ಮನೆಯಲ್ಲಿ ಸೋಲಾರ್ ಹಾಕಿದ್ರೆ ಮಾತ್ರ ಪ್ರಾಥಮಿಕ ಶಿಕ್ಷಕರಿಗೆ ಸಂಬಳ, ಸರ್ಕಾರದ ಆದೇಶಕ್ಕೆ ಟೀಚರ್ಸ್ ಕಂಗಾಲಾಗಿದ್ದಾರೆ. ಮನೆಯಲ್ಲಿ ಶೇಕಡಾ 100 ರಷ್ಟು ಸೋಲಾರ್ ಪ್ಯಾನಲ್ ಇನ್‌ಸ್ಟಾಲ್ ಮಾಡಿದವರಿಗೆ ಸಂಬಂಳ ನೀಡಲಾಗುತ್ತದೆ. ಏನಿದರ ಸತ್ಯ?
ಲಖನೌ (ಜ.24) ಭಾರತದಲ್ಲಿ ಸೌರ ಶಕ್ತಿಗೆ ಹೆಚ್ಚಿನ ಮಹತ್ವದ ನೀಡಲಾಗುತ್ತಿದೆ. ಸರ್ಕಾರದಿಂದ ಸಬ್ಸಿಡಿ ಸೇರಿದಂತೆ ಹಲವು ಯೋಜನೆಗಳ ಮೂಲಕ ಸೋಲಾರ್ ಅಳವಡಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಸೌರ ಶಕ್ತಿ ಮೂಲಕ ಇಂಧನದಲ್ಲಿ ಸ್ವಾವಲಂಬಿಯಾಗಲು ಭಾರತ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಈ ಯೋಜನೆ ಶೇಕಡಾ 100 ರಷ್ಟು ಜಾರಿಗೊಳಿಸಲು ಸರ್ಕಾರ ಹೊರಡಿಸಿದ ಆದೇಶಕ್ಕೆ ಪ್ರಾಥಮಿಕ ಶಿಕ್ಷಕರು ಕಂಗಲಾಗಿದ್ದಾರೆ. ಯಾರೆಲ್ಲಾ ತಮ್ಮ ತಮ್ಮ ಮನೆಯಲ್ಲಿ ಸೋಲಾರ್ ಪ್ಯಾನಲ್ ಶೇಕಡಾ 100 ರಷ್ಟು ಅಳವಡಿಕೆ ಮಾಡಿದ್ದಾರೋ, ಅವರಿಗೆ ಮಾತ್ರ ತಿಂಗಳ ಸಂಬಂಳ ಕ್ರೆಡಿಟ್ ಆಗಲಿದೆ. ಯಾರ ಮನೆಯಲ್ಲಿ ಇನ್ನೂ ಸೋಲಾರ್ ಪ್ಯಾನೆಲ್ ಅಳವಡಿಕೆ ಮಾಡಲಿಲ್ಲ ಎಂದರೆ ಅವರ ಸಂಬಳ ತಡೆ ಹಿಡಿಯಲಾಗುತ್ತಿದೆ. ಇದು ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಮಾಹಿತಿ. ಇದಕ್ಕೆ ಪೂರಕ ಎಂಬಂತೆ ಹಲವು ಶಿಕ್ಷಕರ ಸಂಬಂಳ ಇನ್ನೂ ಕ್ರೆಡಿಟ್ ಆಗಿಲ್ಲ.
ತಿಂಗಳ ಸ್ಯಾಲರಿ ಆತಂಕ
ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಮೂಲಕ ಪ್ರತಿ ಶಿಕ್ಷಕರು ತಮ್ಮ ಮನೆಯಲ್ಲಿ ಸೋಲಾರ್ ಅಳವಡಿಕೆ ಮಾಡಬೇಕು. ಬಳಿಕ ಸೋಲಾರ್ ಅಳವಡಿಕೆ ಪ್ಯಾನಲ್ ಕುರಿತು ಸರ್ಟಿಫಿಕೇಟನ್ನು ಬೇಸಿಕ್ ಎಜುಕೇಶನ್ ಡಿಪಾರ್ಟ್‌ಮೆಂಟ್ ( BEOs) ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಬೇಕು. ಹೀಗೆ ಮಾಡಿದ ಶಿಕ್ಷಕರಿಗೆ ಮಾತ್ರ ತಿಂಗಳ ಸ್ಯಾಲರಿ ಬರಲಿದೆ ಎಂಬ ಮಾಹಿತಿಗಳು ಹರಿದಾಡುತ್ತಿದೆ.
ಮೌ ಜಿಲ್ಲೆಯ ಹಲವು ಶಿಕ್ಷಕರಿಗೆ ವೇತನ ಬಂದಿಲ್ಲ. ಇದರ ಬೆನ್ನಲ್ಲೇ ಯಾರೆಲ್ಲಾ ಸೋಲಾರ್ ಅಳವಡಿಕೆ ಪ್ರಮಾಣ ಪತ್ರ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆೋ, ಅವರ ವೇತನ ಕ್ರೆಡಿಟ್ ಆಗಿದೆ ಎಂಬ ಮಾಹಿತಿ ಹರಿದಾಡಿದೆ. ಇದರ ಬೆನ್ನಲ್ಲೇ ಮೌ ಜಿಲ್ಲೆಯ ಪ್ರಾಥಮಿಕ ಶಿಕ್ಷಕರು ತಮ್ಮ ಮನೆಯಲ್ಲಿ ಸೋಲಾರ್ ಅಳವಡಿಕೆಗೆ ಮುಂದಾಗಿದ್ದಾರೆ. ಸುಲಭವಾಗಿ ಸೂರ್ಯಘರ್ ಯೋಜನೆ ಮೂಲಕ ಸಬ್ಸಿಡಿಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ ಮಾಡಲು ಸಾಧ್ಯವಿದೆ.
BEOs ಅಧಿಕಾರಿಯ ಆದೇಶ
BEOs ಅಧಿಕಾರಿ ಸಂತೋಷ್ ಕುಮಾರ್ ಉಪಾಧ್ಯಾಯ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಶಿಕ್ಷಕರ ವೇತನಕ್ಕೂ ಸೋಲಾರ್ ಅಳವಡಿಕೆಗೂ ಸಂಬಂಧವಿಲ್ಲ. ಕೆಲ ಶಿಕ್ಷಕರು ವೇತನ ಸಿಕ್ಕಿಲ್ಲ ಎಂಬ ಮಾಹಿತಿ ಬಂದಿದೆ. ಇದಕ್ಕೆ ಬೇರೆ ಕಾರಣ ಇರಬಹುದು. ಆದರೆ ಸೋಲಾರ್ ಅಳವಡಿಕೆ ಹಾಗೂ ವೇತನಕ್ಕೂ ಸಂಬಂಧವಿಲ್ಲ. ಶಿಕ್ಷಕರು ಸೂರ್ಯಘರ್ ಯೋಜನೆ ಮೂಲಕ ಸೋಲಾರ್ ಅಳವಡಿಕೆ ಮಾಡಿದರೆ ಉತ್ತಮ. ಯೋಜನೆ ಸಬ್ಸಿಡಿ ಮೂಲಕ ಸುಲಭವಾಗಿ ಅಳವಡಿಕೆ ಮಾಡಲು ಮನವಿ ಮಾಡುತ್ತೇನೆ. ಆದರೆ ಕಡ್ಡಾಯ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.


