ನವದೆಹಲಿ(ಜ.03): ಜ.8ರಿಂದ ಜ.30ವರೆಗೆ ಬ್ರಿಟನ್‌ನಿಂದ ಬರುವ ಎಲ್ಲಾ ಪ್ರಯಾಣಿಕರಿಗೆ ಅವರದೇ ಖರ್ಚಿನಲ್ಲಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದ್ದು, ಬರುವ ಮುನ್ನ 72 ತಾಸಿನೊಳಗಿನ ಕೊರೋನಾ ನೆಗೆಟಿವ್‌ ವರದಿ ತರುವುದು ಕೂಡ ಕಡ್ಡಾಯವಾಗಿದೆ. ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಶನಿವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಬ್ರಿಟನ್ನಿನಲ್ಲಿ ಅತ್ಯಂತ ವೇಗವಾಗಿ ಹರಡುವ ಕೊರೋನಾದ ರೂಪಾಂತರಿ ವೈರಸ್‌ ಪತ್ತೆಯಾಗಿರುವುದರಿಂದ ಆ ದೇಶದಿಂದ ಬರುವ ಹಾಗೂ ಆ ದೇಶಕ್ಕೆ ಹೋಗುವ ಎಲ್ಲಾ ವಿಮಾನಗಳನ್ನು ಡಿ.23ರಿಂದ ರದ್ದುಪಡಿಸಲಾಗಿದೆ. ಈ ನಿಷೇಧ ಜ.7ವರೆಗೆ ಮುಂದುವರೆಯಲಿದೆ. ಜ.8ರಿಂದ ವಿಮಾನ ಸಂಚಾರ ಪುನಾರಂಭವಾಗಲಿದ್ದು, ಪ್ರತಿ ವಾರ 30 ವಿಮಾನಗಳ ಸಂಚಾರಕ್ಕೆ ಮಾತ್ರ ಒಪ್ಪಿಗೆ ನೀಡಲಾಗಿದೆ. ಆದರೆ, ಅಲ್ಲಿಂದ ಬರುವ ಪ್ರಯಾಣಿಕರು ರೂಪಾಂತರಿ ಕೊರೋನಾ ವೈರಸ್‌ ಹೊತ್ತು ತರಬಾರದು ಎಂದು ಎರಡೆರಡು ಬಾರಿ ಟೆಸ್ಟ್‌ ಮಾಡಿಸಿಕೊಳ್ಳುವುದನ್ನು ಆರೋಗ್ಯ ಇಲಾಖೆ ಕಡ್ಡಾಯಗೊಳಿಸಿದೆ.

ವಿಮಾನ ಹತ್ತುವುದಕ್ಕಿಂತ ಮುನ್ನ 72 ತಾಸಿನೊಳಗೆ ಕೊರೋನಾ ಟೆಸ್ಟ್‌ ಮಾಡಿಸಿಕೊಂಡು ನೆಗೆಟಿವ್‌ ವರದಿ ತರಬೇಕು. ನಂತರ ಭಾರತದಲ್ಲಿ ಇಳಿದ ಮೇಲೆ ತಮ್ಮದೇ ಖರ್ಚಿನಲ್ಲಿ ಕೊರೋನಾ ಟೆಸ್ಟ್‌ ಮಾಡಿಸಿಕೊಳ್ಳಬೇಕು. ಪಾಸಿಟಿವ್‌ ಬಂದರೆ ಆಯಾ ರಾಜ್ಯದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಕಳಿಸಲಾಗುತ್ತದೆ. ನೆಗೆಟಿವ್‌ ಬಂದರೆ ಮನೆಯಲ್ಲೇ 14 ದಿನ ಐಸೋಲೇಶನ್‌ನಲ್ಲಿ ಇರುವುದು ಕಡ್ಡಾಯ ಎಂದು ಆರೋಗ್ಯ ಇಲಾಖೆಯ ಮಾರ್ಗಸೂಚಿ ತಿಳಿಸಿದೆ.