ಫಿರೋಜಾಬಾದ್ ಪೊಲೀಸ್ ಮೆಸ್‌ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಿದ್ದನ್ನು ವಿರೋಧಿಸಿ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸುತ್ತಿದ್ದ ಯುಪಿ ಪೊಲೀಸ್ ಪೇದೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಸೈನಿಕರೊಬ್ಬರು ತಮಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ವಿಡಿಯೋ ಮಾಡಿದ್ದು ಕೆಲ ವರ್ಷಗಳ ಹಿಂದೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಈಗ ಅದೇ ರೀತಿ, ಪೊಲೀಸ್ ಕಾನ್ಸ್ಟೇಬಲ್‌ವೊಬ್ಬರು ಆಹಾರದ ಗುಣಮಟ್ಟ ಕೆಟ್ಟದಾಗಿದೆಯೆಂದು ದೂರಿ ರಸ್ತೆಯಲ್ಲೇ ಕಣ್ಣೀರಿಟ್ಟಿದ್ದಾರೆ. ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಪೊಲೀಸ್ ಕಾನ್ಸ್ಟೇಬಲ್ ರಸ್ತೆಯಲ್ಲಿ ನಿಂತುಕೊಂಡು ಪೊಲೀಸ್ ಮೆಸ್‌ನಲ್ಲಿ ನೀಡುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ದೂರಿ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಹೆಚ್ಚು ಜನರು ರಸ್ತೆಯಲ್ಲಿ ನಿಂತುಕೊಂಡು ಅವರು ಅಳುವುದನ್ನು ನೋಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಂದು ಪ್ಲೇಟ್ ರೋಟಿ, ದಾಲ್ ಹಾಗೂ ಅನ್ನವನ್ನು ಇಟ್ಟುಕೊಂಡು ಕಾನ್ಸ್ಟೇಬಲ್ ಮನೋಜ್ ಕುಮಾರ್ ಕಣ್ಣೀರಿಟ್ಟಿರುವುದನ್ನು ನೋಡಬಹುದು. ಅಲ್ಲದೆ, ಅವರು ಕಣ್ಣೀರಿಟ್ಟಿದ್ದನ್ನು ನೋಡಿದ ಹಿರಿಯ ಅಧಿಕಾರಿಯೊಬ್ಬರು ಅವರನ್ನು ಸಂತೈಸಿ ವಾಪಸ್ ಪೊಲೀಸ್ ಠಾಣೆಯೊಳಗೆ ಕರೆದೊಯ್ಯಲು ಪ್ರಯತ್ನಿಸಿದರು. ಜನರು ಸುತ್ತುವರಿದ ಈ ವಿಡಿಯೋದಲ್ಲಿ, ನಾನು ಆಹಾರದ ಬಗ್ಗೆ ಹಿರಿಯರಿಗೆ ದೂರು ನೀಡಿದ್ದೆ, ಆದದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಅದರ ಬದಲು ನನ್ನನ್ನು ಕೆಲಸದಿಂದ ತೆಗೆದುಹಾಕುವ ಬಗ್ಗೆ ಬೆದರಿಕೆ ಹಾಕುತ್ತಿದ್ದಾರೆ ಎಂದೂ ಮನೋಜ್ ಕುಮಾರ್ ಈ ವಿಡಿಯೋದಲ್ಲಿ ಹೇಳಿಕೊಂಡಿದ್ದು, ರಸ್ತೆಯಲ್ಲಿ ಹೋಗುತ್ತಿದ್ದ ಜನರು ಸಹ ಅವರನ್ನು ಸುತ್ತುವರಿದಿದ್ದರು.
ಮೆಸ್‌ನಲ್ಲಿ ಪೊಲೀಸ್ ಸಿಬ್ಬಂದಿಗೆ ನೀಡುತ್ತಿರುವ ದಾಲ್‌ನಲ್ಲಿ ಹೆಚ್ಚು ನೀರಿರುತ್ತದೆ ಹಾಗೂ ರೋಟಿ ಸರಿಯಾಗಿ ಬೆಂದಿರುವುದಿಲ್ಲ ಎಂದೂ ಅವರು ಆರೋಪಿಸಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರ ಪೊಲೀಸ್ ಸಿಬ್ಬಂದಿಗೆ ಪೌಷ್ಠಿಕ ಆಹಾರವನ್ನು ಖಚಿತಪಡಿಸಿಕೊಳ್ಳಲು ಅನುದಾನ ನೀಡುತ್ತದೆ ಎಂದು ಮುಖ್ಯಮಂತ್ರಿ ಈ ಹಿಂದೆ ಘೋಷಿಸಿದ್ದರು. ಆದರೆ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಿದ ಬಳಿಕ ನಮಗೆ ಸಿಗುತ್ತಿರುವುದು ಇದು ಎಂದೂ ಅವರು ಆರೋಪಿಸಿದ್ದಾರೆ. ನಮಗೆ ಸರಿಯಾದ ಆಹಾರ ಸಿಗದಿದ್ದರೆ ಪೊಲೀಸರು ಕೆಲಸ ಮಾಡುವುದು ಹೇಗೆ ಎಂದೂ ಕಾನ್ಸ್ಟೇಬಲ್ ಕೇಳಿದ್ದಾರೆ.
ಪ್ರಾಣಿಗಳೂ ಇದನ್ನು ತಿನ್ನಲ್ಲ..!
ಅಲ್ಲದೆ, ಮತ್ತೊಂದು ವಿಡಿಯೋವನ್ನೂ ಮಾಡಿರುವ ಪೊಲೀಸ್ ಕಾನ್ಸ್ಟೇಬಲ್, ಇದನ್ನು ಪ್ರಾಣಿಗಳೂ ತಿನ್ನಲ್ಲ ಎಂದು ಆಹಾರದ ಪ್ಲೇಟ್ ಹಿಡಿದುಕೊಂಡು ಡಿವೈಡರ್ ಮೇಲೆ ಕುಳಿತುಕೊಂಡು ಜನರಿಗೆ ಹೇಳಿದ್ದಾರೆ. ಈ ವಿಡಿಯೋ ಸಹ ವೈರಲ್ ಆಗಿದೆ.
ಈ ವಿಡಿಯೋಗಳು ವೈರಲ್ ಆದ ಬಳಿಕ ಇದಕ್ಕೆ ಸಂಬಂಧಪಟ್ಟಂತೆ ಟ್ವೀಟ್ ಮಾಡಿದ ಫಿರೋಜಾಬಾದ್ ಪೊಲೀಸರು, ಕಾನ್ಸ್ಟೇಬಲ್ ಮನೋಜ್ ಕುಮಾರ್ ಶಿಸ್ತಿನ ಸಮಸ್ಯೆಗಳ ಇತಿಹಾಸವನ್ನು ಹೊಂದಿದ್ದಾರೆ ಮತ್ತು ಅಕ್ರಮ ಹಾಗೂ ಅಶಿಸ್ತಿನ ಮೇಲೆ ಈ ಹಿಂದೆ 15 ಬಾರಿ ಶಿಕ್ಷೆಗೆ ಒಳಗಾಗಿದ್ದಾರೆ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ. ಅಲ್ಲದೆ, ಈ ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
