ನವದೆಹಲಿ(ಜು.26): ಉಗ್ರರ ನೆಲೆ ಹುಡುಕಿ ಧ್ವಂಸ ಮಾಡುವ ಶಕ್ತಿ ಹೊಂದಿರುವ ಸಶಸ್ತ್ರ ಪ್ರಿಡೇಟರ್‌ ಬಿ ಮತ್ತು ಹಾಕ್‌ ಕಣ್ಗಾವಲು ಡ್ರೋನ್‌ಗಳ ಮಾರಾಟದ ಮೇಲಿನ ನಿರ್ಬಂಧವನ್ನು ಅಮೆರಿಕ ಸಡಿಲಗೊಳಿಸಿದೆ. ಹೀಗಾಗಿ ಗಡಿಯಲ್ಲಿ ಕಣ್ಗಾವಲು ಮತ್ತು ದಾಳಿಗೆ ಅಮೆರಿಕದ ಡ್ರೋನ್‌ ಖರೀದಿಯ ಭಾರತದ ಆಶಯಕ್ಕೆ ಬಲ ಸಿಕ್ಕಿದೆ.

ಟ್ರಂಪ್‌ ಸರ್ಕಾರದ ಹೊಸ ಆದೇಶದ ಅನ್ವಯ ಗಂಟೆಗೆ 800 ಕಿ.ಮೀ ಸಾಗಬಲ್ಲದವರೆಗಿನ ವೇಗದ ಡ್ರೋನ್‌ಗಳನ್ನು ರಫ್ತು ಮಾಡಲು ಅವಕಾಶ ಮಾಡಿಕೊಡಲಾಗಿದೆ. ಪ್ರಿಡೇಟರ್‌- ಬಿ ಡ್ರೋನ್‌ 4 ಕ್ಷಿಪಣಿ ಹಾಗೂ 500 ಪೌಂಡ್‌ ತೂಕದ ಎರಡು ಲೇಸರ್‌ ನಿರ್ದೇಶಿತ ಬಾಂಬ್‌ ಹೊತ್ತು ಕರಾರುವಕ್ಕಾದ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಚೀನಾ ಕೂಡ ಇದೇ ರೀತಿಯ ವಿಂಗ್‌ ಲೂಂಗ್‌ ಶಸ್ತ್ರಾಸ್ತ್ರ ಡ್ರೋನ್‌ಗಳನ್ನು ತನ್ನ ಮಿತ್ರ ರಾಷ್ಟ್ರ ಪಾಕಿಸ್ತಾನಕ್ಕೆ ಪೂರೈಸಿದೆ. ಹೀಗಾಗಿ ಭಾರತಕ್ಕೆ ಅಮೆರಿಕ ಶಸ್ತ್ರಾಸ್ತ್ರ ಡ್ರೋನ್‌ಗಳ ಪೂರೈಕೆಗೆ ಒಪ್ಪಿರುವುದು ಮಹತ್ವ ಪಡೆದಿದೆ.

ಮನ್‌ ಕೀ ಬಾತ್: ಕಾರ್ಗಿಲ್ ವೀರರು, ಅವರನ್ನು ಹೆತ್ತ ತಾಯಂದಿರಿಗೆ ಮೋದಿ ನಮನ!

ಡ್ರೋನ್‌ಗಳ ವಿಶೇಷತೆ ಏನು?

ಇವು ದೂರದಿಂದಲೇ ಕಂಪ್ಯೂಟರ್‌ ಮೂಲಕ ನಿರ್ವಹಿಸಬಲ್ಲ ಡ್ರೋನ್‌. ಜಿಪಿಎಸ್‌ ಆಧಾರದ ಮೇಲೆ ನಿರ್ದಿಷ್ಟಪ್ರದೇಗಳ ಮೇಲೆ ದಾಳಿ ನಡೆಸುತ್ತವೆ. ಡ್ರೋನ್‌ಗಳನ್ನು ನಿಯಂತ್ರಣ ಕೊಠಡಿಯಲ್ಲಿರುವ ಪೈಲಟ್‌ಗಳು ನಿಯಂತ್ರಿಸುತ್ತಾರೆ. ಒಮ್ಮೆ ಹಾರಾಟ ಆರಂಭಿಸಿದ ಬಳಿಕ ಮಾನವನ ನಿಯಂತ್ರಣವಿಲ್ಲದೇ ಕಾರ್ಯನಿರ್ವಹಿಸುವ ಸಾಮರ್ಥ್ಯವೂ ಈ ಡ್ರೋನ್‌ಗಳಿಗೆ ಇದೆ. ಹೀಗಾಗಿ ಉಗ್ರ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಈ ಡ್ರೋನ್‌ಗಳು ಹೆಚ್ಚಾಗಿ ಬಳಕೆಯಲ್ಲಿವೆ.