ಹಳ್ಳಿಯೆಲ್ಲಾ ಖಾಲಿ ಮಾಡಿಸಿ ಯೋಧರ ಮೇಲೆ ನಕ್ಸಲರ ದಾಳಿ| ನಾವು ಸಾಗುತ್ತಿದ್ದ ಗ್ರಾಮ ಬಿಕೋ ಎನ್ನುತ್ತಿತ್ತು, ಇದು ಅಚ್ಚರಿ ತರಿಸಿತ್ತು| ಆಗ ಇಲ್ಲಿ ಏನೋ ಆಗಿದೆ ಎಂಬ ಸುಳಿವು ದೊರಕಿತ್ತು| ಆದರೆ ಮರುಕ್ಷಣವೇ ನಕ್ಸಲರು ನಮ್ಮ ಸುತ್ತುವರಿದು ದಾಳಿ ಮಾಡಿದರು| ಛತ್ತೀಸ್‌ಗಢ ನಕ್ಸಲರ ದಾಳಿಯ ಕ್ಷಣ ಬಿಚ್ಟಿಟ್ಟ ಗಾಯಾಳು ಸೈನಿಕರು

ರಾಯ್‌ಪುರ(ಏ.07): ಛತ್ತೀಸ್‌ಗಢದ ಸುಕ್ಮಾ ಹಾಗೂ ಬಿಜಾಪುರ ಗಡಿಯಲ್ಲಿನ ದಟ್ಟಾರಣ್ಯದಲ್ಲಿ ನಕ್ಸಲರು 22 ಯೋಧರ ನರಮೇಧ ನಡೆಸಿದ್ದು ಹೇಗೆ ಎಂಬ ಮಾಹಿತಿ ಇದೀಗ ಗೊತ್ತಾಗಿದೆ. ಅತ್ಯಂತ ರಹಸ್ಯ ರೀತಿಯಲ್ಲಿ ಭದ್ರತಾ ಪಡೆಗಳನ್ನು ಮಾವೋವಾದಿಗಳು ಖೆಡ್ಡಾಗೆ ಕೆಡವಿ ಹಾಕಿದ್ದಾರೆ. ಕೊನೇ ಕ್ಷಣದಲ್ಲಿ ಸುಳಿವು ಸಿಕ್ಕರೂ ಅಷ್ಟರಲ್ಲಿ ಕಾಲ ಮೀರಿಯಾಗಿತ್ತು. ಅಂಥ ಸಂಚನ್ನು ನಕ್ಸಲರು ಹೆಣೆದಿದ್ದರು ಎಂದು ಚಕಮಕಿಯಲ್ಲಿ ಬದುಕುಳಿದ ಕೆಲವು ಯೋಧರು ಹೇಳಿದ್ದಾರೆ.

ಮಾವೋವಾದಿ ನಾಯಕ ಹಿದ್ಮಾ ಈ ಪ್ರದೇಶದಲ್ಲಿದ್ದಾನೆ ಎಂಬ ಮಾಹಿತಿ ಭದ್ರತಾ ಪಡೆಗಳಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ದಟ್ಟಾರಣ್ಯದಲ್ಲಿ ಪಡೆಗಳು ಒಂದು ವಾರದಿಂದ ಈ ಸ್ಥಳದಲ್ಲಿ ಕಾರಾರ‍ಯಚರಣೆ ಆರಂಭಿಸಿದ್ದವು. ಆದರೆ ಆತ ಅಲ್ಲಿಲ್ಲ ಎಂದು ಖಚಿತವಾದ ಕಾರಣ, ತಮ್ಮ ಸ್ವಸ್ಥಳಕ್ಕೆ ಪಡೆಗಳು ಮರಳುತ್ತಿದ್ದವು. ಆಗ ದಾಳಿ ನಡೆದಿತ್ತು.

ಈ ಬಗ್ಗೆ ಮಾಹಿತಿ ನೀಡಿರುವ ಗಾಯಾಳು ಯೋಧರೊಬ್ಬರು, ‘ಕಳೆದ ಶನಿವಾರ ಮಧ್ಯಾಹ್ನ ಟೆಕೂಲ್‌ಗುಡಾ ಎಂಬ ಗ್ರಾಮದ ಬಳಿ ನಾವೆಲ್ಲ ಯೋಧರು ಸಂಚರಿಸುತ್ತಿದ್ದೆವು. ಆಗ ಆ ಗ್ರಾಮದಲ್ಲಿ ಏನೋ ಹೆಚ್ಚೂಕಮ್ಮಿ ಆಗಿದೆ ನಮಗೆ ಅನ್ನಿಸಿತು. ಏಕೆಂದರೆ ಗ್ರಾಮದಲ್ಲಿ ಯಾರೂ ಇರಲಿಲ್ಲ. ಎಲ್ಲ ಮನೆಗಳು ಖಾಲಿ ಆಗಿದ್ದವು. ಆಗ ನಾವು ನಮ್ಮ ಸೀನಿಯರ್‌ ಕಮಾಂಡರ್‌ಗೆ ಸಂಪರ್ಕಿಸಿ ಮಾಹಿತಿ ನೀಡಿದೆವು. ಆದರೆ ಕಮಾಂಡರ್‌ ಅವರು, ‘ಮುಂದೆ ಸಾಗಿ’ ಎಂಬ ಆದೇಶ ನೀಡಿದರು’.

‘ಇಷ್ಟಾಗಿ ಕೆಲವೇ ನೂರು ಮೀಟರ್‌ ದೂರ ಸಾಗಿದ್ದೆವು. ಹಿಂದಿನಿಂದ ಗುಂಡು ನಮ್ಮತ್ತ ಹಾರಿತು. ನಾವು ಪ್ರತಿದಾಳಿಗೆ ಸನ್ನದ್ಧರಾಗುವ ಮೊದಲೇ ನಕ್ಸಲರು ನಮ್ಮನ್ನು ಸುತ್ತುವರಿದರು. ಅತ್ಯಾಧುನಿಕ ಶಸ್ತ್ರಾಸ್ತ್ರಗಳಾದ ಸ್ನೈಪರ್‌ ರೈಫಲ್‌ಗಳು, ರಾಕೆಟ್‌ ಲಾಂಚರ್‌, ಯುಬಿಜಿಎಲ್‌ ಹಾಗೂ ಮಾರ್ಟರ್‌ ಬಳಸಿ ದಾಳಿ ನಡೆಸಿದರು. ನಮ್ಮ ಕಣ್ಣೆದುರೇ ಸಹೋದ್ಯೋಗಿ ಯೋಧರು ಒಬ್ಬೊಬ್ಬರಾಗಿ ಪ್ರಾಣ ಬಿಟ್ಟರು’ ಎಂದು ದುಃಖಿಸಿದರು.

‘ಆದರೂ ನಾವು ಧೃತಿಗೆಡಲಿಲ್ಲ. ಈ ಅಡಗುದಾಳಿಯಿಂದ ಪಾರಾಗಲು ಒಂದೇ ಮಾರ್ಗವೆಂದರೆ ನಾವು ಕೂಡ ಪ್ರತಿದಾಳಿ ನಡೆಸುವುದು ಎಂದು ಅರಿತು ನಕ್ಸಲರತ್ತ ಎಡೆಬಿಡದೇ ಗುಂಡು ಹಾರಿಸಿದೆವು’ ಎಂದು ಹೇಳಿದರು.

ಇನ್ನು ಘಟನೆ ಬಗ್ಗೆ ಮಾಜಿ ಹಿರಿಯ ಯೋಧರೊಬ್ಬರು ಪ್ರತಿಕ್ರಿಯಿಸಿ, ‘ನಕ್ಸಲರ ದಾಳಿಯ ಹಿಂದೆ ದೊಡ್ಡ ರಣತಂತ್ರವೇ ಇದೆ ಹಾಗೂ ತುಂಬಾ ತರಬೇತಿ ಪಡೆದು ಈ ದಾಳಿ ನಡೆಸಿದ್ದಾರೆ ಎಂಬುದು ದೃಢಪಡುತ್ತದೆ. ಹಾಗಾಗಿ ಇನ್ನು ತಗ್ಗು ಪ್ರದೇಶದಲ್ಲಿ ಸಾಗದೇ ಎತ್ತರದ ಪ್ರದೇಶದಲ್ಲೇ ಪಡೆಗಳು ಸಾಗಬೇಕು’ ಎಂದರು.