ವಕ್ಫ್ ಆಸ್ತಿ ಕಬಳಿಕೆ ಆರೋಪಕ್ಕೆ 'ಸುಪ್ರೀಂ' ಮಾಸ್ಟರ್ಸ್ಟ್ರೋಕ್? ಸ್ಥಿರಾಸ್ತಿ ಮಾಲೀಕತ್ವದ ಕುರಿತು ಮಹತ್ವದ ತೀರ್ಪು
ವಕ್ಫ್ ಆಸ್ತಿ ಕಬಳಿಕೆ ಸಂಬಂಧಿಸಿದಂತೆ ದೇಶಾದ್ಯಂತ ಸಂಚಲನ ಮೂಡುತ್ತಿರುವ ನಡುವೆಯೇ, ಸುಪ್ರೀಂ ಕೋರ್ಟ್ನಿಂದ ಮಹತ್ವದ ತೀರ್ಪು ಹೊರಬಿದ್ದಿದೆ. ಏನದು?
ದೇಶದಲ್ಲಿ ಯಾರದ್ದೇ ಭೂಮಿ, ಕಟ್ಟಡವನ್ನ ನಮ್ಮದು ಅಂತ ಹಕ್ಕು ಸಾಧಿಸೋ ಅಧಿಕಾರ ಈ ದೇಶದ ವಕ್ಫ್ ಬೋರ್ಡ್‌ಗಳಿಗೆ ಇವೆ ಎನ್ನುವಂಥ ಅಧಿಕಾರ 1995ರಲ್ಲಿ ಕೊಡಲಾಗಿತ್ತು. ಬಳಿಕ 2013ರಲ್ಲಿದ್ದ ಯುಪಿಎ ಸರ್ಕಾರವು ಕೂಡ ಇನ್ನಷ್ಟು ಅಧಿಕಾರ ನೀಡಿತು. ಇದರ ಪ್ರಕಾರ, ಯಾವುದೇ ಆಸ್ತಿ ತಮ್ಮದು ಎಂದು ವಕ್ಫ್ ಬೋರ್ಡ್‌ಗೆ ಅನ್ನಿಸಿದರೆ ಅದನ್ನು ವಕ್ಫ್ ಆಸ್ತಿಯೆಂದು ರಿಜಿಸ್ಟರ್ ಮಾಡಿಸಿಕೊಳ್ಳುವ ಅಧಿಕಾರ ನೀಡಲಾಗಿತ್ತು. ಇಂಥ ಕಾನೂನು ಯಾವ ಮುಸ್ಲಿಂ ರಾಷ್ಟ್ರಗಳಲ್ಲಿ ಕೂಡ ಇಲ್ಲ ಎಂದು ಕಾಂಗ್ರೆಸ್ಸೇತರ ಪಕ್ಷಗಳು ಗುಡುಗುತ್ತಲೇ ಬಂದಿವೆ. ಕರ್ನಾಟಕ ಸೇರಿದಂತೆ ದೇಶದ ಹಲವೆಡೆಗಳಲ್ಲಿ ವಕ್ಫ್ ಆಸ್ತಿಯ ವಿವಾದ ತಾರಕಕ್ಕೇರಿದೆ. 2006ರಲ್ಲಿ ದೇಶಾದ್ಯಂತ ಇದ್ದ ವಕ್ಫ್ ಆಸ್ತಿ 1 ಲಕ್ಷದ 20 ಸಾವಿರ ಎಕರೆಯಾಗಿದ್ದರೆ ಅದೀಗ 9 ಲಕ್ಷದ 40 ಸಾವಿರ ಎಕರೆ ಎಂದು ಅಂದಾಜಿಸಲಾಗಿದೆ. ಇದರ ಮಾಹಿತಿ ಸಿಗುತ್ತಲೇ ಇದೀಗ ಭಾರಿ ವಿವಾದ ಸೃಷ್ಟಿಯಾಗಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡೇ ಕಾನೂನನ್ನ ಬದಲಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕೆಸರೆರೆಚಾಟ ನಡೆಯುತ್ತಲೇ ಇದೆ.
ಈ ವಿಷಯವಾಗಿ ಜಟಾಪಟಿ ನಡೆಯುತ್ತಿರುವ ನಡುವೆಯೇ, ಇದೀಗ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪೊಂದನ್ನು ನೀಡಿದ್ದು, ಇದು ವಕ್ಫ್ ಬೋರ್ಡ್ ವಿವಾದಕ್ಕೆ ತೆರೆ ಎಳೆಯಬಹುದೇ ಎನ್ನುವ ಚರ್ಚೆ ಶುರುವಾಗಿದೆ. ಅದೇನೆಂದರೆ, ಆಸ್ತಿಯನ್ನು ಹಸ್ತಾಂತರಿಸಿ ಪಾವತಿ ಮಾಡಿದರೂ ಸಹ, ಮಾರಾಟ ಪತ್ರವನ್ನು ನೋಂದಾಯಿಸದೇ ಸ್ಥಿರ ಆಸ್ತಿಯ ಮಾಲೀಕತ್ವವನ್ನು ವರ್ಗಾಯಿಸಲಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ. 1882 ರ ಆಸ್ತಿ ವರ್ಗಾವಣೆ ಕಾಯ್ದೆಯ ಸೆಕ್ಷನ್ 54 ಕುರಿತು ಉಲ್ಲೇಖಿಸಿರುವ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಎನ್.ಕೆ. ಸಿಂಗ್ ಅವರನ್ನೊಳಗೊಂಡ ಪೀಠವು, ಆಸ್ತಿಯ ಮಾಲೀಕತ್ವದ ವರ್ಗಾವಣೆ ಕುರಿತು ಸ್ಪಷ್ಟ ನಿರ್ದೇಶನ ನೀಡಿದೆ.
1882 ರ ಆಸ್ತಿ ವರ್ಗಾವಣೆ ಕಾಯ್ದೆಯ ಸೆಕ್ಷನ್ 54ರ ಅನ್ವಯ 100 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಸ್ಪಷ್ಟ ಸ್ಥಿರ ಆಸ್ತಿಗಳಿಗೆ ಮಾರಾಟ ಪತ್ರಗಳನ್ನು ನೋಂದಾಯಿಸುವುದನ್ನು ಕಡ್ಡಾಯಗೊಳಿಸುತ್ತದೆ. ಇದರ ಬಗ್ಗೆ ವಿವರಣೆ ನೀಡಿರುವ ನ್ಯಾಯಮೂರ್ತಿಗಳು, ಯಾವುದೇ ಆಸ್ತಿ ವರ್ಗಾವಣೆಯು ಮಾನ್ಯವೆಂದು ಪರಿಗಣಿಸಲು ನೋಂದಾಯಿತ ದಾಖಲೆಯ ಮೂಲಕ ಕಾರ್ಯಗತಗೊಳಿಸಬೇಕು. ಯಾವುದೇ ಅನೌಪಚಾರಿಕ ಒಪ್ಪಂದಗಳು ಅಥವಾ ಪಾವತಿಗಳನ್ನು ಲೆಕ್ಕಿಸದೇ, ಮಾರಾಟ ಪತ್ರವನ್ನು ನೋಂದಾಯಿಸುವವರೆಗೆ ಮಾಲೀಕತ್ವವು ಖರೀದಿದಾರರಿಗೆ ವರ್ಗಾಯಿಸುವುದಿಲ್ಲ ಎಂದು ಹೇಳಿದ್ದಾರೆ.
ಬಾಬಾಶೇಬ್ ಧೋಂಡಿಬಾ ಕುಟೆ ವರ್ಸಸ್ ರಾಧು ವಿಠೋಬಾ ಬಾರ್ಡೆ-2024 ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಈ ತೀರ್ಪನ್ನು ಪ್ರಕಟಿಸಿದ್ದಾರೆ. 2008 ರ ನೋಂದಣಿ ಕಾಯ್ದೆಯ ಸೆಕ್ಷನ್ 17 ರ ಅಡಿಯಲ್ಲಿ ನಿಗದಿಪಡಿಸಿದಂತೆ ಮಾರಾಟ ಪತ್ರದ ನೋಂದಣಿಯ ನಂತರ ಮಾತ್ರ ಮಾರಾಟದ ಮೂಲಕ ಆಸ್ತಿಯ ವರ್ಗಾವಣೆ ನಡೆಯುತ್ತಿದೆ. ಅಂತಹ ನೋಂದಣಿ ಪೂರ್ಣಗೊಳ್ಳುವವರೆಗೆ, ಮಾಲೀಕತ್ವದ ಯಾವುದೇ ಕಾನೂನುಬದ್ಧ ವರ್ಗಾವಣೆ ನಡೆಯುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ಸ್ಥಿರ ಆಸ್ತಿಯ ಕಾನೂನುಬದ್ಧ ಮಾಲೀಕತ್ವವನ್ನು ಖಚಿತಪಡಿಸಿಕೊಳ್ಳಲು ಮಾರಾಟ ಪತ್ರಗಳು ಸರಿಯಾಗಿ ನೋಂದಣಿಯಾಗಿದೆಯೇ ಎನ್ನುವುದನ್ನು ಖಚಿತಗೊಳಿಸುವುದು ಮುಖ್ಯ ಎಂದು ಕೋರ್ಟ್ ಹೇಳ