ಉತ್ತರ ಪ್ರದೇಶದ ಮಹಿಳೆಯೊಬ್ಬರು ಮನೆಕೆಲಸದಿಂದಾಗಿ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಫಾಲೋವರ್ಸ್‌ಗಳು ಕಡಿಮೆಯಾಗಿದ್ದಾರೆ ಎಂದು ಗಂಡನಿಗೆ ಡೈವೋರ್ಸ್ ನೀಡಲು ನಿರ್ಧರಿಸಿದ್ದಾರೆ. ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಲಕ್ನೋ (ಜೂ.11): ವರದಕ್ಷಿಣೆ ವಿಷಯ ಅಥವಾ ಕ್ರೌರ್ಯಕ್ಕಾಗಿ ಮಹಿಳೆಯರು ತಮ್ಮ ಗಂಡಂದಿರನ್ನು ತೊರೆದ ಪ್ರಕರಣಗಳನ್ನು ಸಾಕಷ್ಟು ನೋಡಿದ್ದೇವೆ. ಆದರೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ, ಮನೆಯ ದಿನನಿತ್ಯದ ಕೆಲಸಗಳಿಂದಾಗಿ ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಹೆಚ್ಚಿನ ರೀಲ್ಸ್‌ಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ ಇದರಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋವರ್‌ಗಳು ಕಡಿಮೆಯಾಗಿದೆ ಎನ್ನುವ ಕಾರಣ ನೀಡಿ ಮಹಿಳೆಯೊಬ್ಬಳು ಗಂಡನಿಗೆ ಡೈವೋರ್ಸ್ ನೀಡುವ ನಿರ್ಧಾರ ಮಾಡಿದ್ದಾಳೆ.
ಇನ್ಸ್‌ಟಾಗ್ರಾಮ್‌ನಲ್ಲಿ ತನ್ನ ಅಕೌಂಟ್‌ನಲ್ಲಿನ ಫಾಲೋವರ್ಸ್‌ಗಳ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಸಿಟ್ಟಾಗಿರುವ ಮಹಿಳೆ ಈ ಕುರಿತಾಗಿ ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದಾಳೆ. ಪ್ರತಿದಿನ ಮನೆಯ ಕೆಲಸಗಳನ್ನು ಮಾಡಲು ಗಂಡ ಒತ್ತಾಯ ಮಾಡುತ್ತಿದ್ದಾಣೆ ಎಂದು ಪತ್ನಿ ದೂರಿದ್ದಾಳೆ.
"ಮನೆಯ ಪಾತ್ರೆ ತೊಳೆಯುವುದು ಮತ್ತು ಮನೆ ಸ್ವಚ್ಛಗೊಳಿಸುವುದರಲ್ಲಿ ನಾನು ನಿರತರಾಗಿದ್ದರಿಂದ ನನ್ನ ಫಾಲೋವರ್ಸ್‌ಗಳ ಸಂಖ್ಯೆ ಕಡಿಮೆಯಾಗಿದ್ದಾರೆ. ನನಗೆ ರೀಲ್‌ಗಳನ್ನು ಮಾಡಲು ಸಮಯ ಸಿಗಲಿಲ್ಲ" ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರತಿದಿನ ಎರಡು ರೀಲ್‌ಗಳನ್ನು ಪೋಸ್ಟ್ ಮಾಡುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಇನ್ನೊಂದೆಡೆ ಪತಿ ಕೂಡ ತನ್ನ ಹೆಂಡತಿಯ ವಿರುದ್ಧ ಪ್ರತಿದೂರು ದಾಖಲಿಸಿದ್ದು, ಅವಳು ಯಾವಾಗಲೂ ರೀಲ್‌ಗಳನ್ನು ಮಾಡುವುದರಲ್ಲೇ ನಿರತಳಾಗಿರುವುದರಿಂದ ಮನೆಕೆಲಸಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾನೆ. ರೀಲ್‌ಗಳನ್ನು ಮಾಡಲು ಬಿಡದಿದ್ದರೆ ತನ್ನನ್ನು ಬಿಟ್ಟು ಹೋಗುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಆತ ಹೇಳಿದ್ದಾನೆ.
ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋವರ್‌ಗಳು ಕಡಿಮೆಯಾದ ನಂತರ ಪತ್ನಿ ತನ್ನ ಗಂಡನನ್ನು ಬಿಟ್ಟು ಪೋಷಕರ ಬಳಿಗೆ ಮರಳಿದ್ದಾಳೆ ಎಂದು ಮೂಲಗಳು ತಿಳಿಸಿವೆ.ಈ ವಿಷಯವನ್ನು ಪರಿಹರಿಸುವಲ್ಲಿ ಪೊಲೀಸರಿಗೆ ಕೂಡ ಕಷ್ಟವಾಗಿದೆ. ಪತ್ನಿ ಪ್ರತಿದಿನ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರೀಲ್‌ಗಳನ್ನು ಪೋಸ್ಟ್ ಮಾಡುವಲ್ಲಿ ಹಠ ಹಿಡಿದಿದ್ದರು ಎಂದು ಮೂಲಗಳು ತಿಳಿಸಿವೆ. "ವಿಷಯ ಬಗೆಹರಿದಿದ್ದು, ಮಹಿಳೆ ತನ್ನ ಗಂಡನ ಬಳಿಗೆ ಮರಳಿದ್ದಾಳೆ" ಎಂದು ಮಹಿಳಾ ಠಾಣಾ ಉಸ್ತುವಾರಿ ಅರುಣಾ ರೈ ತಿಳಿಸಿದ್ದಾರೆ.


