ನವದೆಹಲಿ(ಫೆ.10): ನೂತನ ಕೃಷಿ ಕಾಯ್ದೆಗಳ ವಿರುದ್ಧ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ ಮೈಕ್ರೋ ಬ್ಲಾಗಿಂಗ್ ಸೈಟ್‌ ಟ್ವಿಟರ್‌ ಬಳಸಿಕೊಂಡು ಪ್ರಚೋದನಾಕಾರಿ ಪೋಸ್ಟ್‌ಗಳು ಮಾಡಲಾಗುತ್ತಿದೆ. ಹೀಗಿರುವಾಗ ಇಂತಹ ಪೋಸ್ಟ್‌ಗಳಿಗೆ ಕಡಿವಾಣ ಹಾಕುವಂತೆ ಕೇಂದ್ರ ಸರ್ಕಾರ ಟ್ವಿಟರ್‌ ಸಂಸ್ಥೆಗೆ ನೋಟೀಸ್ ಕಳುಹಿಸಿತ್ತು. ಇದರ ಬೆನ್ನಲ್ಲೇ ಟ್ವಿಟರ್ ಇಂತಹ ಪ್ರಚೋದನಾಕಾರಿ ಪೋಸ್ಟ್‌ ಇರುವ ಅಕೌಂಟ್‌ಗಳನ್ನು ಬ್ಲಾಕ್ ಹಾಗೂ ನಿಷ್ಕ್ರಿಯ ಮಾಡಲಾರಂಭಿಸಿದೆ. 

ಇಂತಹ ಕಂಟೆಂಟ್‌ಗಳನ್ನು ರಿವ್ಯೂ ಮಾಡುವುದಾಗಿ ಸರ್ಕಾರಕ್ಕೆ ಭರವಸೆ ನೀಡಿರುವ ಟ್ವಿಟರ್, ಪ್ರಚೋದನಾಕಾರಿ ಪೋಸ್ಟ್‌ಗಳಿರುವ ಅಕೌಂಟ್‌ಗಳನ್ನು ನಿಷ್ಕ್ರಿಯಗೊಳಿಸುವುದಾಗಿ ತಿಳಿಸಿದೆ. ಈವರೆಗೂ 702 ಇಂತಹ ಅಕೌಂಟ್‌ಗಳನ್ನು ಟ್ವಿಟರ್ ಬ್ಯಾನ್ ಮಾಡಿದೆ. ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಐಟಿ ಆಕ್ಟ್‌ನ ಸೆಕ್ಷನ್ 69A(3)ರಡಿ ಟ್ವಿಟರ್‌ಗೆ ನೋಟೀಸ್ ನೀಡಿತ್ತು.

ಸರ್ಕಾರದ ನೋಟಿಸ್‌ಗೆ ಬೆಚ್ಚಿದ ಟ್ವೀಟರ್‌: ಸಚಿವರ ಜತೆ ಮಾತುಕತೆಗೆ ಯತ್ನ!

ಕಠಿಣ ಕ್ರಮ ತೆಗೆದುಕೊಳ್ಳಬಹುದು

ಐಟಿ ಆಕ್ಟ್‌ನ ಸೆಕ್ಷನ್ 69A(3)ರಡಿ ಸೋಶಿಯಲ್ ಮೀಡಿಯಾದಲ್ಲಿ ಆಕ್ರಮಣಕಾರಿ ಮತ್ತು ಪ್ರಚೋದಿಸುವ ಪೋಸ್ಟ್‌ಗಳನ್ನು ತಡೆಯದಿದ್ದರೆ, ಸೋಶಿಯಲ್ ಮೀಡಿಯಾ ಕಂಪನಿಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ. ಏಳು ವರ್ಷ ಜೈಲು ಶಿಕ್ಷೆ ಜೊತೆ ದಂಡವನ್ನೂ ವಿಧಿಸಲಾಗುತ್ತದೆ. ಸದ್ಯ ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಟ್ವಿಟರ್ ಸರ್ಕಾರದ ನಿರ್ದೇಶನ ಪಾಲಿಸಿ ಪ್ರಚೋದನಕಾರಿ ಪೋಸ್ಟ್‌ಗಳಿರುವ ಖಾತೆಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯ ಆರಂಭಿಸಿದೆ ಎಂದಿದ್ದಾರೆ.