ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿಯನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. ರಾಜಕೀಯ ಮತ್ತು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದ ಈ ಕೊಲೆಯ ತನಿಖೆಯನ್ನು ಸಿಬಿಐ ನಡೆಸಿತ್ತು, ಇದೀಗ ದಶಕದ ಬಳಿಕ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. 

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಅವರ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿ 17 ಜನ ಅಪರಾಧಿಗಳು ಎಂದು ಕೋರ್ಟ್ ತೀರ್ಪು ಪ್ರಕಟಿಸಿದ್ದು, ಎಪ್ರಿಲ್ 16ರಂದು ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. 21 ಆರೋಪಿಗಳಲ್ಲಿ 2 ಜನರು ನಿರ್ದೋಷಿ, 2 ಮಂದಿ ಮಾಫಿ ಸಾಕ್ಷಿ ಎಂದು ಘೋಷಿಸಿದ್ದು, ಸಚಿವ ವಿನಯ್ ಕುಲಕರ್ಣಿ ಸೇರಿ 17 ಜನರನ್ನು ವಶಕ್ಕೆ ಪಡೆಯುವಂತೆ ಸಿಬಿಐಗೆ ನ್ಯಾ ಸಂತೋಷ್ ಗಜಾನನ ಭಟ್ ಅವರಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೂಚಿಸಿತು. ಈ ಹಿನ್ನೆಲೆಯಲ್ಲಿ ಸತತ 10 ವರ್ಷಗಳ ನಂತರ ವಿಚಾರಣೆ ಬಳಿಕ ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಕೋರ್ಟ್ ಏಪ್ರಿಲ್ 9ರಂದು ತೀರ್ಪು ಪ್ರಕಟಿಸುವುದಾಗಿ ಮೊದಲು ತಿಳಿಸಿತ್ತು. ಆದರೆ ತಾಂತ್ರಿಕ ಕಾರಣಗಳು ಹಾಗೂ ತೀರ್ಪು ರಚನೆ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣಕ್ಕೆ ತೀರ್ಪನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿತ್ತು.

ಪ್ರಕರಣದ ಹಿನ್ನೆಲೆ

2016ರ ಜೂನ್ 15ರಂದು ಧಾರವಾಡದಲ್ಲಿ ನಡೆದಿದ್ದ ಈ ಭೀಕರ ಕೊಲೆಯಲ್ಲಿ ಯೋಗೇಶ್ ಗೌಡ ಅವರನ್ನು ಸಪ್ತಾಪುರದ ಉದಯ್ ಜಿಮ್‌ನಲ್ಲಿ ಮುಂಜಾನೆ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಂದಿದ್ದರು. ಈ ಸಂಬಂಧ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರಂಭಿಕ ತನಿಖೆಯಲ್ಲಿ ಆಸ್ತಿ ವಿವಾದವೇ ಹತ್ಯೆಗೆ ಕಾರಣ ಎಂದು ಶಂಕಿಸಲಾಗಿತ್ತು. ಮೊದಲ ಹಂತದಲ್ಲಿ ಆರು ಮಂದಿಯ ವಿರುದ್ಧ ಪೊಲೀಸರು ದೋಷಾರೋಪಪಟ್ಟಿ ಸಲ್ಲಿಸಿದ್ದರು. ಆದರೆ, ಪ್ರಕರಣದ ಗಂಭೀರತೆ ಮತ್ತು ರಾಜಕೀಯ ಅಂಶಗಳ ಬಗ್ಗೆಯೂ ಶಂಕೆ ವ್ಯಕ್ತವಾಗುತ್ತಿದ್ದಂತೆ, ಯೋಗೇಶ್ ಗೌಡ ಕುಟುಂಬದ ಒತ್ತಾಯದ ಮೇರೆಗೆ 2019ರಲ್ಲಿ ಪ್ರಕರಣವನ್ನು ಸಿಬಿಗೆ ಒಪ್ಪಿಸಲಾಗಿತ್ತು.

ಸಿಬಿಐ ತನಿಖೆಯಲ್ಲಿ ಹೊರಬಂದ ಸಂಗತಿಗಳು

CBI ತನಿಖೆಯಲ್ಲಿ ಈ ಹತ್ಯೆ ಕೇವಲ ಆಸ್ತಿ ವಿವಾದಕ್ಕಷ್ಟೇ ಸೀಮಿತವಾಗಿಲ್ಲದೆ, ರಾಜಕೀಯ ಪ್ರೇರಿತವಾಗಿಯೂ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಪಾತ್ರದ ಮೇಲೆ ಅನುಮಾನ ವ್ಯಕ್ತವಾಗಿದ್ದು, 2020ರ ನವೆಂಬರ್ 5ರಂದು CBI ಅಧಿಕಾರಿಗಳು ಅವರನ್ನು ಬಂಧಿಸಿದ್ದರು. ತನಿಖೆಯ ಅವಧಿಯಲ್ಲಿ ಆರು ಮಂದಿ ಆರೋಪಿಗಳು ಸ್ವಯಂ ಶರಣಾಗಿದ್ದು, ಅಂತಿಮವಾಗಿ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 21 ಮಂದಿ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಲಾಯಿತು. ಈ ಆರೋಪಿಗಳಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಕೂಡ ಸೇರಿದ್ದಾರೆ. ಇತ್ತೀಚೆಗೆ ವಿನಯ್ ಕುಲಕರ್ಣಿ ಅವರು ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದರು.

ಕೊಲೆಗೆ ಕಾರಣವಾದ ಆಸ್ತಿ ವಿವಾದ

ಪ್ರಕರಣದ ಮೂಲದಲ್ಲಿ ಧಾರವಾಡ ಸಮೀಪದ ಬೆಳ್ಳಿಗಟ್ಟಿ ಗ್ರಾಮದಲ್ಲಿದ್ದ ಭೂ ವಿವಾದವೇ ಪ್ರಮುಖ ಕಾರಣವಾಗಿದೆ. ನಾಗೇಶ್ ಎಂಬುವವರಿಗೆ ಸೇರಿದ 40 ಎಕರೆ ಜಮೀನಿನಲ್ಲಿ 25.8 ಎಕರೆ ಮಾತ್ರ ನೋಟರಿಯಾಗಿತ್ತು. ಉಳಿದ ಭೂಮಿಯಲ್ಲಿ 9 ಎಕರೆ ಜಮೀನನ್ನು ಯೋಗೇಶ್ ಗೌಡ ಖರೀದಿಸಿದ್ದರೆ, ಇನ್ನೂ 15 ಎಕರೆ ಜಮೀನನ್ನು ಅವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪವಿತ್ತು. ಇದೇ ಸಂದರ್ಭದಲ್ಲಿ, ವಿನಯ್ ಕುಲಕರ್ಣಿ ಅವರ ಆಪ್ತನಾಗಿದ್ದ ಬಸವರಾಜ ಮುತ್ತಗಿ ಅವರು ನಾಗೇಶ್ ಅವರಿಂದ 5 ಎಕರೆ ಜಮೀನು ಖರೀದಿಸಿದ್ದರು. ಈ ಜಮೀನು ವ್ಯವಹಾರದ ಹಿನ್ನೆಲೆ ಯೋಗೇಶ್ ಗೌಡ ಅವರು ಮುತ್ತಗಿಗೆ ಬೆದರಿಕೆ ಹಾಕಿದ್ದರೆಂದು ತಿಳಿದುಬಂದಿದ್ದು, ಇದರಿಂದ ವೈಮನಸ್ಸು ತೀವ್ರಗೊಂಡು ಕೊನೆಗೆ ಹತ್ಯೆಗೆ ದಾರಿ ಮಾಡಿಕೊಟ್ಟಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಯಾರು ಬಸವರಾಜ ಮುತ್ತಗಿ?

ಬಸವರಾಜ ಮುತ್ತಗಿ ಅವರು ಅಪರಾಧ ಶಾಸ್ತ್ರದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು. ಅವರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವುದರ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದರು. ಆದರೆ, ಭೂ ವ್ಯವಹಾರ ಸಂಬಂಧಿತ ವೈಷಮ್ಯಗಳು ಈ ಹತ್ಯೆಗೆ ಕಾರಣವಾದವು ಎಂಬುದು ತನಿಖೆಯಿಂದ ಬಹಿರಂಗವಾಗಿದೆ.

ಸುಮಾರು 10 ವರ್ಷಗಳ ಬಳಿಕ ಈ ಪ್ರಕರಣದಲ್ಲಿ ತೀರ್ಪು ಹೊರಬಿದ್ದಿರುವುದು ಯೋಗೇಶ್ ಗೌಡ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗಿದೆ. ರಾಜಕೀಯ, ಆಸ್ತಿ ವಿವಾದ ಮತ್ತು ವೈಯಕ್ತಿಕ ವೈಮನಸ್ಸು ಎಲ್ಲಾ ಸೇರಿ ನಡೆದ ಈ ಹತ್ಯೆ ಪ್ರಕರಣ ರಾಜ್ಯ ರಾಜಕೀಯದಲ್ಲೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ನ್ಯಾಯಾಲಯದ ತೀರ್ಪು ಈ ಪ್ರಕರಣಕ್ಕೆ ಒಂದು ಮಹತ್ವದ ತಿರುವು ನೀಡಿದೆ.