* ಕಾಬೂಲ್‌ನಲ್ಲಿ ಅಮೆರಿಕದಿಂದ ಮತ್ತೆ ಭಯೋತ್ಪಾದಕರ ಬೇಟೆ* ವಿಮಾನ ನಿಲ್ದಾಣದ ಮೇಲೆ ಆತ್ಮಾಹುತಿ ದಾಳಿಗೆ ಹೊರಟಿದ್ದ ಉಗ್ರರ ಸಂಹಾರ* ಐಸಿಸ್‌-ಕೆ ಮೇಲೆ ನಿಯಂತ್ರಿತ ಡ್ರೋನ್‌ ದಾಳಿ: ಹಲವು ಭಯೋತ್ಪಾದಕರ ಬಲಿ

ವಾಷಿಂಗ್ಟನ್‌/ಕಾಬೂಲ್‌(ಆ.30): 180ಕ್ಕೂ ಹೆಚ್ಚು ಜನರನ್ನು ಬಲಿಪಡೆದ ಗುರುವಾರದ ಭೀಕರ ಆತ್ಮಾಹುತಿ ದಾಳಿಯ ಕಹಿ ನೆನಪು ಮರೆಯುವ ಮುನ್ನವೇ ಮತ್ತೊಂದು ಅಂಥದ್ದೇ ಸಂಭಾವ್ಯ ದಾಳಿಯಿಂದ ಕಾಬೂಲ್‌ ಭಾನುವಾರ ಸ್ವಲ್ಪದರಲ್ಲೇ ಪಾರಾಗಿದೆ. ಕಾಬೂಲ್‌ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಲೆಂದೇ ಸಮೀಪದ ಮನೆಯೊಂದರಿಂದ ವಾಹನ ಏರಿ ಹೊರಟಿದ್ದ ಆತ್ಮಾಹುತಿ ದಾಳಿಕೋರರರ ಮೇಲೆ ಅಮೆರಿಕ ಡ್ರೋನ್‌ ದಾಳಿ ನಡೆಸಿ ಎಲ್ಲರನ್ನೂ ಹತ್ಯೆಗೈದಿದೆ. ಇದರೊಂದಿಗೆ ಮತ್ತೊಂದು ಸಂಭಾವ್ಯ ಭೀಕರ ದುರಂತ ತಪ್ಪಿದೆ.

ಗುರುವಾರದ ದಾಳಿಯ ಬಳಿಕ ಐಸಿಸ್‌-ಕೆ ಸಂಚುಕೋರರ ಮೇಲೆ ಅಮೆರಿಕ ವಾಯುದಾಳಿ ನಡೆಸಿ ಅವರನ್ನು ಹತ್ಯೆಗೈದಿತ್ತು. ಅದರ ಹೊರತಾಗಿಯೂ ಬೆದರದ ಐಸಿಸ್‌ ಉಗ್ರರು ಭಾನುವಾರ ಮತ್ತೊಂದು ಸಂಚಿಗೆ ಸಜ್ಜಾಗಿದ್ದರು.

ಇದರ ಖಚಿತ ಸುಳಿವು ಪಡೆದ ಅಮೆರಿಕದ ಸೇನೆ, ಭಾನುವಾರ ಸಂಜೆ ವೇಳೆಗೆ ವಿಮಾನ ನಿಲ್ದಾಣದ ಸಮೀಪದಲ್ಲೇ ಇರುವ ಜನನಿಬಿಡ ಸ್ಥಳವೊಂದರ ಮೇಲೆ ಡ್ರೋನ್‌ ದಾಳಿ ನಡೆಸಿ, ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದೆ. ವಾಹನದ ಮೇಲೆ ಡ್ರೋನ್‌ ದಾಳಿ ನಡೆಸಿದ ಬೆನ್ನಲ್ಲೇ, ಸ್ಥಳದಲ್ಲಿ ಭಾರೀ ಪ್ರಮಾಣದ ಸರಣಿ ಸ್ಫೋಟ ನಡೆದಿವೆ. ಇದು, ಉಗ್ರರ ಬಳಿ ಭಾರೀ ಪ್ರಮಾಣದ ಸ್ಫೋಟಕ ಪದಾರ್ಥಗಳಿದ್ದವು ಎಂಬುದನ್ನು ಖಚಿತಪಡಿಸಿದೆ. ಈ ಘಟನೆಯಲ್ಲಿ ಎಷ್ಟುಜನರು ಹತರಾಗಿದ್ದಾರೆ ಎಂಬ ಮಾಹಿತಿ ಇಲ್ಲ ಎಂದು ಅಮೆರಿಕ ಸೇನೆ ಹೇಳಿದೆ.

ಆರಂಭದಲ್ಲಿ ಇದೊಂದು ಉಗ್ರ ದಾಳಿ ಎಂಬ ಆತಂಕ ಉಂಟಾಗಿತ್ತಾದರೂ, ಬಳಿಕ ಅಮೆರಿಕ ಸೇನೆಯೇ ಅಧಿಕೃತ ಹೇಳಿಕೆ ನೀಡಿ, ಐಸಿಸ್‌-ಕೆ ಉಗ್ರರನ್ನು ಗುರಿಯಾಗಿಸಿ ತಾನು ದಾಳಿ ನಡೆಸಿದ್ದಾಗಿ ಮಾಹಿತಿ ನೀಡಿತು.

ಖಚಿತ ಮಾಹಿತಿ ಪಡೆದು ದಾಳಿ:

ಶನಿವಾರ ರಾತ್ರಿಯಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹೇಳಿಕೆಯೊಂದನ್ನು ನೀಡಿ, ‘ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ತೀರಾ ವಿಷಮವಾಗಿದ್ದು, ಕಾಬೂಲ್‌ ವಿಮಾನ ನಿಲ್ದಾಣದ ಮೇಲೆ ಇನ್ನೊಂದು ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ. ಮುಂದಿನ 24ರಿಂದ 36 ತಾಸಿನ ಅವಧಿಯಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿರುವ ಅಮೆರಿಕನ್ನರ ರಕ್ಷಣೆಗೆ ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಕಮಾಂಡರ್‌ಗಳಿಗೆ ಸೂಚಿಸಿದ್ದೇನೆ’ ಎಂದು ಹೇಳಿದ್ದರು. ಅಲ್ಲದೆ, ಗುರುವಾರದ ಭಯೋತ್ಪಾದಕ ದಾಳಿ ನಡೆಸಿದವರ ವಿರುದ್ಧ ಪ್ರತೀಕಾರ ಕೈಗೊಳ್ಳುವ ತಮ್ಮ ಘೋಷಣೆಯನ್ನು ಪುನರುಚ್ಚರಿಸಿದ್ದರು. ‘ಶನಿವಾರ ಐಸಿಸ್‌-ಕೆ ಉಗ್ರರ ಮೇಲೆ ನಡೆಸಿದ ಡ್ರೋನ್‌ ದಾಳಿ ಕೊನೆಯದಲ್ಲ. ಮುಗ್ಧರನ್ನು ಬಲಿಪಡೆದವರ ಬೇಟೆ ಆಡುವುದನ್ನು ಮುಂದುವರಿಸಲಿದ್ದೇವೆ. ನಮ್ಮ ಯೋಧರು ಹಾಗೂ ಅಮೆರಿಕಕ್ಕೆ ಯಾರಾದರೂ ಧಕ್ಕೆ ಮಾಡಿದರೆ, ಅದಕ್ಕೆ ದಿಟ್ಟಉತ್ತರ ನೀಡುತ್ತೇವೆ’ ಎಂದು ಗುಡುಗಿದ್ದರು. ಅದರ ಬೆನ್ನಲ್ಲೇ ಉಗ್ರರ ಇರುವಿಕೆಯ ನಿಖರ ಮಾಹಿತಿ ಪಡೆದು ಅವರ ಮೇಲೆ ದಾಳಿ ದೊಡ್ಡ ಅನಾಹುತವೊಂದನ್ನು ತಪ್ಪಿಸಿದೆ.

ಎಲ್ಲಿ?

ಕಾಬೂಲ್‌ನ ಹಮೀದ್‌ ಕರ್ಜೈ ವಿಮಾನ ನಿಲ್ದಾಣದ ಸಮೀಪದ ಜನವಸತಿ ಪ್ರದೇಶ

ಯಾವಾಗ?

ಭಾನುವಾರ ಸಂಜೆ ಭಾರತೀಯ ಕಾಲಮಾನ 6.30ರ ವೇಳೆ

ಏನಾಯ್ತು?

ಏರ್‌ಪೋರ್ಟ್‌ ಮೇಲೆ ದಾಳಿಗೆ ಆತ್ಮಾಹುತಿ ದಾಳಿಕೋರರು ವಾಹನ ಏರಿ ಹೊರಟ ಖಚಿತ ಸುದ್ದಿ ಹಿನ್ನೆಲೆಯಲ್ಲಿ ಅವರ ಮೇಲೆ ಅಮೆರಿಕದ ಡ್ರೋನ್‌ ದಾಳಿ. ಸ್ಥಳದಲ್ಲಿ ಭಾರೀ ಬೆಂಕಿ. ಸರಣಿ ಸ್ಫೋಟ. ಹಲವು ಉಗ್ರರ ಸಾವು.