ನವದೆಹಲಿ[ಫೆ.13]: ದೇಶದ ಎಲ್ಲ ರೈತರಿಗೆ ವರ್ಷಕ್ಕೆ 6 ಸಾವಿರ ರು. ಸಹಾಯಧನ ನೀಡುವ ಯೋಜನೆಯನ್ನು ಕಳೆದ ವರ್ಷ ಪ್ರಕಟಿಸಿದ್ದ ಕೇಂದ್ರ ಸರ್ಕಾರ ಮತ್ತೆ ರೈತರ ನೆರವಿಗೆ ಧಾವಿಸಿದೆ. ಕೀಟನಾಶಕ ಬಳಸಿದಾಗ ಬೆಳೆಗಳು ಹಾನಿಗೀಡಾದರೆ ಅಂಥ ರೈತರಿಗೆ ಪರಿಹಾರ ನೀಡುವ ಹಾಗೂ ಕೀಟನಾಶಕ ವ್ಯಾಪಾರದಲ್ಲಿ ನಡೆಯುವ ಮೋಸಕ್ಕೆ ಕಡಿವಾಣ ಹಾಕುವ ಮಸೂದೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ‘ಕೀಟನಾಶಕ ನಿರ್ವಹಣೆ ಮಸೂದೆ-2020’ಗೆ ಅನುಮೋದನೆ ದೊರಕಿತು. ಇದು ಹಳೆಯದಾದ ‘ಕೀಟನಾಶಕ ಕಾಯ್ದೆ-1968’ನ್ನು ನೇಪಥ್ಯಕ್ಕೆ ಸರಿಸಲಿದೆ.

ಮಸೂದೆಯಲ್ಲೇನಿದೆ?:

- ರೈತರಿಗೆ ಮೋಸ ಮಾಡುವ ನಕಲಿ ಕೀಟನಾಶಕಗಳ ಮೇಲೆ ನಿಗಾ ಇಡಲಾಗುತ್ತದೆ

- ಕೀಟನಾಶಕ ಜಾಹೀರಾತುಗಳು ರೈತರ ಹಾದಿ ತಪ್ಪಿಸಿ ಮೋಸ ಮಾಡದಂತಾಗಲು ನಿಯಂತ್ರಣ ವಿಧಿಸಲಾಗುತ್ತದೆ

- ಕೀಟನಾಶಕಗಳಿಗೆ ನಿರ್ದಿಷ್ಟಬೆಲೆ ನಿಗದಿ ಮಾಡಲಿದೆ. ನಿಯಂತ್ರಣಕ್ಕಾಗಿ ಪ್ರಾಧಿಕಾರ ರಚನೆಯಾಗಲಿದೆ.

- ಸುರಕ್ಷಿತ ಹಾಗೂ ಪರಿಣಾಮಕಾರಿ ಕೀಟನಾಶಕಳು ಇರಬೇಕು ಎಂಬ ಷರತ್ತು ವಿಧಿಸಲಾಗುತ್ತದೆ.

- ಕೀಟನಾಶಕ ಉತ್ಪಾದನಾ ಕಂಪನಿಗಳು ಹೊಸ ಕಾಯ್ದೆಯಡಿ ನೋಂದಣಿ ಆಗುವುದು ಕಡ್ಡಾಯ

- ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಂಪನಿಗಳಿಗೆ ದಂಡ ಹಾಕಿ, ಜೈಲು ಶಿಕ್ಷೆ ವಿಧಿಸಲಾಗುತ್ತದೆ.

- ರೈತನಿಗೆ ನಕಲಿ ಅಥವಾ ಕಳಪೆ ಕೀಟನಾಶಕಗಳಿಂದ ಮೋಸವಾದರೆ ಪರಿಹಾರ ನೀಡಲಾಗುತ್ತದೆ

- ಕಂಪನಿಗಳ ಮೇಲೆ ಹಾಕಲಾದ ದಂಡ ಸಂಗ್ರಹಿಸಿ ಇಡಲು ಕೇಂದ್ರೀಯ ನಿಧಿ ಸ್ಥಾಪನೆ; ನಿಧಿಯ ಹಣ ಪರಿಹಾರಕ್ಕೆ ಬಳಕೆ