ಅಮ್ಮನ ಕೈಯಿಂದ ಬೀಳುವ ಏಟೇ ಸಾಕು ಯಾವ ಮನೋತಜ್ಞರು ಬೇಡ... Smriti Irani ಪೋಸ್ಟ್ ನೋಡಿ
- ಅಮ್ಮ ಕೊಟ್ಟ ಏಟಿನ ನೆನಪು ಮಾಡಿಕೊಂಡ ಸ್ಮೃತಿ ಇರಾನಿ
- ಇನ್ಸ್ಟಾಗ್ರಾಮ್‌ನಲ್ಲಿ ಹಾಸ್ಯಾಸ್ಪದ ಪೋಸ್ಟ್ ವೈರಲ್
- ಭಿನ್ನ ವಿಭಿನ್ನ ಅಭಿಪ್ರಾಯ ಹಂಚಿಕೊಂಡ ನೆಟ್ಟಿಗರು
ನವದೆಹಲಿ(ಡಿ. 21): ಕೇಂದ್ರ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಇನ್ಸ್ಟಾಗ್ರಾಮ್‌ನಲ್ಲಿ ತಮಾಷೆಯಾದ ಫೋಟೋವೊಂದನ್ನು ಶೇರ್ ಮಾಡಿದ್ದು, ಇದನ್ನು ಅವರ ತಾಯಿ ಅವರಿಗೆ ಕಳುಹಿಸಿದ್ದರೆಂದು ಸ್ಮೃತಿ ಇರಾನಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. 1980ರ ದಶಕದ ಮಕ್ಕಳು ಆಗಿನ ಕಾಲದಲ್ಲಿ ಹೇಗೆ ಬೆಳೆಯುತ್ತಿದ್ದರು. ಆಗ ಕುಟುಂಬದ ವಾತಾವರಣ ಹೇಗಿತ್ತು, ಅಮ್ಮಂದಿರು ಹೇಗಿದ್ದರು ಎಂಬುದನ್ನು ಈ ಒಂದು ಫೋಟೋದಲ್ಲಿ ಕಂಡು ಕೊಳ್ಳಬಹುದು. ಸ್ಮೃತಿ ಇರಾನಿ ಶೇರ್ ಮಾಡಿದ ಈ ಫೋಟೋ ನೋಡಿ ತುಂಬಾ ಜನ ಇನ್ಸ್ಟಾಗ್ರಾಮ್ (Instagram) ಬಳಕೆದಾರರು ತಾವು ಕೂಡ ಇಂತಹ ಸ್ಥಿತಿ ಅನುಭವಿಸಿದ್ದಾಗಿ ಕಾಮೆಂಟ್ ಮಾಡಿದ್ದಾರೆ. ಜೊತೆಗೆ ನಮ್ಮ ಅಮ್ಮನೂ ಹೀಗೆ ಎಂದು ಗತಕಾಲದ ನೆನಪಿಗೆ ಇಳಿದು ಬಂದಿದ್ದಾರೆ.
ನಾನು ಚಿಕ್ಕವಳಿದ್ದಾಗ ನಮ್ಮ ಅಮ್ಮ ನನ್ನನ್ನು ಮನೋವೈದ್ಯರ (psychologist)ಬಳಿ ಕರೆದೊಯ್ಯುತ್ತಿರಲಿಲ್ಲ. ನನ್ನ ಅಮ್ಮ ಒಂದು ಏಟು ನೀಡಿ ನನ್ನ ಮೂಲಾಧಾರ ಚಕ್ರವನ್ನು ಜಾಗೃತಗೊಳಿಸುತ್ತಿದ್ದಳು. ನನ್ನ ಕರ್ಮವನ್ನು ಸ್ಥಿರ ಗೊಳಿಸುತ್ತಿದ್ದಳು ಎಂದು ಇಂಗ್ಲೀಷ್‌ನಲ್ಲಿ ಬರೆದಿರುವ ಫೋಟೋವನ್ನು ಸ್ಮೃತಿ ಇರಾನಿ ಶೇರ್ ಮಾಡಿದ್ದರು. ನನ್ನ ಅಮ್ಮ ಈ ಫೋಟೋವನ್ನು ಖುಷಿಯಿಂದ ನನ್ನೊಂದಿಗೆ ಶೇರ್ ಮಾಡಿದ್ದಾಳೆ. ಯಾರ ಯಾರ ತಾಯಂದಿರು ಹೀಗೆ ಮಾಡಿದ್ದಾರೆ ಅಂತವರು ದಯವಿಟ್ಟು ತಮ್ಮ ಕೈಗಳನ್ನು ಎತ್ತಿ ಎಂದು ಸ್ಮೃತಿ ಬರೆದುಕೊಂಡಿದ್ದಾರೆ.
ಕಳೆದ ರಾತ್ರಿ ಇನ್ಸ್ಟಾಗ್ರಾಮ್‌ನಲ್ಲಿ ಮಾಡಿರುವ ಈ ಪೋಸ್ಟ್‌ಗೆ ಈಗಾಗಲೇ 32,000 ಜನ ಲೈಕ್ ಒತ್ತಿದ್ದಾರೆ. 1,300 ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. ಕಾಂಮೆಂಟ್ ಸೆಕ್ಷನ್‌ನಲ್ಲಿ ಬಹುತೇಕ ಜನ ಸ್ಮೃತಿ ಇರಾನಿ (Smriti Irani) ಅವರ ಈ ಫೋಟೋಗೆ ಸೈ ಎಂದಿದ್ದು, ನಮಗೂ ಇದೇ ಅನುಭವ ಆಗಿದೆ ಎಂದಿದ್ದಾರೆ. ಈ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ನಟ ಅನುಪಮ್ ಖೇರ್ (Anupam Kher) ನನ್ನಮ್ಮ ಈಗಲೂ ಹೀಗೆ ಮಾಡುತ್ತಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಈ ರೀತಿ ಅನೇಕ ಸಲ ನನ್ನಮ್ಮ ನನ್ನ ಚಕ್ರಗಳೆಲ್ಲವನ್ನೂ ಜಾಗೃತಗೊಳಿಸಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಸ್ಮೃತಿ ಇರಾನಿ ಸ್ವಚ್ಛ ಭಾರತ ಅಭಿಯಾನ ಅಮ್ಮನ ಶೈಲಿಯಲ್ಲಿ ಎಂದು ಕಾಮೆಂಟ್ ಮಾಡಿದ್ದಾರೆ.
Weight Loss: ಸ್ಲಿಮ್ ಆದ ಸಚಿವೆ ಸ್ಮೃತಿ ಇರಾನಿಗೆ ಪೆಟ್ರೋಲ್ ಬೆಲೆ ಇಳಿಸಲು ನೆಟ್ಟಿಗರ ಮನವಿ
ಅಮ್ಮಂದಿರು ಆ ರೀತಿ ಇದ್ದುದರಿಂದಲೇ 80 ಹಾಗೂ 90ರ ದಶಕದ ಮಕ್ಕಳು ಜೀವನದಲ್ಲಿ ಶಿಸ್ತು, ಸಭ್ಯತೆಯನ್ನು ರೂಢಿಸಿಕೊಂಡಿದ್ದಾರೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದು, ಅದಕ್ಕೆ ಸ್ಮೃತಿ ಇರಾನಿ ನಿಜ ಒಪ್ಪಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇವಿಷ್ಟಲ್ಲದೇ ಕಾಮೆಂಟ್ ಸೆಕ್ಷನ್‌ನಲ್ಲಿ ಬಾಟಾ ಚಪ್ಪಲ್‌ನ ಉಲ್ಲೇಖವೂ ಇದೆ. ಸ್ಮೃತಿ ಇರಾನಿ ಅವರು ಇನ್ಸ್ಟಾಗ್ರಾಮ್‌ನ ಸಕ್ರಿಯ ಬಳಕೆದಾರರಾಗಿದ್ದು, ಮಿಲಿಯನ್‌ಗೂ ಹೆಚ್ಚು ಹಿಂಬಾಲಕರನ್ನು(followers) ಹೊಂದಿದ್ದಾರೆ. ಇಲ್ಲಿ ಇವರು ಯಾವಾಗಲೂ ತಮ್ಮ ಕುಟುಂಬ ಹಾಗೂ ಸ್ನೇಹಿತರ ಬಗ್ಗೆ ತಮಾಷೆಯಾದಂತಹ ಪೋಸ್ಟ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ.
Kapil Sharma Show: ಸ್ಮೃತಿ ಇರಾನಿಯನ್ನು ಒಳ ಬಿಡದ ಗಾರ್ಡ್, ಮರಳಿದ ಸಚಿವೆ
ಆ ಕಾಲದ ಅಮ್ಮಂದಿರೇ ಹಾಗೆ, ಇಂದಿನ ತಾಯಂದಿರಂತೆ ಮಕ್ಕಳ ಮೇಲೆ ಅತೀಯಾದ ಮುದ್ದು ಇಲ್ಲ, ಅತೀಯಾದ ಕೋಪವೂ ಇಲ್ಲ. ಎಲ್ಲವೂ ಹಿತವಾಗಿ ಮಿತವಾಗಿ. ಮಕ್ಕಳು ದುರ್ಬುದ್ಧಿ ತೋರಿದಾಗ ಯಾವುದೇ ಮುದ್ದಾಟವಿಲ್ಲ. ಸರಿಯಾದ ಏಟು ಹಾಕಿ ಮಕ್ಕಳನ್ನು ಸರಿ ದಾರಿಗೆ ತರುತ್ತಿದ್ದರು. ಹಾಗೆಯೇ ಪ್ರೀತಿಗೂ ಯಾವುದೇ ಕೊರತೆ ಇಲ್ಲದಂತೆ ಸಲಹುತ್ತಿದ್ದರು ಎಂದರೆ ತಪ್ಪಾಗಲಾರದು.