ಪ್ರಯಾಣಿಕರ ಆಕರ್ಷಣೆಗೆ ರೈಲು ಟಿಕೆಟ್‌ನಲ್ಲಿ ಶೇ.25ರವರೆಗೂ ರಿಯಾಯ್ತಿ
ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯುಟಿವ್ ಕ್ಲಾಸ್‌ನ ಟಿಕೆಟ್‌ಗೆ ಶೇ.25ರವರೆಗೂ ರಿಯಾಯಿತಿ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ಯೋಜನೆಯು ವಂದೇ ಭಾರತ್, ಅನುಭೂತಿ ಎಕ್ಸ್‌ಪ್ರೆಸ್ ಸೇರಿದಂತೆ ಎಲ್ಲಾ ರೈಲುಗಳಿಗೂ ಅನ್ವಯವಾಗಲಿದೆ.
ನವದೆಹಲಿ: ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯುಟಿವ್ ಕ್ಲಾಸ್‌ನ ಟಿಕೆಟ್‌ಗೆ ಶೇ.25ರವರೆಗೂ ರಿಯಾಯಿತಿ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ಯೋಜನೆಯು ವಂದೇ ಭಾರತ್, ಅನುಭೂತಿ ಎಕ್ಸ್‌ಪ್ರೆಸ್ ಸೇರಿದಂತೆ ಎಲ್ಲಾ ರೈಲುಗಳಿಗೂ ಅನ್ವಯವಾಗಲಿದೆ. ಆದರೆ ಈ ರಿಯಾಯಿತಿ ಎಲ್ಲಾ ರೈಲುಗಳಿಗೂ ಅನ್ವಯವಾಗದು. ಬದಲಾಗಿ ಜನದಟ್ಟಣೆ ಕಡಿಮೆ ಇರುವ ಆಯ್ದ ಮಾರ್ಗಗಳ, ಆಯ್ದ ರೈಲುಗಳಿಗೆ ಮಾತ್ರ ಅನ್ವಯವಾಗಲಿದೆ. ಈ ಮೂಲಕ ಹೆಚ್ಚು ಪ್ರಯಾಣಿಕರನ್ನು ಆಕರ್ಷಿಸುವ ಉದ್ದೇಶ ರೈಲ್ವೆ ಇಲಾಖೆಯದ್ದಾಗಿದೆ.
ಸೀಟುಗಳ ಪೂರ್ಣ ಪ್ರಮಾಣದ ಬಳಕೆ ಉದ್ದೇಶ ಇಟ್ಟುಕೊಂಡು ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯುಟಿವ್ ಕ್ಲಾಸ್‌ನ ಟಿಕೆಟ್‌ಗೆ ಶೇ.25ರಷ್ಟು ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ. ರಿಯಾಯಿತಿ ಪ್ರಮಾಣ ಯಾವ ಮಾರ್ಗದ ಯಾವ ರೈಲಿಗೆ ಇರಬೇಕು? ರಿಯಾಯಿತಿ ಎಷ್ಟು ಇರಬೇಕು ಎಂಬುದನ್ನು ಆಯಾ ರೈಲ್ವೆ ವಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥರು ನಿರ್ಧರಿಸಲಿದ್ದಾರೆ. ಈ ವಿಷಯದಲ್ಲಿ ಅವರಿಗೆ ಪೂರ್ಣ ಅಧಿಕಾರ ನೀಡಲಾಗಿದೆ ಎಂದು ರೈಲ್ವೆ ಮಾಹಿತಿ ನೀಡಿದೆ.
ನೀಲಿ ಬದಲು ಕೇಸರಿ, ಬೂದು: ವಂದೇ ಭಾರತ್‌ಗೆ ಈಗ ಹೊಸ ಬಣ್ಣ, ವಿನ್ಯಾಸ!
ಮೂಲಬೆಲೆಗೆ ಮಾತ್ರ ರಿಯಾಯ್ತಿ
ರಿಯಾಯಿತಿಯೂ ಟಿಕೆಟ್‌ನ ಮೂಲಬೆಲೆಗೆ ಮಾತ್ರ ಅನ್ವಯವಾಗಲಿದೆ. ರಿಸರ್ವೇಷನ್ ಶುಲ್ಕ, ಸೂಪರ್ ಫಾಸ್ಟ್ ಶುಲ್ಕ, ಜಿಎಸ್‌ಟಿ ಮೊದಲಾದವುಗಳು ಎಂದಿನಂತೆಯೇ ಇರಲಿದೆ. ಜೊತೆಗೆ ಈ ಯೋಜನೆಯನ್ನು ಜನದಟ್ಟಣೆ ಆಧರಿಸಿ ಇತರೆ ಯಾವುದೇ ಅಥವಾ ಇತರೆ ಎಲ್ಲಾ ಕ್ಲಾಸ್‌ನ ಟಿಕೆಟ್‌ಗಳಿಗೂ ಅನ್ವಯಿಸಬಹುದು ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಶೇ.50ಕ್ಕಿಂತ ಕಡಿಮೆ ಟಿಕೆಟ್ ಬುಕ್ ಆಗಿರುವ ಮಾರ್ಗ ಮತ್ತು ರೈಲುಗಳನ್ನು ಈ ಯೋಜನೆಗೆ ಪರಿಗಣಿಸಲಾಗುವುದು. ಈ ನಿಯಮವೂ ಪ್ರಯಾಣದ ಆರಂಭದಿಂದ ಅಂತ್ಯದ ಸ್ಥಳದವರೆಗೆ/ ನಡುವಿನ ಯಾವುದೇ ನಿಲ್ದಾಣಗಳ ನಡುವೆ/ ಯಾವುದೇ ನಿಲ್ದಾಣಗಳ ನಡುವೆ ಬೇಕಾದರೂ ಅನ್ವಯಿಸಬಹುದಾಗಿದೆ. ತಕ್ಷಣವೇ ಈ ಯೋಜನೆ ಜಾರಿಗೆ ಬರಲಿದೆ. ಈಗಾಗಲೇ ಟಿಕೆಟ್ ಬುಕ್ ಮಾಡಿದವರಿಗೆ ಹಣ ಮರುಪಾವತಿ ಇರುವುದಿಲ್ಲ. ರಜಾಕಾಲದ ಅಥವಾ ಹಬ್ಬಗಳ ಹಿನ್ನೆಲೆಯಲ್ಲಿ ಓಡಿಸುವ ರೈಲುಗಳಿಗೆ ಈ ರಿಯಾಯಿತಿ ಅನ್ವಯವಾಗದು ಎಂದು ಇಲಾಖೆ ಸ್ಪಷ್ಟಪಡಿಸಿದೆ.