Asianet Suvarna News Asianet Suvarna News

ಜಾಗತಿಕ ಮೊಬೈಲ್ ಉತ್ಪಾದನೆಯ ತವರಾಗಲಿದೆ ಭಾರತ..!

ನೆರೆಯ ಚೀನಾಗೆ ಸಡ್ಡು ಹೊಡೆದು ಜಾಗತಿಕ ಮೊಬೈಲ್ ಉತ್ಪಾದನೆಯ ತವರಾಗುವ ನಿಟ್ಟಿನತ್ತ ಭಾರತ ದಿಟ್ಟ ಹೆಜ್ಜೆಯಿಟ್ಟಿದೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ ಇನ್ನು ಕೆಲವೇ ವರ್ಷಗಳಲ್ಲಿ ಭಾರತ ಮೊಬೈಲ್ ಉತ್ಪಾದನೆಯ ಹಬ್‌ ಆಗಿ ಬೆಳೆಯುವುದರಲ್ಲಿ ಎರಡು ಮಾತಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Union Minister Ravi Shankar Prasad invites global mobile manufacturing Companies to intensify manufacturing in India
Author
New Delhi, First Published Aug 2, 2020, 7:58 AM IST

ನವದೆಹಲಿ(ಆ.02): ಆತ್ಮನಿರ್ಭರತೆ (ಸ್ವಾವಲಂಬನೆ) ಭಾಗವಾಗಿ ದೇಶದಲ್ಲಿ ಎಲೆಕ್ಟ್ರಾನಿಕ್ಸ್‌ ಉತ್ಪನ್ನ ತಯಾರಿಸುವ ಕಂಪನಿಗಳಿಗೆ ಉತ್ಪಾದನೆ ಆಧರಿತ ಪ್ರೋತ್ಸಾಹಧನ ನೀಡುವ ಕೇಂದ್ರ ಸರ್ಕಾರದ ಯೋಜನೆಗೆ ಭರ್ಜರಿ ಯಶಸ್ಸು ಸಿಕ್ಕಿದೆ. ಸ್ಯಾಮ್‌ಸಂಗ್‌, ಆ್ಯಪಲ್‌ ಸೇರಿದಂತೆ ದೇಶ- ವಿದೇಶಗಳ 22 ಕಂಪನಿಗಳು ಭಾರತದಲ್ಲಿ ಮೊಬೈಲ್‌ ಉತ್ಪಾದನೆ ಹಾಗೂ ಇನ್ನಿತರೆ ಘಟಕ ತೆರೆಯುವ ಸಂಬಂಧ ಪ್ರಸ್ತಾವನೆ ಸಲ್ಲಿಕೆ ಮಾಡಿವೆ.

ಈ ಪ್ರಸ್ತಾವಗಳಿಗೆ ಸರ್ಕಾರ ಒಪ್ಪಿಗೆ ನೀಡಿದರೆ, ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ ಬರೋಬ್ಬರಿ 11 ಲಕ್ಷ ಕೋಟಿ ರು. ಮೌಲ್ಯದ ಮೊಬೈಲ್‌ ಫೋನ್‌ ಹಾಗೂ ಬಿಡಿಭಾಗಗಳು ಉತ್ಪಾದನೆಯಾಗಲಿವೆ. 7 ಲಕ್ಷ ಕೋಟಿ ರು. ವೆಚ್ಚದ ಮೊಬೈಲ್‌ಗಳು ರಫ್ತಾಗಲಿವೆ. ಪ್ರತ್ಯಕ್ಷವಾಗಿ 3 ಲಕ್ಷ ಹಾಗೂ ಪರೋಕ್ಷವಾಗಿ 9 ಲಕ್ಷ ಸೇರಿ ಒಟ್ಟಾರೆ 12 ಲಕ್ಷ ಉದ್ಯೋಗ ಸೃಷ್ಟಿಯಾಗಲಿವೆ.

ಸ್ಯಾಮ್‌ಸಂಗ್‌, ಲಾವಾ, ಡಿಕ್ಸನ್‌, ಮೈಕ್ರೋಮ್ಯಾಕ್ಸ್‌ ಹಾಗೂ ಆ್ಯಪಲ್‌ ಫೋನ್‌ಗಳನ್ನು ಉತ್ಪಾದಿಸುವ ಫಾಕ್ಸ್‌ಕಾನ್‌ ಹೊನ್‌ ಹೈ, ರೈಸಿಂಗ್‌ ಸ್ಟಾರ್‌, ವಿಸ್ಟ್ರಾನ್‌, ಪೆಗಟ್ರಾನ್‌ ಕಂಪನಿಗಳು ಕೂಡ ತಮ್ಮ ಪ್ರಸ್ತಾವವನ್ನು ಸಲ್ಲಿಕೆ ಮಾಡಿವೆ. ಸದ್ಯ ಜಾಗತಿಕ ಮಟ್ಟದಲ್ಲಿ ಮೊಬೈಲ್‌ ಫೋನ್‌ಗಳ ಉತ್ಪಾದನಾ ಕೇಂದ್ರವಾಗಿ ಚೀನಾ ನೆಲೆಯೂರಿದ್ದು, ಅದಕ್ಕೆ ಭಾರತದ ಕ್ರಮ ಭರ್ಜರಿ ಪೆಟ್ಟು ನೀಡಿದೆ.

ಭಾರತದ ಮೊದಲ ಮೊಬೈಲ್‌ ಕರೆಗೆ 25 ವರ್ಷ ತುಂಬಿತು!

ತೈವಾನ್‌, ದಕ್ಷಿಣ ಕೊರಿಯಾ, ಜರ್ಮನಿ, ಆಸ್ಟ್ರಿಯಾ ಮತ್ತಿತರ ದೇಶಗಳ ಕಂಪನಿಗಳಿಂದಲೂ ಪ್ರಸ್ತಾವಗಳು ಬಂದಿವೆ ಎಂದು ಕೇಂದ್ರ ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್‌ ಅವರು ಶನಿವಾರ ತಿಳಿಸಿದ್ದಾರೆ.

ಈ ಕಂಪನಿಗಳ ಪ್ರಸ್ತಾವಗಳಿಗೆ ಅನುಮೋದನೆ ನೀಡಿದರೆ ಸಹಸ್ರಾರು ಕೋಟಿ ರು. ಬಂಡವಾಳ ಹೂಡಿಕೆಯಾಗಲಿದೆ. 45 ಸಾವಿರ ಕೋಟಿ ರು. ವೆಚ್ಚದ ಬಿಡಿಭಾಗ ಉತ್ಪಾದನೆಗೆ ಎಟಿ ಅಂಡ್‌ ಎಸ್‌, ಅಸೆಂಟ್‌ ಸರ್ಕೀಟ್ಸ್‌, ವಿಸಿಕಾನ್‌, ವಾಲ್ಸಿನ್‌, ಸಹಸ್ರ, ವಿಟೆಸ್ಕೋ ಹಾಗೂ ನಿಯೋಲಿಂಕ್‌ ಕಂಪನಿಗಳು ಅರ್ಜಿ ಸಲ್ಲಿಸಿವೆ. ಆದರೆ ಚೀನಾದ ಒಂದು ಕಂಪನಿಯಿಂದಲೂ ಅರ್ಜಿ ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಜಾಗತಿಕವಾಗಿ ಒಟ್ಟು ಮೊಬೈಲ್‌ ಮಾರಾಟ ಆದಾಯದಲ್ಲಿ ಆ್ಯಪಲ್‌ ಶೇ.37 ಹಾಗೂ ಸ್ಯಾಮ್‌ಸಂಗ್‌ ಶೇ.22ರಷ್ಟು ಪಾಲು ಹೊಂದಿವೆ.


 

Follow Us:
Download App:
  • android
  • ios