ಪ್ಲ್ಯಾಸ್ಟಿಕ್ ನೋಟು ಚಲಾವಣೆ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸಚಿವ ಪಂಕಜ್ ಚೌಧರಿ
ಸದ್ಯ ದೇಶದಲ್ಲಿ ಪ್ಲ್ಯಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಹಾಗೂ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ.
ನವದೆಹಲಿ: ಸದ್ಯ ದೇಶದಲ್ಲಿ ಪ್ಲ್ಯಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಹಾಗೂ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ.
ಮಂಗಳವಾರ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ಚೌಧರಿ ‘ದೇಶದಲ್ಲಿ ಹಾಳೆಯ ನೋಟುಗಳ ಬಾಳಿಕೆ ಹೆಚ್ಚಿಸಲು ಹಾಗೂ ಖೋಟಾ ನೋಟುಗಳ ಚಲಾವಣೆ ನಿಯಂತ್ರಿಸುವಲ್ಲಿ ನಿರಂತರ ಪ್ರಯತ್ನ ನಡೆಯುತ್ತಿದೆ. ಆದರೆ ಸದ್ಯಕ್ಕೆ ಪ್ಲ್ಯಾಸ್ಟಿಕ್ ನೋಟುಗಳನ್ನು ಮುದ್ರಿಸುವ ಕುರಿತು ಸರ್ಕಾರದಿಂದ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ’ ಎಂದು ಹೇಳಿದ್ದಾರೆ.
ಅಲ್ಲದೇ ಆರ್‌ಬಿಐನ 2022-23ನೇ ಸಾಲಿನ ವಾರ್ಷಿಕ ವರದಿಯ ಪ್ರಕಾರ ‘2022- 23ರಲ್ಲಿ ಭದ್ರತಾ ಮುದ್ರಣಕ್ಕಾಗಿ ಒಟ್ಟು 4,682.80 ಕೋಟಿ ರು.ಗಳನ್ನು ವೆಚ್ಚ ಮಾಡಲಾಗಿದೆ. ಅದಾಗ್ಯೂ ಪ್ಲ್ಯಾಸ್ಟಿಕ್ ನೋಟುಗಳ ಮುದ್ರಣ ಮಾಡಿಲ್ಲ ಮತ್ತು ಅದಕ್ಕಾಗಿ ಯಾವುದೇ ವೆಚ್ಚ ಮಾಡಿಲ್ಲ. 1934 ರ ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆಯ ಸೆಕ್ಷನ್ 25 ರ ಪ್ರಕಾರ ಪ್ಲ್ಯಾಸ್ಟಿಕ್ ನೋಟುಗಳನ್ನು ಪರಿಚಯಿಸಲು ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರೆ.
ಕರೆನ್ಸಿ ನೋಟ್ ಬ್ಯಾನ್ ಮಾಡಿದ ಪಾಕಿಸ್ತಾನ, ಹೊಸ ನೋಟು ಬಿಡುಗಡೆಗೆ ಆದೇಶ!
ಏನಿದು ಪ್ಲ್ಯಾಸ್ಟಿಕ್ ನೋಟು?
ದೇಶದಲ್ಲಿ ಆರ್‌ಬಿಐ ಮುದ್ರಿಸುವ ಹಾಳೆಯ ನೋಟುಗಳ ಬಾಳಿಕೆ ಹೆಚ್ಚಿಸಲು ಹಾಗೂ ನಕಲಿ ನೋಟುಗಳ ಹಾವಳಿ ತಪ್ಪಿಸುವ ಸಲುವಾಗಿ ಪ್ಲ್ಯಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವುದಾಗಿ 2016ರಲ್ಲಿ ಸರ್ಕಾರ ಘೋಷಿಸಿತ್ತು. ಇದಕ್ಕಾಗಿ ಕೊಚ್ಚಿ, ಮೈಸೂರು, ಜೈಪುರ, ಶಿಮ್ಲಾ ಮತ್ತು ಭುವನೇಶ್ವರದಲ್ಲಿ 10 ರು. ಮುಖಬೆಲೆಯ ಪ್ಲ್ಯಾಸ್ಟಿಕ್ ನೋಟುಗಳನ್ನು ಪ್ರಾಯೋಗಿಕವಾಗಿ ಮುದ್ರಿಸಲಾಗುವುದು ಎಂದು 2018ರಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ ಅವುಗಳ ಮುದ್ರಣದ ಕುರಿತು ಬಳಿಕ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಕಾರಣಾಂತರಗಳಿಂದ ಈ ಯೋಜನೆ ಸ್ಥಗಿತಗೊಂಡಿದೆ ಎನ್ನಲಾಗಿದೆ.
500 ರೂಪಾಯಿ ನೋಟಿನಲ್ಲಿ ರಾಮನ ಭಾವಚಿತ್ರ? ವದಂತಿಗೆ ಬ್ರೇಕ್, ಇಲ್ಲಿದೆ ಸತ್ಯಾಸತ್ಯತೆ!