ನವದೆಹಲಿ(ಅ.22): ಚೀನಾ ಗಡಿಯಲ್ಲಿ ತನ್ನ ಮೂಲಸೌಕರ್ಯ ಬಲಪಡಿಸಿಕೊಳ್ಳುತ್ತಿರುವ ಭಾರತ, ಈಗ ಲಡಾಖ್‌ ಹಾಗೂ ಕಾಶ್ಮೀರ ಪ್ರದೇಶದಲ್ಲಿ 10 ಬೃಹತ್‌ ಸುರಂಗಗಳನ್ನು ಕೊರೆಯುವ ಯೋಜನೆ ಹಾಕಿಕೊಂಡಿದೆ. ಸುಮಾರು 100 ಕಿ.ಮೀ.ನಷ್ಟುಉದ್ದವಾಗಿರುವ ಈ ಸುರಂಗಗಳನ್ನು ಸರ್ವಋುತುಗಳಲ್ಲಿ ಸೇನೆಯ ಸುಗಮ ಸಂಚಾರಕ್ಕಾಗಿ ನಿರ್ಮಿಸುವ ಉದ್ದೇಶವಿದೆ.

‘ಇವನ್ನು ಸಮುದ್ರ ಮಟ್ಟದಿಂದ ಅತಿ ಹೆಚ್ಚು ಎತ್ತರದಲ್ಲಿ (ಸುಮಾರು 17 ಸಾವಿರದಿಂದ 18 ಸಾವಿರ ಅಡಿ ಎತ್ತರ) ನಿರ್ಮಾಣ ಮಾಡುವ ಪ್ರಸ್ತಾಪವನ್ನು ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ಇರಿಸಿದೆ. ಇವುಗಳು ಗಡಿಯ ಮುಂಚೂಣಿ ಪ್ರದೇಶಗಳನ್ನು ಸಂಪರ್ಕಿಸುತ್ತವೆ’ ಎಂದು ಮೂಲಗಳು ಹೇಳಿವೆ. ಕೆಲವು ಸುರಂಗಗಳ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದೆ.

7 ಕಿ.ಮೀ. ಉದ್ದದ ಖಾರ್ಡಂಗ್‌ ಸುರಂಗವು ಲೇಹ್‌ನಿಂದ ನುಬ್ರಾ ಕಣಿವೆಯವರೆಗೆ ನಿರ್ಮಾಣವಾಗಲಿದೆ. ಇದು ಚೀನಾ ಹಾಗೂ ಪಾಕಿಸ್ತಾನದ ಗಡಿಯೆರಡಕ್ಕೂ ಹೊಂದಿಕೊಂಡಿದೆ. ಕರು-ಟಂಗ್ಸ್‌ಟೆ ನಡುವೆ ಇನ್ನೊಂದು 8 ಕಿ.ಮೀ. ಉದ್ದದ ಸರ್ವಋುತು ಸುರಂಗ ಇರಲಿದೆ. ಇದು ಇತ್ತೀಚೆಗೆ ಭಾರತ-ಚೀನಾ ಸಂಘರ್ಷ ನಡೆದ ಪ್ಯಾಂಗಾಂಗ್‌ ಸರೋವರಕ್ಕೆ ಸಂಪರ್ಕಿಸಲಿದೆ.ನಿಮ್ಮು-ಡರ್ಚಾ-ಪದಂ ರೋಡ್‌ ಸುರಂಗವು ಲಡಖ್‌ನ ಶುಂಕು ಲಾ ಪಾಸ್‌ ಮೂಲಕ ಹಾದು ಹೋಗಲಿದೆ. ಶ್ರೀನಗರವನ್ನು ಕಾರ್ಗಿಲ್‌, ದ್ರಾಸ್‌, ಲೇಹ್‌ ಜತೆ ಸಂಪರ್ಕಿಸುವ 14 ಕಿ.ಮೀ. ಉದ್ದದ ಝೋಯ್ಲಾ ಪಾಸ್‌ ಸುರಂಗ ಕಾಮಗಾರಿ ಈಗಾಗಲೇ ಆರಂಭವಾಗಿದೆ. ದೌಲತ್‌ ಬೇಗ್‌ ಓಲ್ಡಿಯಿಂದ ಪೂರ್ವ ಲಡಾಖ್‌ನ ಡೆಪ್ಸಾಂಗ್‌ ಪ್ಲೇನ್‌ಗೆ ಸಂಪರ್ಕಿಸುವ 10 ಕಿ.ಮೀ. ಸುರಂಗವು ಈಗಿರುವ ರಸ್ತೆಗೆ ಪರ್ಯಾಯವಾಗಿರಲಿದೆ.

ಸಾಸೆರ್‌-ಬ್ರೆಂಗಾಸಾ ನಡುವೆ 10 ಕಿ.ಮೀ. ಉದ್ದದ ಸುರಂಗದ ಕಾಮಗಾರಿ ಈಗಾಗಲೇ ಆರಂಭವಾಗಿ 6-7 ಕಿಮೀ ಕಾರ್ಯ ಮುಗಿದಿದೆ. ಇದರಿಂದ ಎರಡೂ ಸ್ಥಳಗಳ ನಡುವಿನ ಹಾಲಿ ಅಂತರ 25 ಕಿ.ಮೀ.ನಿಂದ 10 ಕಿ.ಮೀ.ಗೆ ತಗ್ಗಲಿದೆ.

ಲೇಹ್‌-ಮನಾಲಿ ನಡುವೆ 13.7 ಕಿ.ಮೀ, ಲಚುಂಗ್‌ ಪಾಸ್‌ನಲ್ಲಿ 14.7 ಕಿ.ಮೀ., ತಂಗ್ಲಾಂಗ್‌ ಪಾಸ್‌ನಲ್ಲಿ 7.32 ಕಿಮೀ ಹಾಗೂ ರಾಜ್ದಾನ್‌ ಪಾಸ್‌ನಲ್ಲಿ 18 ಕಿ.ಮೀ ಉದ್ದದ ಸುರಂಗ ನಿರ್ಮಿಸುವ ಉದ್ದೇಶವಿದೆ.