ಲಖನೌ[ಜ.01]: ಇತ್ತೀಚಿನ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಹಿಂಸಾಚಾರಗಳಲ್ಲಿ ಕೈವಾಡ ಹೊಂದಿದೆ ಎನ್ನಲಾದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ನಿಷೇಧಿಸುವಂತೆ ಉತ್ತರ ಪ್ರದೇಶ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಕೋರಿದೆ.

ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿರುವ ಉತ್ತರಪ್ರದೇಶ ಪೊಲೀಸ್‌ ಮಹಾನಿರ್ದೇಶಕ ಒ.ಪಿ. ಸಿಂಗ್‌, ‘ರಾಜ್ಯದಲ್ಲಿ ಸಂಭವಿಸಿದ ಹಿಂಸಾಚಾರದ ಹಿನ್ನೆಲೆಯಲ್ಲಿ ಪಿಎಫ್‌ಐ ಉತ್ತರಪ್ರದೇಶ ಘಟಕದ ಮುಖ್ಯಸ್ಥ ವಾಸಿಂ ಹಾಗೂ 16 ಕಾರ್ಯಕರ್ತರನ್ನು ಬಂಧಿಸಲಾಗಿದೆ. ಆದ್ದರಿಂದ ಪಿಎಫ್‌ಐ ಮೇಲೆ ನಿಷೇಧ ಹೇರಬೇಕು ಎಂದು ಕೋರಲಾಗಿದೆ’ ಎಂದಿದ್ದಾರೆ.

ಉಪಮುಖ್ಯಮಂತ್ರಿ ಕೇಶವಪ್ರಸಾದ್‌ ಮೌರ್ಯ ಮಾತನಾಡಿ, ‘ಪಿಎಫ್‌ಐ ಎಂಬುದು ನಿಷೇಧಿತ ಸಿಮಿ ಸಂಘಟನೆಯ ಅವತಾರ’ ಎಂದಿದ್ದಾರೆ.

ಉತ್ತರಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ 19 ಜನ ಸಾವನ್ನಪ್ಪಿದ್ದರು.