ನವದೆಹಲಿ(ಮೇ.31): ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷ ದಿಟ್ಟನಿರ್ಧಾರಗಳಿಗೆ ಹೆಸರಾಗಿದೆ. ಕೊರೋನಾ ವೈರಸ್‌ ಅನ್ನು ಎದುರಿಸುವಲ್ಲಿ ಶಕ್ತಿಶಾಲಿ ದೇಶಗಳು ಅಸಹಾಯಕವಾಗಿದ್ದ ಸಂದರ್ಭದಲ್ಲಿ ಮೋದಿ ಸರ್ಕಾರ ಸಮಯೋಚಿತ ಕ್ರಮಗಳನ್ನು ಕೈಗೊಂಡಿದೆ. ಈ ಹೋರಾಟದಲ್ಲಿ ಜನರನ್ನು ತೊಡಗಿಸಿಕೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಶ್ಲಾಘಿಸಿದ್ದಾರೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ನಡ್ಡಾ, ಮೋದಿ ಸರ್ಕಾರದ ಎರಡನೇ ಅವಧಿಯು ಊಹಿಸಲಾರದ ಸವಾಲುಗಳು ಮತ್ತು ಸಾಧನೆಗಳಿಂದ ತುಂಬಿಕೊಂಡಿದೆ. ಪೌರತ್ವ ತಿದ್ದುಪಡಿ ಕಾಯ್ದೆ, 370ನೇ ವಿಧಿ ರದ್ದು, ಬ್ಯಾಂಕುಗಳ ವಿಲೀನ, ಭಯೋತ್ಪಾದಕ ನಿಗ್ರಹ ಕಾಯ್ದೆಗಳು ಸರ್ಕಾರದ ಪ್ರಮುಖ ಸಾಧನೆಗಳಿಗೆ ಉದಾಹರಣೆಯಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಕೊರೋನಾ ವೈರಸ್‌ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಹರಿಹಾಯ್ದ ನಡ್ಡಾ, ರಾಹುಲ್‌ ಗಾಂಧಿ ಅವರಿಗೆ ಕೊರೋನಾ ವೈರಸ್‌ ಬಗ್ಗೆ ಸೀಮಿತ ಜ್ಞಾನವಿದೆ. ಅವರು ರಾಜಕೀಯ ಉದ್ದೇಶಕ್ಕಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.