ನವದೆಹಲಿ(ಜ.28): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಗಳಿಗೆ ಗೋಲಿ ಮಾರೋ(ಗುಂಡು ಹೊಡೆಯಿರಿ) ಎಂದು ಕೇಂದ್ರ ಸಚಿವ ಅನುರಾಗ್ ಠಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಠಾಕೂರ್, ಸಿಎಎ ವಿರೋಧಿ ಹೋರಾಟಗಾರರಿಗೆ ಗುಂಡಿಕ್ಕಿ ಸಾಯಿಸಬೇಕು ಎಂದು ಗುಡುಗಿದ್ದಾರೆ. 

ನೆರೆದಿದ್ದ ಸಭಿಕರಿಗೆ ದೇಶದ್ರೋಹಿಗಳನ್ನು ಗುಂಡಿಕ್ಕಿ ಸಾಯಿಸಬೇಕು ಎಂದು ಘೋಷಣೆ ಕೂಗಲು ಹೇಳಿದ  ಠಾಕೂರ್, ಇದೇ ಘೋಷಣೆಯನ್ನು ಹಲವು ಬಾರಿ ಪುನರಾವರ್ತಿಸಿದರು.

ಪ್ರಧಾನಿ ಮೋದಿ ಸರ್ಕಾರವನ್ನು ಟೀಕಿಸುವವರು ದೇಶ ದ್ರೋಹಿಗಳು ಎಂದ ಅನುರಾಗ್ ಠಾಕೂರ್, ಸಿಎಎ ವಿರೋಧಿಗಳನ್ನೆಲ್ಲಾ ಸಾಲಾಗಿ ನಿಲ್ಲಿಸಿ ಗುಂಡಿಕ್ಕಬೇಕು ಎಂದು ಆಗ್ರಹಿಸಿದರು.

CAA ವಿರೋಧಿ ಘೋಷಣೆ: ಶಾ ಎದುರೇ ವಿದ್ಯಾರ್ಥಿ ಥಳಿಸಿದ ಬಿಜೆಪಿ ಕಾರ್ಯಕರ್ತರು!

ಇನ್ನು ಅನುರಾಗ್ ಠಾಕೂರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ವಿಪಕ್ಷಗಳು, ಪ್ರಧಾನಿ ಮೋದಿ ಸರ್ಕಾರದ ಮನದಾಳದ ಮಾತನ್ನು ಅನುರಾಗ್ ಠಾಕೂರ್ ಪುನರುಚ್ಛಿಸಿದ್ದಾರೆ ಎಂದು ಹರಿಹಾಯ್ದಿವೆ.

ಇನ್ನು ಅನುರಾಗ್ ಠಾಕೂರ್ ಹೇಳಿಕೆಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದ್ದು, ಈ ಕುರಿತು ವರದಿ ನೀಡುವಂತೆ ಕೇಂದ್ರ ಚುನಾವಣಾ ಆಯೋಗ ದೆಹಲಿ ಚುನಾವಣಾ ಆಯೋಗವನ್ನು ಕೋರಿದೆ.