೀಕರಣ ಉಳಿದವರನ್ನು ‘ಮೌನ’ವಾಗಿ ಒಟ್ಟಿಗೆ ತರುತ್ತದೆ.

ಯಾದವ ಬಾಹುಳ್ಯ ಕ್ಷೇತ್ರಗಳು

ಇವತ್ತು ಚುನಾವಣೆ ನಡೆಯುವ ಇಟಾ, ಕಾಸಗಂಜ್‌, ಮೈನಪುರಿ, ಕನೌಜ್‌, ಫಿರೋಜಾಬಾದ್‌ ಇವೆಲ್ಲವೂ ಯಾದವ ಬಾಹುಳ್ಯ ಕ್ಷೇತ್ರಗಳು. 2017ರಲ್ಲಿ ಈಗ ನಡೆಯುವ 59 ಕ್ಷೇತ್ರಗಳಲ್ಲಿನ 29 ಯಾದವ ಬಾಹುಳ್ಯ ಕ್ಷೇತ್ರಗಳಲ್ಲಿ 23ರಲ್ಲಿ ಬಿಜೆಪಿ ಗೆದ್ದಿತ್ತು. ಅದಕ್ಕೆ ಪ್ರಮುಖ ಕಾರಣ, ಈ ಕ್ಷೇತ್ರಗಳಲ್ಲಿನ ಬ್ರಾಹ್ಮಣ, ಬನಿಯಾ, ಠಾಕೂರರು ಮತ್ತು ಹಿಂದುಳಿದ ಜಾತಿಗಳು ಒಟ್ಟಾಗಿ ಬಂದಿದ್ದು. ಇದನ್ನು ತಡೆಯಲೆಂದೇ ಅಖಿಲೇಶ್‌ ಯಾದವ್‌ ಈ ಬಾರಿ ಇಲ್ಲಿ ಪ್ರತಿ ಕ್ಷೇತ್ರಗಳಲ್ಲಿ 40ರಿಂದ 50 ಸಾವಿರ ವೋಟು ಇರುವ ಸಣ್ಣ ಸಣ್ಣ ಸಮುದಾಯಗಳನ್ನು ಓಲೈಸುತ್ತಿದ್ದಾರೆ. ಆದರೆ 2012ರಿಂದ 2017ರ ವರೆಗೆ ಅಧಿ​ಕಾರ ನಡೆಸಿದ ಸಮಾಜವಾದಿ ಪಕ್ಷದ ಕಾಲದಲ್ಲಿ ಪೊಲೀಸ್‌ ಸ್ಟೇಷನ್‌ನಿಂದ ಹಿಡಿದು ಸರ್ಕಾರಿ ಟೆಂಡರ್‌ವರೆಗೆ ವ್ಯಾಪಿಸಿಕೊಂಡಿದ್ದ ಯಾದವ ಮತ್ತು ಮುಸ್ಲಿಮರ ವಿರುದ್ಧ ಉಳಿದ ಸಮುದಾಯಗಳಲ್ಲಿನ ಆಕ್ರೋಶ ಅಳಿಸಿ ಹಾಕುವುದು ಸುಲಭದ ಕೆಲಸ ಅಲ್ಲ.

ಕಾನೂನು ಮತ್ತು ಸುವ್ಯವಸ್ಥೆ

ಮಂಡಲ ಚಳುವಳಿಯಿಂದ ನೇತೃತ್ವ ಪಡೆದ ಮುಲಾಯಂ ಯಾದವ್‌ ಮತ್ತು ಲಾಲು ಪ್ರಸಾದ್‌ ಯಾದವ್‌ ಅವರಿಗೆ ಮುಸ್ಲಿಮರ ಬೆಂಬಲ ಸತತ ಅಧಿ​ಕಾರ ತಂದುಕೊಟ್ಟಿತ್ತು. ಆದರೆ 10 ಪ್ರತಿಶತ ಯಾದವರು, 19 ಪ್ರತಿಶತ ಮುಸ್ಲಿಮರು ಕೂಡಿ ತಂದ ಸರ್ಕಾರಗಳಲ್ಲಿ ನಡೆದ ದಾದಾಗಿರಿ, ಗೂಂಡಾಗಿರಿ ಮತ್ತು ಆರಾಜಕತೆಯೇ ಮೋದಿಗೆ ಒಂದು ವೇದಿಕೆ ತಯಾರು ಮಾಡಿ ಕೊಟ್ಟಿತ್ತು. ಇವತ್ತು 5 ವರ್ಷಗಳ ಅ​ಧಿಕಾರದ ನಂತರ ಯೋಗಿ ಆದಿತ್ಯನಾಥರನ್ನು ಉಳಿದ ಯಾವುದೇ ವಿಷಯದಲ್ಲಿ ಟೀಕಿಸಿದರೂ ಕಾನೂನು ಸ್ಥಿತಿ ಸುಧಾರಣೆ ಆಗಿದೆ ಎನ್ನುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ.

ಇದಕ್ಕೆ ಪ್ರಮುಖ ಕಾರಣ ಯಾದವ ಮತ್ತು ಮುಸ್ಲಿಂ ಬಿಟ್ಟು ಉಳಿದ ಸಮುದಾಯಗಳು ಮುಲಾಯಂ, ಅಖಿಲೇಶ್‌ ಯಾದವ್‌ ಕಾಲದ ಆಡಳಿತವನ್ನು ಯೋಗಿ ಜೊತೆಗೆ ಸಮೀಕರಿಸಿ ನೋಡುವುದು. ಈಗ ನೋಡಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಕುರುಬರು, ಯಡಿಯೂರಪ್ಪ ಇದ್ದಾರೆ ಎಂದು ಲಿಂಗಾಯಿತರದು, ಕುಮಾರಣ್ಣ ಇದ್ದಾರೆ ಎಂದು ಒಕ್ಕಲಿಗರದ್ದೇ ಪೊಲೀಸ್‌ ಸ್ಟೇಷನ್‌ವರೆಗೆ ನಡೆಯುತ್ತದೆ ಎನ್ನಲು ಸಾಧ್ಯವಿಲ್ಲ. 10ರಿಂದ 15 ಪ್ರತಿಶತ ಆಚೀಚೆ ಆದರೂ ಹೆಚ್ಚಾನುಹೆಚ್ಚು ಕಾನೂನಿನ ನಿಯಮಗಳ ಅಡಿಯಲ್ಲಿ ನಡೆಯುತ್ತದೆ. ಆದರೆ ಯುಪಿ, ಬಿಹಾರದಲ್ಲಿ ಹಾಗಿರಲಿಲ್ಲ. ಒಂದು ಸಮುದಾಯದ ವ್ಯಕ್ತಿ ಮುಖ್ಯಮಂತ್ರಿ ಆದರೆ ಕೆಳಗಿನ ಹಂತದವರೆಗೆ ಆ ಸಮುದಾಯದ ಮಾತು ಚಾಲ್ತಿ ಇರುತ್ತದೆ. ಒಂದು ವೇಳೆ ಶಾಸಕರ ವಿರುದ್ಧದ ಆಡಳಿತ ವಿರೋಧಿ​ ಅಲೆ ನಂತರವೂ ಯೋಗಿಗೆ ಲಾಭವಾದರೆ ಅದು ಈ ಕಾನೂನು ಸುವವಸ್ಥೆಯಿಂದ ಮಾತ್ರ.

ಪಂಜಾಬ್‌ನ 'ಡೇರಾ' ಪಾಲಿಟಿಕ್ಸ್, ದಲಿತ ಮತಗಳು ಬೇಕಾದರೆ ಇವರ 'ಆಶೀರ್ವಾದ' ಬೇಕೇ ಬೇಕು!

ಅಖಿಲೇಶ್‌ ವರ್ಸಸ್‌ ಬಾಡಿಗಾರ್ಡ್‌

ಯಾದವ ಬಾಹುಳ್ಯದ ಮೈನಪುರಿಯ ಕರ್ಹಲ್‌ನಿಂದ ಮುಲಾಯಂರ ಸ್ವಂತ ಊರು ಸೈಫೈ 4 ಕಿಲೋಮೀಟರ್‌ ದೂರದಲ್ಲಿದೆ. ಹೀಗಾಗಿ ಇದು ಸುರಕ್ಷಿತ ಕ್ಷೇತ್ರ ಎಂದು ಅಖಿಲೇಶ್‌ ಯಾದವ್‌ ಕರ್ಹಲ್‌ನಿಂದ ಸ್ಪ​ರ್ಧಿಸಿದರೆ, ಬಿಜೆಪಿ ರಾತ್ರೋರಾತ್ರಿ ದಲಿತ ನಾಯಕ, ಒಂದು ಕಾಲದ ಮುಲಾಯಂ ಸಿಂಗ್‌ ಯಾದವರ ಬಾಡಿಗಾರ್ಡ್‌ ಆಗಿದ್ದ ಎಸ್‌.ಪಿ.ಸಿಂಗ್‌ ಬನ್ಸಾಲ್ ಅವರನ್ನು ಕಣಕ್ಕೆ ಇಳಿಸಿದೆ. ಬನ್ಸಾಲ್‌ಗೆ ಮುಲಾಯಂರ ಪಾಲಿಟಿಕ್ಸ್‌ನ ಎಲ್ಲಾ ಒಳ ಹೊಡೆತಗಳೂ ಗೊತ್ತು. ಕರ್ಹಲ್‌ನಲ್ಲಿ 3.71 ಲಕ್ಷ ಮತದಾರರಲ್ಲಿ 1.4 ಲಕ್ಷ ಯಾದವರು, 14 ಸಾವಿರ ಮುಸ್ಲಿಮರಿದ್ದಾರೆ. ಒಂದು ಲಕ್ಷ ಬ್ರಾಹ್ಮಣರು, ಠಾಕೂರರು, ಬನಿಯಾಗಳು ಇದ್ದರೆ, 35 ಸಾವಿರ ಹಿಂದುಳಿದ ಶಾಕ್ಯರು, 15 ಸಾವಿರ ಪಾಲ್‌ಗಳು, 35 ಸಾವಿರ ದಲಿತರು ಇದ್ದಾರೆ. ಎಸ್‌.ಪಿ.ಸಿಂಗ್‌ ಬNೕಲ್‌ ದಲಿತ ವರ್ಗದವರಾಗಿರುವುದರಿಂದ ಆ ಸಮುದಾಯದ ಮತಗಳು ಜೊತೆಗೆ ಮೇಲ್ಜಾತಿಗಳ ಮತಗಳು ಒಟ್ಟುಗೂಡಿದರೆ ಅಖಿಲೇಶ್‌ಗೆ ಒಳ್ಳೆ ಫೈಟ್‌ ಕೊಡಬಹುದು ಎಂದು ಬಿಜೆಪಿ ತಂತ್ರ ಹೂಡಿದೆ. ಅಂದಹಾಗೆ ಮೈನಪುರಿ ಜಿಲ್ಲೆಯ ಇದೇ ಕರ್ಹಲ್‌ನ ಜೈನ್‌ ಇಂಟರ್‌ ಕಾಲೇಜಿನಲ್ಲಿ ಮುಲಾಯಂ ಸಿಂಗ್‌ ಯಾದವ್‌ 1963ರಿಂದ 1967ರ ವರೆಗೆ ಪೊಲಿಟಿಕಲ್‌ ಸೈನ್ಸ್‌ ಅಧ್ಯಾಪಕರಾಗಿದ್ದರು.

ಸಿಧುಗೆ ಎಲ್ಲರೂ ವೈರಿಗಳೇ

ಈ ಪ್ರಾಮಾಣಿಕರು ಎಂದು ಘೋಷಿಸಿಕೊಳ್ಳುವ ರಾಜಕಾರಣಿಗಳ ಒಂದು ಸಮಸ್ಯೆ ಎಂದರೆ, ಅವರಿಗೆ ಯಾರ ಕೆಲಸವೂ ಇಷ್ಟಆಗಲ್ಲ, ಸ್ವತಃ ಅವರು ಯಾರ ಕೆಲಸವೂ ಮಾಡಲ್ಲ. ಕ್ರಿಕೆಟ್‌ನಿಂದ ಕಾಮೆಂಟರಿ ಮಾಡುತ್ತಾ ಬಿಜೆಪಿಗೆ ಬಂದ ನವಜ್ಯೋತ್‌ ಸಿಂಗ್‌ ಸಿಧು, ಅಕಾಲಿದಳದ ಬಾದಲ್‌ ವಿರುದ್ಧ ತಿರುಗಿ ಬಿದ್ದರು. ಸುಖಬೀರ್‌ ಬಾದಲ್‌ರ ಬಾಮೈದ ವಿಕ್ರಂ ಮಜೆಥಿಯಾ ಡ್ರಗ್ಸ್‌ ಮಾರಾಟ ಮಾಡುತ್ತಾನೆ ಎಂದು ಟೀಕಿಸುತ್ತಾ ಇದ್ದ ಸಿಧುಗೆ ಮೋದಿ ಗುಜರಾತ್‌ನಲ್ಲಿ ಇರುವವರೆಗೆ ಜೇಟ್ಲಿ ಮೂಲಕ ಬೆಂಬಲ ಕೊಡುತ್ತಿದ್ದರು. ಆದರೆ 2014ರಲ್ಲಿ ಜೇಟ್ಲಿಯೇ ಅಮೃತಸರಕ್ಕೆ ಹೋಗಿ ನಿಂತಾಗ ಸಿಧು-ಜೇಟ್ಲಿ-ಮೋದಿ ಸಂಬಂಧಗಳು ಕೆಟ್ಟು ಹೋದವು. ಮುಂದೆ ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ ಬಂದ ಸಿಧು, ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ವಿರುದ್ಧ ಹೋರಾಟ ಶುರು ಮಾಡಿ ಅವರನ್ನು ಕುರ್ಚಿಯಿಂದ ಎಬ್ಬಿಸುವಲ್ಲಿ ಯಶಸ್ವಿಯೂ ಆದರು.

ಆದರೆ ಕುರ್ಚಿ ಸಿಧು ಹತ್ತಿರ ಹತ್ತಿರ ಬಂದು ಚರಣ್‌ಜೀತ್‌ ಸಿಂಗ್‌ ಚನ್ನಿ ಬಳಿ ಹೋಯಿತು. ಈಗ ಸಿಧು, ಬಾದಲ್‌ ಮತ್ತು ಅಮರೀಂದರ ಸಿಂಗ್‌ ನಂತರ ಚನ್ನಿ ಮೇಲೆ ಮುನಿಸಿಕೊಂಡಿದ್ದಾರೆ. ಈ ಮುಖ್ಯಮಂತ್ರಿ ಕುರ್ಚಿಯೇ ಹಾಗೆ ನೋಡಿ. ಬೆನ್ನು ಹತ್ತಿದವರನ್ನು ಬಿಟ್ಟು ಬೇರೆಯವರ ಕಡೆಯೇ ಓಡುತ್ತದೆ. ಬರೀ ಕುರ್ಚಿ ಸಿಗಲಿಲ್ಲ ಅಂದರೆ ಪರವಾಗಿಲ್ಲ, ಅಮೃತಸರದಲ್ಲಿ ಸಿಧು ಸೋಲಿಸಲು ಚನ್ನಿ, ಅಮರೀಂದರ್‌ ಸಿಂಗ್‌, ಬಾದಲ್‌ ಎಲ್ಲರೂ ಕೂಡಿ ಕೆಡವಲು ಪ್ರಯತ್ನಿಸುತ್ತಿರುವ ಬಗ್ಗೆ ಸುದ್ದಿಗಳಿವೆ.

ಡೇರಾಗಳು ಮತ್ತು ಬಾಬಾಗಳು

ಗುರು ನಾನಕರು ಸಗುಣ ಮೂರ್ತಿ ಪೂಜೆಯನ್ನು ವಿರೋಧಿ​ಸಿ ಪವಿತ್ರ ಗುರುಗ್ರಂಥ ಸಾಹೇಬ್‌ನ ನಿರ್ಗುಣ ಪೂಜಾ ಪದ್ಧತಿಯ ಜೊತೆಗೆ ಸಿಖ್‌ ಧರ್ಮ ಸ್ಥಾಪನೆ ಮಾಡಿದರು. ಆದರೆ ಗುರುದ್ವಾರಗಳಿಂದಲೂ ಭಾರತೀಯರ ಮಸ್ತಿಷ್ಕದಲ್ಲಿರುವ ಮೇಲು-ಕೀಳು ಹೋಗಲಾಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪಂಜಾಬಿನಲ್ಲಿ 33 ಪ್ರತಿಶತ ಇರುವ ಹಿಂದೂ ಮತ್ತು ಸಿಖ್‌ ದಲಿತರು ಡೇರಾಗಳ ಮೊರೆ ಹೋದರು. ಭಕ್ತರನ್ನು ಉದ್ಧರಿಸಲು ಬಾಬಾಗಳು ಹುಟ್ಟಿಕೊಂಡರು. ಈ ಬಾಬಾಗಳೂ ಭಕ್ತರಿಗೆ ಮನುಷ್ಯ ರೂಪಿ ಭಗವಂತರು. ಮಗು ಹುಟ್ಟಿದರೂ ಬಾಬಾ, ಕಷ್ಟಬಂದರೂ ಬಾಬಾ, ಮದುವೆ ಆಗದಿದ್ದರೂ ಬಾಬಾ, ಮಕ್ಕಳು ಹುಟ್ಟದಿದ್ದರೂ ಬಾಬಾ ಆಶೀರ್ವಾದ.

Hijab Row: ಬಿಜೆಪಿಗೆ ರಾಜಕೀಯ ಲಾಭದ ನಿರೀಕ್ಷೆ, ಕಾಂಗ್ರೆಸ್ ವೋಟ್ ಕಳೆದುಕೊಳ್ಳುವ ಆತಂಕ

ಅದು ಹೇಗೆಂದರೆ ಗುರು ನಾನಕರು ಯಾವ ಅತಿರೇಕಗಳನ್ನು ವಿರೋಧಿ​ಸಲು ಧರ್ಮ ಸ್ಥಾಪನೆ ಮಾಡಿದ್ದರೋ ಆ ಎಲ್ಲಾ ಅತಿರೇಕಗಳು ಡೇರಾಗಳ ಬಾಬಾಗಳ ಮೂಲಕ ವಾಪಸ್‌ ಹುಟ್ಟಿಕೊಂಡವು. ಈಗ ಪಂಜಾಬ್‌ನಲ್ಲಿ 13 ಸಾವಿರ ಹಳ್ಳಿಗಳಲ್ಲಿ 9 ಸಾವಿರ ಡೇರಾಗಳಿವೆ. 117 ಕ್ಷೇತ್ರಗಳ ಪೈಕಿ 60 ಕ್ಷೇತ್ರಗಳಲ್ಲಿ ಡೇರಾಗಳು ಬೆಂಬಲಿಸಿದ ಅಭ್ಯರ್ಥಿಗಳು ಗೆಲ್ಲುತ್ತಾರೆ. ಹೀಗಾಗಿಯೇ ಪ್ರಧಾನಿ ಮೋದಿ ಅವರು ರಾಧೇಸಾಮಿ ಸತ್ಸಂಗ ಡೇರಾ ಮುಖ್ಯಸ್ಥರನ್ನು ಮನೆಗೆ ಕರೆಸಿಕೊಂಡು ಮಾತನಾಡಿದರೆ, ಮುಖ್ಯಮಂತ್ರಿ ಚನ್ನಿ ದಿನವೂ ಒಂದು ಡೇರಾಕ್ಕೆ ಹೋಗಿ ಬರುತ್ತಾರೆ. ಇನ್ನು ಕುಖ್ಯಾತ ಡೇರಾ ಸಚ್ಛಾ ಸೌಧಾದ ಬಾಬಾ ರಾಮ್‌ ರಹೀಮ್‌ನನ್ನು ಚುನಾವಣೆಗೆ ಮುಂಚೆ 15 ದಿನದ ಪೆರೋಲ್‌ ಮೇಲೆ ಬಿಡುಗಡೆ ಮಾಡಲಾಗಿದೆ.

ಬಾದಲರ ಶಿಥಿಲತೆ

ಪಂಜಾಬಿನಲ್ಲಿ 5 ವರ್ಷದ ಹಿಂದಿನವರೆಗೆ ಬಾದಲ್‌ ಕುಟುಂಬ ಇಲ್ಲದೇ ರಾಜಕಾರಣ ನಡೆಯುತ್ತಲೇ ಇರಲಿಲ್ಲ. ಆದರೆ ಈಗ ನೋಡಿ ಬಾದಲ್‌ರ ಅಕಾಲಿದಳ ಏಕದಂ ಶಿಥಿಲಗೊಂಡು, ಆ ಸ್ಥಾನದಲ್ಲಿ ಆಮ್‌ ಆದ್ಮಿ ಪಕ್ಷ ಬಂದು ಕುಳಿತಿದೆ. ಇದಕ್ಕೆ ಪ್ರಮುಖ ಕಾರಣ ಸುಖಬೀರ್‌ ಸಿಂಗ್‌ ಬಾದಲ್‌ ಅವರ ಅತಿರೇಕದ ಕುಟುಂಬ ಪ್ರೇಮ ಮತ್ತು ಬೇಕಾಬಿಟ್ಟಿವರ್ತನೆ. ಉಪ ಮುಖ್ಯಮಂತ್ರಿ ಆಗಿದ್ದಾಗ ಹೆಂಡತಿ ಹರಸಿಂರತ್‌ ಮತ್ತು ಆಕೆಯ ತಮ್ಮ ವಿಕ್ರಂ ಮಜೆಥಿಯಾ ಕುಟುಂಬ ನಡೆಸಿದ ವ್ಯವಹಾರಗಳು ಅಧಿ​ಕಾರ ಕಳೆದುಕೊಂಡು 5 ವರ್ಷದ ನಂತರವೂ ಬಾದಲ್‌ ಮೇಲಿನ ಸಿಟ್ಟನ್ನು ಜೀವಂತವಾಗಿ ಇಟ್ಟಿವೆ. ಪಂಜಾಬ್‌ ನ ಡ್ರಗ್ಸ್‌ ಜಾಲದ ಹಿಂದೆ ಮಜೆಥಿಯಾ ಕುಟುಂಬ ಇದೆ ಎನ್ನುವ ಗುಸುಗುಸು ಕೂಡ ಬಾದಲರ ಇವತ್ತಿನ ಸ್ಥಿತಿಗೆ ಕಾರಣ. ಅತಿಯಾದ ಕುಟುಂಬದ ಹಸ್ತಕ್ಷೇಪ, ವ್ಯವಹಾರಗಳು ಇವತ್ತು ಅಕಾಲಿದಳವನ್ನು ಪ್ರಕಾಶ್‌ ಸಿಂಗ್‌ ಬಾದಲರ ಕಣ್ಣ ಮುಂದೆಯೇ ಕಾಂಗ್ರೆಸ್‌ ಮತ್ತು ಆಮ್‌ ಆದ್ಮಿ ನಂತರದ ಮೂರನೇ ಸ್ಥಾನಕ್ಕೆ ಬಿಜೆಪಿ ಜೊತೆ ಪೈಪೋಟಿಗೆ ಇಳಿಯುವಂತೆ ಮಾಡಿವೆ.

ಬಿಜೆಪಿಗೆ ಆಪ್‌ ತಲೆನೋವು

ಬಿಜೆಪಿ ಮತ್ತು ಮೋದಿಗೆ ಎದುರಾಳಿ ಕಾಂಗ್ರೆಸ್‌ ಆಗಿಬಿಟ್ಟರೆ ಭಾರೀ ಪ್ರೀತಿ. ವಂಶವಾದ, ಗಾಂ​ಧಿ ಕುಟುಂಬ, ಭ್ರಷ್ಟಾಚಾರ, ಮುಸ್ಲಿಂ ತುಷ್ಟೀಕರಣ, ನೆಹರು, ಪಾಕಿಸ್ತಾನ, ಚೀನಾ ಹೀಗೆ ನೂರೆಂಟು ಅಸ್ತ್ರಗಳು. ಆದರೆ ಅದೇ ಕಾಂಗ್ರೆಸ್ಸಿನಿಂದ ಅಂತರ ಕಾಯ್ದುಕೊಂಡ ಪ್ರಾದೇಶಿಕ ಪಕ್ಷ ಎದುರಾಳಿ ಇದ್ದರೆ ಬಿಜೆಪಿ ಅಸ್ತ್ರಗಳು ಸ್ವಲ್ಪ ಮೊನಚು ಕಳೆದುಕೊಳ್ಳುತ್ತವೆ. ಅದರಲ್ಲೂ ತಕ್ಕ ಮಟ್ಟಿಗೆ ಪ್ರಾಮಾಣಿಕ ಎನಿಸಿಕೊಂಡಿರುವ ಮಮತಾ, ನವೀನ್‌ ಪಟ್ನಾಯಕ್‌, ಅರವಿಂದ ಕೇಜ್ರಿವಾಲ್‌ ಎಂದರೆ ಬಿಜೆಪಿಗೆ ತಲೆನೋವು ಜಾಸ್ತಿ.

ಈಗ ಪಂಜಾಬಿನಲ್ಲಿ ದಿಲ್ಲಿಯಿಂದ ಬಂದ ಆಮ್‌ ಆದ್ಮಿ ಪಕ್ಷ ಗೆದ್ದರೆ ಬಿಜೆಪಿಗೆ ಭವಿಷ್ಯದ ದೃಷ್ಟಿಯಿಂದ ತಲೆನೋವು ಜಾಸ್ತಿ. ಏಕೆಂದರೆ ಆಮ್‌ ಆದ್ಮಿ ಪಕ್ಷಕ್ಕೆ ಜಾಟ್‌, ಮರಾಠ, ಒಕ್ಕಲಿಗ, ರೆಡ್ಡಿ ಹೀಗೆ ಜಾತಿಯ ಹಣೆಪಟ್ಟಿಇಲ್ಲ. ಎರಡನೆಯದು ಮಧ್ಯಮ ವರ್ಗವನ್ನು ಸೆಳೆಯುವ ಉಳಿದೆಡೆ ಬೆಳೆಯುವ ಶಕ್ತಿಯಿದೆ. ಮೂರನೆಯದು ಕೇಜ್ರಿವಾಲ್‌ ಒಂದು ರೀತಿಯಲ್ಲಿ ನವ ಸಮಾಜವಾದಿ. ಹೀಗಾಗಿ ಬಡವರಿಗೆ ಉಚಿತ ಸೌಲಭ್ಯ ಕೊಡುವ ಬಗ್ಗೆ ಜಾಸ್ತಿ ಮಾತನಾಡುತ್ತಾರೆ. ಇವತ್ತಿನ ಸ್ಥಿತಿಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಬಿಟ್ಟರೆ ದೇಶದಲ್ಲಿ ಬೆಳೆಯುವ ಶಕ್ತಿ ಇರುವುದು ಆಮ್‌ ಆದ್ಮಿಗೆ ಮಾತ್ರ. ಹೀಗಾಗಿ ದಿಲ್ಲಿ ಜೊತೆಗೆ ಪಂಜಾಬಿನಲ್ಲೂ ಆಮ್‌ ಆದ್ಮಿ ಗೆದ್ದರೆ ಬಿಜೆಪಿಗೆ ಸಮಸ್ಯೆ ಜಾಸ್ತಿ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

Follow Us:
Download App:
  • android
  • ios