ನವದೆಹಲಿ[ಫೆ.28]: ಈಶಾನ್ಯ ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ಹಾಗೂ ವಿರುದ್ಧ ನಡೆದ ಹಿಂಸಾಚಾರದ ನಂತರ ಪರಿಸ್ಥಿತಿ ತಣ್ಣಗಾಗಿದೆ. ಆದರೂ ಗಲಭೆಯಲ್ಲಿ ಗಾಯಗೊಂಡಿದ್ದ ಮತ್ತೆ 11 ಜನ ಶನ ಗುರುವಾರ ಅಸುನೀಗಿದ್ದು, ಮೃತರ ಸಂಖ್ಯೆ 38ಕ್ಕೇರಿದೆ.

ಈ ನಡುವೆ, ಹಿಂಸೆಯಲ್ಲಿ ಧ್ವಂಸಗೊಂಡ ಹಾಗೂ ಸುಟ್ಟುಹೋದ ತಮ್ಮ ಮನೆಗಳು ಹಾಗೂ ಆಸ್ತಿಪಾಸ್ತಿಗಳನ್ನು ಪರಿಶೀಲಿಸಲು ಅಲ್ಲಿನ ಸಾವಿರಾರು ವಾಸಿಗಳು ವಾಸಸ್ಥಳಕ್ಕೆ ಮರಳುತ್ತಿದ್ದು, ಅಳಿದುಳಿದ ವಸ್ತುಗಳನ್ನು ಆರಿಸಿ ಬೇರೆಡೆ ಸಾಗಿಸುತ್ತಿದ್ದಾರೆ. ತಮ್ಮ ಬದುಕು ಹೀಗಾಗಿ ಹೋಯಿತಲ್ಲ ಎಂದು ದುಃಖಿಸುತ್ತಿರುವುದು ಕಂಡುಬಂತು.

"

ಹಿಂಸಾ ಘಟನೆ ತನಿಖೆಯನ್ನು ಸರ್ಕಾರ ಕ್ರೈಮ್‌ ಬ್ರ್ಯಾಂಚ್‌ಗೆ ಒಪ್ಪಿಸಿದ್ದು, 2 ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಯ ಘೋಷಣೆ ಮಾಡಿದೆ. ದಾಖಲಾದ ಎಫ್‌ಐಆರ್‌ಗಳ ಸಂಖ್ಯೆ 48ಕ್ಕೇರಿದೆ.

ಕಂಡು ಕೇಳರಿಯದ ಕೋಮುದಳ್ಳುರಿಯಲ್ಲಿ ಅಸುನೀಗಿದವರ ಕುಟುಂಬಕ್ಕೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಲಾ 10 ಲಕ್ಷ ರು. ಪರಿಹಾರ ಪ್ರಕಟಿಸಿದ್ದಾರೆ. ಗಂಭೀರವಾಗಿ ಗಾಯಗೊಂಡವರಿಗೆ ತಲಾ 2 ಲಕ್ಷ ರು. ನೀಡಲಾಗುತ್ತದೆ. ಆಸ್ತಿಪಾಸ್ತಿ ಹಾನಿಯಾಗಿದ್ದರಿಂದ ಜನರು ತಮ್ಮ ಅಮೂಲ್ಯ ದಾಖಲೆಪತ್ರ ಕಳೆದುಕೊಂಡಿದ್ದರೆ, ಅಂಥ ದಾಖಲೆಗಳನ್ನು ಮರಳಿ ಸೃಷ್ಟಿಸಿಕೊಡಲು ವಿಶೇಷ ಶಿಬಿರ ಆಯೋಜಿಸಲಾಗುತ್ತದೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಹೆದರುತ್ತಿರುವ ಜನ:

ಹಿಂಸಾಪೀಡಿತ ಈಶಾನ್ಯ ದಿಲ್ಲಿಯಲ್ಲಿ ಪರಿಸ್ಥಿತಿ ಶಾಂತವಾಗಿದ್ದರೂ, ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ ಹಾಗೂ ಹಿಂಸೆ ಮರುಕಳಿಸುವ ಭಯದಿಂದ ಅಂಗಡಿ-ಮುಂಗಟ್ಟುಗಳು ಗುರುವಾರವೂ ಬಂದ್‌ ಆಗಿದ್ದವು. ಜನರು ತಮ್ಮ ಮನೆಯಿಂದ ಹೊರಬರಲು ಭಯಪಟ್ಟು, ಒಳಗೇ ಉಳಿದರು.

"

ಇನ್ನೂ ಕೆಲವರು ಧ್ವಂಸಗೊಂಡ ತಮ್ಮ ಮನೆಯಲ್ಲಿನ ಅಳಿದುಳಿದ ವಸ್ತುಗಳನ್ನು ತೆಗೆದುಕೊಂಡು ಬೇರೆ ಪ್ರದೇಶಕ್ಕೆ ವಾಸಿಸಲು ತೆರಳುತ್ತಿರುವ ದೃಶ್ಯವೂ ಕಂಡುಬಂತು.

ಧ್ವಂಸಗೊಂಡ ಮನೆಗಳು, ಬೆಂಕಿಯಿಂದ ಸುಟ್ಟುಹೋದ ಕಟ್ಟಡಗಳು, ವಾಹನಗಳು, ಇಟ್ಟಿಗೆಗಳು, ಒಡೆದ ಗಾಜಿನ ಚೂರುಗಳು ಪರಿಸ್ಥಿತಿಯ ಭೀಕರತೆ ಸಾರುತ್ತಿದ್ದವು.