* ಶೀಘ್ರ ಸಂಪುಟ ಪುನಾರಚನೆಗೆ ಮೋದಿ ಸಿದ್ಧತೆ* ಹಲವು ಯುವ ಮುಖಗಳಿಗೆ ಮೋದಿ ಆದ್ಯತೆ* ಕಾಂಗ್ರೆಸ್, ಟಿಎಂಸಿಯಿಂದ ಬಂದವರಿಗೆ ಹುದ್ದೆ* ನಾಡಿದ್ದು ಮಂತ್ರಿ ಮಂಡಲ ಸಭೆ, ಕೆಲವರಿಗೆ ‘ಬೀಳ್ಕೊಡುಗೆ’?
ನವದೆಹಲಿ(ಜೂ.28): 2019ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಮತ್ತೊಮ್ಮೆ ಪ್ರಧಾನಿ ಪಟ್ಟಏರಿರುವ ನರೇಂದ್ರ ಮೋದಿ, ಎರಡು ವರ್ಷಗಳ ಬಳಿಕ ತಮ್ಮ ಶೀಘ್ರ ಸಂಪುಟಕ್ಕೆ ಭರ್ಜರಿ ಸರ್ಜರಿ ಮಾಡಲು ಮುಂದಾಗಿದ್ದಾರೆ.
ಅದರಲ್ಲಿ ಪಕ್ಷ ಸಂಘಟನೆಯಲ್ಲಿ ಶ್ರಮಿಸಿದವರು, ಯುವ ನಾಯಕರು, ಇತರೆ ಪಕ್ಷಗಳಿಂದ ಬಿಜೆಪಿಗೆ ಬಂದ ಹಲವು ನಾಯಕರಿಗೆ ಮನ್ನಣೆ ನೀಡಲಾಗುವುದು. ಹೀಗೆ ನೂತನ ಸಚಿವರ ಸಂಭಾವ್ಯರ ಪಟ್ಟಿಯಲ್ಲಿ ಸುಮಾರು 27 ಹೆಸರುಗಳಿಗೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಗೆ ಪೂರಕವೆಂಬಂತೆ ಜೂ.30ಕ್ಕೆ ಪ್ರಧಾನಿ ಮೋದಿ, ತಮ್ಮ ಮಂತ್ರಿ ಮಂಡಳದ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ, ಸಂಪುಟ ಪುನಾರಚನೆ ವೇಳೆ ಸ್ಥಾನ ಕಳೆದುಕೊಳ್ಳಲಿರುವ ಸಚಿವರಿಗೆ ಅವರು ಧನ್ಯವಾದ ತಿಳಿಸಿ ಬೀಳ್ಕೊಡುಗೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೂತನ ಸಂಪುಟದಲ್ಲಿ ಕರ್ನಾಟಕಕ್ಕೆ 1-2 ಸ್ಥಾನ ಸಿಗುವ ನಿರೀಕ್ಷೆ ಇದೆ ಎನ್ನಲಾಗಿದೆ.
ಕೇಂದ್ರ ಸಂಪುಟದಲ್ಲಿ ಒಟ್ಟು 81 ಜನರಿಗೆ ಅವಕಾಶವಿದ್ದು, ಹಾಲಿ 59 ಜನರು ಮಾತ್ರವೇ ಸಚಿವರಾಗಿದ್ದಾರೆ. ಅದರಲ್ಲಿ 21 ಸಂಪುಟ ದರ್ಜೆ, 9 ಜನರು ರಾಜ್ಯ ಖಾತೆ ಸ್ವತಂತ್ರ ದರ್ಜೆ ಮತ್ತು 29 ಜನರು ರಾಜ್ಯ ಖಾತೆ ಸಚಿವರಾಗಿದ್ದಾರೆ. 59 ಜನರಲ್ಲಿ 10 ರಾಜ್ಯಸಭಾ ಮತ್ತು 49 ಲೋಕಸಭಾ ಸದಸ್ಯರು ಸಚಿವರಾಗಿದ್ದಾರೆ. ಹಾಲಿ 21 ರಾಜ್ಯಗಳಿಗೆ ಕೇಂದ್ರ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿದೆ.
ಯಾರಿಗೆಲ್ಲಾ ಸ್ಥಾನ?:
ಬಿಹಾರದ ಬಿಜೆಪಿ ನಾಯಕ ಭೂಪೇಂದ್ರ ಯಾದವ್, ಬಿಹಾರದ ಮಾಜಿ ಡಿಸಿಎಂ ಸುಶೀಲ್ ಮೋದಿ, ಅಸ್ಸಾಂ ಮಾಜಿ ಸಿಎಂ ಸರ್ಬಾನಂದ್ ಸೋನೋವಾಲ್, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನಿಂದ ಬಂದ ಜ್ಯೋತಿರಾಧಿತ್ಯ ಸಿಂಧಿಯಾ, ಛತ್ತೀಸ್‌ಗಢದ ಮಾಜಿ ಸಿಎಂ ರಮಣ್‌ಸಿಂಗ್, ಮಹಾರಾಷ್ಟ್ರದಿಂದ ನಾರಾಯಣ ರಾಣೆ, ಪ್ರೀತಮ್ ಮುಂಡೆ, ಉತ್ತರಾಖಂಡದ ಅನಿಲ್ ಬಲೂನಿ, ಮಧ್ಯಪ್ರದೇಶದಿಂದ ಕೈಲಾಶ್ ವಿಜಯ್ ವರ್ಗೀಯ, ಟಿಎಂಸಿಯಿಂದ ಬಂದ ಬಂಗಾಳದ ದಿನೇಶ್ ತ್ರಿವೇದಿ, ಅಲ್ಪಸಂಖ್ಯಾತ ಕೋಟಾದಲ್ಲಿ ಸಯ್ಯದ್ ಝಫರ್ ಇಸ್ಲಾಂ, ಉ.ಪ್ರದೇಶದಿಂದ ಸ್ವತಂತ್ರ ದೇವ್‌ಸಿಂಗ್, ಪಂಕಜ್ ಚೌಧರಿ, ವರುಣ್‌ಗಾಂಧಿ, ಒಡಿಶಾದಿಂದ ಅನಿಲ್ ಜೈನ್, ಬೈಜಯಂತ್ ಪಾಂಡಾ, ರಾಜಸ್ಥಾನದ ರಾಹುಲ್ ಕಾಸ್ವಾನ್, ದೆಹಲಿಯಿಂದ ಮೀನಾಕ್ಷಿ ಲೇಖಿ, ಬಿಹಾರದಿಂದ ಚಿರಾಗ್ ಪಾಸ್ವಾನ್, ಜೆಡಿಯುದ ಆರ್.ಸಿ.ಪಿ.ಸಿಂಗ್, ಸಂತೋಷ್ ಕುಮಾರ್, ಲಡಾಖ್‌ನಿಂದ ಜಾಮ್ಯಾಂಗ್ ತ್ಸೇರಿಂಗ್ ನ್ಯಾಮ್‌ಗೆಲ್, ಅಪ್ನಾದಳ ನಾಯಕಿ ಅನುಪ್ರಿಯಾ ಪಟೇಲ್ ಸೇರಿದಂತೆ ಹಲವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ.
ಪುನಾರಚನೆ ಏಕೆ?:
ಸಚಿವರಾದ ಸುರೇಶ್ ಅಂಗಡಿ, ರಾಮ್ ವಿಲಾಸ್ ಪಾಸ್ವಾನ್ ನಿಧನರಾದ ಬಳಿಕ ಆ ಸ್ಥಾನ ಖಾಲಿ ಇದೆ. ಶಿವಸೇನೆ ಬೆಂಬಲ ಹಿಂಪಡೆದ ಬಳಿಕ ಅವರಿಗೆ ನೀಡಿದ್ದ ಹುದ್ದೆಗಳೂ ಖಾಲಿ ಇದೆ. ಜೊತೆಗೆ 2024ರ ಲೋಕಸಭಾ ಚುನಾವಣೆ ವೇಳೆಗೆ ಪಕ್ಷ ಮತ್ತು ಸರ್ಕಾರದ ವರ್ಚಸ್ಸನ್ನು ಸರ್ಕಾರ ಹೆಚ್ಚಿಸಿಕೊಳ್ಳಲೇಬೇಕಿದೆ. ಹಾಲಿ 21 ರಾಜ್ಯಗಳು ಮಾತ್ರವೇ ಸಂಪುಟದಲ್ಲಿ ಪ್ರಾತಿನಿಧ್ಯ ಹೊಂದಿವೆ. ಹೀಗಾಗಿ ಉಳಿದ ರಾಜ್ಯಗಳಿಗೂ ಪ್ರಾತಿನಿಧ್ಯ ನೀಡಬೇಕಿದೆ. ಭವಿಷ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ರಾಜ್ಯಗಳ ಮೇಲೂ ಸರ್ಕಾರ ಕಣ್ಣಿಡಲಿದೆ. ಹೀಗೆ ನಾನಾ ಕಾರಣಗಳಿಂದಾಗಿ ಕೇಂದ್ರ ಸರ್ಕಾರ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆಗೆ ಮುಂದಾಗಿದೆ.
