ಮೀರತ್(ಡಿ.28): ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಉತ್ತರಪ್ರದೇಶದಲ್ಲಿ ಹೋರಾಟ ತೀವ್ರವಾಗಿದ್ದು, ರಾಜ್ಯದಾದ್ಯಂತ ಪೊಲೀಸ್ ಪಹರೆ ಚುರುಕುಗೊಂಡಿದೆ. ಶಾಂತಿ ಸ್ಥಾಪನೆಯ ಜವಾಬ್ದಾರಿ ಹೊತ್ತಿರುವ ಪೊಲೀಸ್ ಇಲಾಖೆ, ರಾಜ್ಯದ ಮೂಲೆ ಮೂಲೆಯಲ್ಲಿ ಪಹರೆ ಕಾಯುತ್ತಿದೆ. 

ಮೀರತ್‌ನಲ್ಲಿ ಅಲ್ಪಸಂಖ್ಯಾತರು ಅಧಿಕ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಲ್ಪಸಂಖ್ಯಾತರ ಕುರಿತು ಕೋಮುವಾದಿ ಹೇಳಿಕೆ ನೀಡಿದ ವಿಡಿಯೋ ಇದೀಗ ವೈರಲ್ ಆಗಿದೆ.

ಮೀರತ್‌ನ ಪೊಲೀಸ್ ವರಿಷ್ಠಾಧಿಕಾರಿ (ನಗರ) ಅಖಿಲೇಶ್ ನಾರಾಯಣ್ ಸಿಂಗ್, ನಮಾಜ್ ಮುಗಿಸಿ ಮನೆಯತ್ತ ತೆರಳುತ್ತಿದ್ದ ಇಬ್ಬರು ಅಲ್ಪಸಂಖ್ಯಾತರನ್ನು ತಡೆದಿದ್ದಲ್ಲದೇ ನಿಮ್ಮೆಲ್ಲರನ್ನು ಸರ್ವನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಇಬ್ಬರೂ ವ್ಯಕ್ತಿಗಳು ಹಾಕಿಕೊಂಡಿದ್ದ ಬಟ್ಟೆಯನ್ನು ಪ್ರಶ್ನಿಸಿದ ನಾರಾಯಣ್ ಸಿಂಗ್, ನಿಮಗೆ ಭಾರತ ಬೇಡವಾದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಏರು ಧ್ವನಿಯಲ್ಲಿ ಗದರಿಸಿದ್ದಾರೆ.

ಭಾರತದಲ್ಲಿ ನೆಲೆಸಿ ಪಾಕಿಸ್ತಾನ ಪರ ಘೋಷಣೆ ಕೂಗಿದರೆ ಹುಷಾರ್ ಎಂದು ನಾರಾಯಣ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಅಲ್ಪಸಂಖ್ಯಾತರಿಗೆ ಎಸ್‌ಪಿ ನಾರಾಯಣ್ ಸಿಂಗ್ ಬೆದರಿಕೆಯೊಡ್ಡುತ್ತಿರುವ ವಿಡಿಯೋಗೆ ಇದೀಗ ವಿರೋಧ ವ್ಯಕ್ತವಾಗಿದೆ.

ಆದರೆ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿರುವ ನಾರಾಯಣ್ ಸಿಂಗ್, ಪೊಲೀಸರು ರಸ್ತೆಯಲ್ಲಿ ಸಾಗುತ್ತಿದ್ದಾಗ ಕೆಲವು ಯುವಕರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದರು. ಇದರಿಂದ ಕೆರಳಿದ ನಾನು ಪಾಕಿಸ್ತಾನ ಅಷ್ಟು ಇಷ್ಟವಾದರೇ ಅಲ್ಲಿಗಗೇ ಹೋಗಿ ಎಂದು ಗದಿರಿಸದ್ದಾಗಿ ಹೇಳಿದ್ದಾರೆ.

ಇನ್ನು ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿರುವ ಮೀರತ್‌ನ ಹೆಚ್ಚುವರಿ ಮಹಾನಿರ್ದೇಶಕ ಪ್ರಶಾಂತ್ ಕುಮಾರ್, ಕಲ್ಲುಗಳನ್ನು ಹೊಡೆಯುತ್ತಾ ಭಾರತ ವಿರೋಧಿ ಪಾಕ್ ಪರ ಘೋಷಣೆಗಳನ್ನು ಅಲ್ಲಿ ಕೂಗಲಾಗುತ್ತಿತ್ತು. ಹೀಗಾಗಿ ಪರಿಸ್ಥಿತಿಯನ್ನು ತಹಬದಿಗೆ ತರಲು ನಾರಾಯಣ್ ಸಿಂಗ್ ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ಸಮರ್ಥನೆ ನೀಡಿದ್ದಾರೆ.