ನವದೆಹಲಿ(ಫೆ.05): ದೆಹಲಿಯ ರೈತ ಪ್ರತಿಭಟನೆ ಮುಂದಿಟ್ಟುಕೊಂಡು ಭಾರತಕ್ಕೆ ಮಸಿ ಬಳಿಯುವ ಮತ್ತಷ್ಟುಜಾಗತಿಕ ಯತ್ನಗಳು ಗುರುವಾರ ಕೂಡ ಮುಂದುವರೆದಿವೆ. ನಮ್ಮ ಆಂತರಿಕ ವಿಷಯದಲ್ಲಿ ಬಾಹ್ಯ ಶಕ್ತಿಗಳ ಪ್ರವೇಶದ ಅವಶ್ಯಕತೆ ಇಲ್ಲ ಎಂಬ ಭಾರತ ಸರ್ಕಾರದ ಸ್ಪಷ್ಟಸೂಚನೆಯ ಹೊರತಾಗಿಯೂ, ಅಂಥ ಯತ್ನಗಳು ನಡೆಯುತ್ತಿವೆ. ಸ್ವೀಡನ್ನಿನ ಯುವ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್‌ ಗುರುವಾರ ಮತ್ತೊಮ್ಮೆ ಟ್ವೀಟ್‌ ಮಾಡಿ, ಹೋರಾಟಕ್ಕೆ ತನ್ನ ಬೆಂಬಲ ವ್ಯಕ್ತಪಡಿಸುವ ಮೂಲಕ ಭಾರತ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

ಮತ್ತೊಂದೆಡೆ, ರೈತ ಹೋರಾಟದ ಕುರಿತು ಬ್ರಿಟನ್‌ ಸಂಸತ್‌ನಲ್ಲಿ ಚರ್ಚೆ ನಡೆಸಬೇಕೆಂದು ದೊಡ್ಡ ಮಟ್ಟದಲ್ಲಿ ಆನ್‌ಲೈನ್‌ನಲ್ಲಿ ಸಹಿ ಅಭಿಯಾನ ಆರಂಭವಾಗಿದೆ. ಇನ್ನು ಜಾಗತಿಕವಾಗಿ ಪ್ರಭಾವಿ ಎನ್ನಿಸಿಕೊಂಡ ಕೆಲ ಪತ್ರಿಕೆಗಳ ಪತ್ರಕರ್ತರು ಸಾಮಾಜಿಕ ಜಾಲತಾಣಗಳ ಮೂಲಕ ಹೋರಾಟ ಹುರಿದುಂಬಿಸುವ ಯತ್ನ ಮಾಡಿದ್ದಾರೆ. ಇದರ ಬೆನ್ನಲ್ಲೇ ಸ್ವತಃ ಟ್ವೀಟರ್‌ ಸಂಸ್ಥೆಯ ಮುಖ್ಯಸ್ಥ ಜಾಕ್‌ ಡೋರ್ಸಿ ಪರೋಕ್ಷವಾಗಿ ರೈತ ಹೋರಾಟ ಬೆಂಬಲಿಸುತ್ತಿರುವುದರ ಬಗ್ಗೆ ಸುಳಿವುಗಳು ಸಿಕ್ಕಿವೆ.

ಖ್ಯಾತ ಪಾಪ್‌ ತಾರೆ ರಿಹಾನಾ ಬೆಂಬಲದೊಂದಿಗೆ ಆರಂಭವಾದ ಈ ಎಲ್ಲಾ ಬೆಳವಣಿಗೆಗಳು ಸಾಗುತ್ತಿರುವ ಹಾದಿ, ನರೇಂದ್ರ ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಂಚಿನ ಭಾಗವಾಗಿ ಕಾಣಿಸಿಕೊಳ್ಳುತ್ತಿವೆ ಎಂದು ಹೇಳಲಾಗುತ್ತಿದೆ.

ಮತ್ತೆ ಗ್ರೇಟಾ ಕಿರಿಕ್‌:

ರೈತರ ಪ್ರತಿಭಟನೆಯ ಬಗ್ಗೆ ಬುಧವಾರ ಟ್ವೀಟ್‌ ಮಾಡಿ ವಿವಾದಕ್ಕೆ ಕಾರಣರಾಗಿದ್ದ ಗ್ರೇಟಾ ಥನ್‌ಬರ್ಗ್‌ ಗುರುವಾರ ಮತ್ತೆ ಟ್ವೀಟ್‌ ಮಾಡಿದ್ದು, ‘ಈಗಲೂ ನಾನು ರೈತರ ಜೊತೆ ನಿಲ್ಲುತ್ತೇನೆ ಮತ್ತು ಅವರ ಶಾಂತಿಯುತ ಪ್ರತಿಭಟನೆಯನ್ನು ಬೆಂಬಲಿಸುತ್ತೇನೆ. ದ್ವೇಷ, ಬೆದರಿಕೆ ಅಥವಾ ಮಾನವ ಹಕ್ಕುಗಳ ಉಲ್ಲಂಘನೆಯಿಂದ ನನ್ನ ನಿಲುವನ್ನು ಬದಲಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ನೇರಾನೇರ ತಿರುಗೇಟು ನೀಡಿದ್ದಾರೆ.

ಬ್ರಿಟನ್‌ ಸಂಸತ್ತಲ್ಲೂ ಚರ್ಚೆ?:

ಈ ನಡುವೆ ಭಾರತದಲ್ಲಿ ರೈತರ ಪ್ರತಿಭಟನೆ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಕುರಿತಾಗಿ ಚರ್ಚೆ ಕೈಗೆತ್ತಿಕೊಳ್ಳಬೇಕು ಎಂದು ಬ್ರಿಟನ್‌ ಸಂಸತ್‌ನ ಅರ್ಜಿ ಸಮಿತಿಗೆ ಮನವಿಯೊಂದು ಸಲ್ಲಿಕೆಯಾಗಿದೆ. ಅದಕ್ಕೆ ಆನ್‌ಲೈನ್‌ ಮೂಲಕ 1.10 ಲಕ್ಷಕ್ಕೂ ಹೆಚ್ಚು ಜನರು ಸಹಿ ಹಾಕಿದ್ದಾರೆ. ಬ್ರಿಟನ್‌ನಲ್ಲಿ 1 ಲಕ್ಷ ಮಂದಿ ಸಹಿ ಮಾಡಿದ ಯಾವುದೇ ವಿಚಾರವನ್ನು ಬ್ರಿಟನ್‌ ಸಂಸತ್ತು ಚರ್ಚೆ ನಡೆಸುವ ಬಗ್ಗೆ ಪರಿಶೀಲಿಸಬೇಕಾಗುತ್ತದೆ. ಒಂದು ವೇಳೆ ಸಂಸತ್‌ನಲ್ಲಿ ಚರ್ಚೆ ಏನಾದರೂ ನಡೆದಲ್ಲಿ ಅದು ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆ ಇದೆ.

ಹೋರಾಟಕ್ಕೆ ಟ್ವೀಟರ್‌ ಬೆಂಬಲ?:

ರೈತ ಹೋರಾಟ ಬೆಂಬಲಿಸಿ ಜಾಗತಿಕ ಮಟ್ಟದಲ್ಲಿ ಹಲವು ಖ್ಯಾತನಾಮರು ಮಾಡಿರುವ ಟ್ವೀಟ್‌ಗಳಿಗೆ, ಸ್ವತಃ ಟ್ವೀಟರ್‌ ಸಂಸ್ಥೆಯ ಮುಖ್ಯಸ್ಥ ಜಾಕ್‌ ಡೋರ್ಸಿ ಲೈಕ್‌ ಮಾಡಿದ್ದಾರೆ. ಹೀಗಾಗಿ ಹೋರಾಟವನ್ನು ಅವರು ಕೂಡ ಪರೋಕ್ಷವಾಗಿ ಬೆಂಬಲಿಸುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ರೈತರ ಹತ್ಯಾಕಾಂಡದ ಹ್ಯಾಷ್‌ಟ್ಯಾಗ್‌ನಲ್ಲಿ ಆರಂಭವಾಗಿದ್ದ ಖಾತೆಗಳು ಸೇರಿದಂತೆ ಇನ್ನಿತರ ಪ್ರಚೋದನಾಕಾರಿ ಖಾತೆಗಳನ್ನು ನಿಷ್ಕಿ್ರಯಗೊಳಿಸುವಂತೆ ಕೇಂದ್ರ ಸರ್ಕಾರ ಟ್ವೀಟರ್‌ಗೆ ಸೂಚನೆ ನೀಡಿತ್ತು. ಇದನ್ನು ಮೊದಲಿಗೆ ಪಾಲಿಸಿದಂತೆ ಮಾಡಿದ್ದ ಟ್ವೀಟರ್‌ ಆ ನಂತರ ಸರ್ಕಾರದ ಸೂಚನೆಯನ್ನು ಗಾಳಿಗೆ ತೂರಿತ್ತು. ಹೀಗಾಗಿ ಕೇಂದ್ರ ಸರ್ಕಾರದ ವಿರುದ್ಧದ ನಿಲುವನ್ನು ಟ್ವೀಟರ್‌ ಬೆಂಬಲಿಸುತ್ತಿದೆ ಎಂಬ ಗುಮಾನಿ ಹುಟ್ಟಿಕೊಂಡಿದೆ.

ಪತ್ರಕರ್ತರ ಸಾಥ್‌:

ದೆಹಲಿ ಪ್ರತಿಭಟನೆಯನ್ನು ಅಮೆರಿಕದ ವಾಷಿಂಗ್ಟನ್‌ ಪೋಸ್ಟ್‌ನ ಪತ್ರಕರ್ತರು ಸೇರಿದಂತೆ, ಜಗತ್ತಿನ ಹಲವು ಪತ್ರಿಕೆಗಳ ಪತ್ರಕರ್ತರು ಬೆಂಬಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಭಾವಿಗಳಾಗಿರುವ ಇವರ ಬೆಂಬಲದಿಂದಾಗಿ, ಪ್ರತಿಭಟನೆಗೆ ಮತ್ತಷ್ಟುಜಾಗತಿಕ ಬೆಂಬಲ ಸಿಕ್ಕಿದೆ.