ಮಹಾರಾಷ್ಟ್ರದಲ್ಲಿ ಇನ್ಮುಂದೆ ಠಾಕ್ರೆ ಸರ್ಕಾರ್‌

ಇಂದು ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, 18ನೇ ಮುಖ್ಯಮಂತ್ರಿಯಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಸಂಜೆ 6.40ಕ್ಕೆ ಸರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

uddhav Thackeray To Take Oath As Maharashtra CM

ಮುಂಬೈ [ನ.28]: ಕಳೆದೊಂದು ತಿಂಗಳಿನಿಂದ ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದ ಮಹಾರಾಷ್ಟ್ರದಲ್ಲಿ ಇಂದು ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, 18ನೇ ಮುಖ್ಯಮಂತ್ರಿಯಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಸಂಜೆ 6.40ಕ್ಕೆ ಸರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಾ ಠಾಕ್ರೆ ಅವರು ದಸರಾ ಸಂದರ್ಭದಲ್ಲಿ ಪ್ರತಿ ವರ್ಷ ಸಹಸ್ರಾರು ಜನರನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದ ಮುಂಬೈನ ಶಿವಾಜಿ ಪಾರ್ಕ್ನಲ್ಲಿ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರು ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್‌ ಒಳಗೊಂಡ ‘ಮಹಾರಾಷ್ಟ್ರ ವಿಕಾಸ್‌ ಅಘಾಡಿ’ ನಾಯಕ, 59 ವರ್ಷದ ಠಾಕ್ರೆ ಅವರಿಗೆ ಶಪಥ ಬೋಧಿಸಲಿದ್ದಾರೆ. ಠಾಕ್ರೆ ಅವರ ಜೊತೆಗೆ ಮೂರೂ ಪಕ್ಷಗಳ ತಲಾ 2-3 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನು ಒಪ್ಪಂದದ ಅನ್ವಯ ಎನ್‌ಸಿಪಿಗೆ ಒಂದು ಉಪಮುಖ್ಯಮಂತ್ರಿ ಹುದ್ದೆ ಒಲಿದಿದ್ದು, ಈ ಹುದ್ದೆ ಅಲಂಕರಿಸುವವರು ಕೂಡಾ ಇಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

... ಮಹಾ ಬಿಜೆಪಿಯಲ್ಲಿ ಭಿನ್ನಮತ: ಪವಾರ್ ಆಯ್ಕೆಗೆ ಅಸಹಮತ!...

ಇದೇ ವೇಳೆ ಬಿಜೆಪಿ ಜತೆ ಸೇರಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ, ಬಳಿಕ ಎನ್‌ಸಿಪಿಗೆ ಮರಳಿದ ಅಜಿತ್‌ ಪವಾರ್‌ ಅವರನ್ನೂ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂಬ ವದಂತಿ ಇದೆಯಾದರೂ ದೃಢಪಟ್ಟಿಲ್ಲ. ಈ ನಡುವೆ ದೇಶದ ವಿವಿಧೆಡೆಯ ಪ್ರಮುಖ ರಾಜಕೀಯ ನಾಯಕರು ಭಾಗಿಯಾಗುವ ಈ ಸಮಾರಂಭಕ್ಕೆ ಭಾರಿ ಭದ್ರತೆ ಒದಗಿಸಲಾಗಿದೆ.

ಯಾರಾರ‍ಯರಿಗೆ ಎಷ್ಟುಹುದ್ದೆ?:

ಸರ್ಕಾರ ರಚನೆ ಸಂಬಂಧ ಮೂರೂ ಪಕ್ಷಗಳ ನಾಯಕರ ನಡುವೆ ಏರ್ಪಟ್ಟಿರುವ ಒಮ್ಮತದ ಅನ್ವಯ ಮಹಾರಾಷ್ಟ್ರ ಸಂಪುಟದ 43 ಖಾತೆಗಳ ಪೈಕಿ ಶಿವಸೇನೆಗೆ ಮುಖ್ಯಮಂತ್ರಿ ಹುದ್ದೆ ಸೇರಿದಂತೆ 15 (11 ಸಂಪುಟ ದರ್ಜೆ ಮತ್ತು 4 ರಾಜ್ಯ ದರ್ಜೆ) ಖಾತೆ, ಎನ್‌ಸಿಪಿಗೆ ಒಂದು ಉಪಮುಖ್ಯಮಂತ್ರಿ ಹುದ್ದೆ ಸೇರಿದಂತೆ 15 (11 ಸಂಪುಟ ದರ್ಜೆ ಮತ್ತು 4 ರಾಜ್ಯ ದರ್ಜೆ) ಖಾತೆ ಹಾಗೂ ಕಾಂಗ್ರೆಸ್ಸಿಗೆ 13 (10 ಸಂಪುಟ ದರ್ಜೆ ಮತ್ತು 3 ರಾಜ್ಯ ದರ್ಜೆ) ಖಾತೆಗಳು ಸಿಗಲಿವೆ. ಇನ್ನು ಕಾಂಗ್ರೆಸ್‌ಗೆ ವಿಧಾನಸಭೆಯ ಸ್ಪೀಕರ್‌ ಹುದ್ದೆ ನೀಡಲು ನಿರ್ಧರಿಸಲಾಗಿದೆ.

ಭಾರೀ ಕುತೂಹಲ:

ಬಲಪಂಥೀಯವಾದ ಪ್ರತಿಪಾದಿಸುವ ಶಿವಸೇನೆ ಜತೆ ಜಾತ್ಯತೀತ ನಿಲುವು ಹೊಂದಿರುವ ಕಾಂಗ್ರೆಸ್‌ ಪಕ್ಷ ಮೈತ್ರಿ ಮಾಡಿಕೊಂಡಿರುವುದು ಜನರ ಹುಬ್ಬೇರುವಂತೆ ಮಾಡಿದೆ. ಹೀಗಾಗಿ ಈ ಮೈತ್ರಿ ಸರ್ಕಾರದ ಆಡಳಿತದ ಬಗ್ಗೆ ತೀವ್ರ ಕುತೂಹಲವೂ ಇದೆ.

ಮೊದಲ ಬಾರಿ ಸಾಂವಿಧಾನಿಕ ಹುದ್ದೆ:

ಶಿವಸೇನೆಯನ್ನು ಮುನ್ನಡೆಸುತ್ತಿದ್ದರೂ ಠಾಕ್ರೆ ಕುಟುಂಬ ಚುನಾವಣೆಗೆ ಸ್ಪರ್ಧಿಸುತ್ತಿರಲಿಲ್ಲ. ಆದರೆ ಈ ಬಾರಿ ಉದ್ಧವ್‌ ಅವರ ಪುತ್ರ ಆದಿತ್ಯ ಠಾಕ್ರೆ ಅವರು ಚುನಾವಣೆಗೆ ಸ್ಪರ್ಧಿಸಿ ಜಯಭೇರಿ ಸಾಧಿಸುವ ಮೂಲಕ ಆ ಸಂಪ್ರದಾಯ ಮುರಿದಿದ್ದರು. ಇದೀಗ ಅವರ ತಂದೆ ಶಾಸಕ ಕೂಡ ಆಗದೇ ನೇರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ತನ್ಮೂಲಕ ರಿಮೋಟ್‌ ಕಂಟ್ರೋಲ್‌ ರಾಜಕೀಯಕ್ಕೆ ಹೆಸರುವಾಸಿಯಾಗಿದ್ದ ಠಾಕ್ರೆಗಳು ನೇರ ರಾಜಕಾರಣಕ್ಕೆ ಇಳಿದಂತಾಗಿದೆ. ಇದೇ ವೇಳೆ, 20 ವರ್ಷಗಳ ಬಳಿಕ ಶಿವಸೇನೆಗೆ ಮುಖ್ಯಮಂತ್ರಿ ಪಟ್ಟಲಭಿಸಿದಂತಾಗಿದೆ. 1999ರಲ್ಲಿ ನಾರಾಯಣ ರಾಣೆ ಅವರು ಶಿವಸೇನೆಯಿಂದ ಮುಖ್ಯಮಂತ್ರಿಯಾದ ಕೊನೆಯ ವ್ಯಕ್ತಿಯಾಗಿದ್ದರು.

ಠಾಕ್ರೆ ಶಾಸಕರಲ್ಲ:

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಆರು ತಿಂಗಳ ಒಳಗಾಗಿ ಉದ್ಧವ್‌ ಠಾಕ್ರೆ ಅವರು ಉಭಯ ಸದನಗಳ ಸದಸ್ಯರಾಗಿ ಆಯ್ಕೆಯಾಗಬೇಕು. ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಬದಲು ವಿಧಾನಪರಿಷತ್‌ ಸದಸ್ಯರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಶಾಸಕರಿಗೆ ಪ್ರಮಾಣವಚನ:  ಈ ನಡುವೆ, ಮಹಾರಾಷ್ಟ್ರದ 14ನೇ ವಿಧಾನಸಭೆಯ ಮೊದಲ ಅಧಿವೇಶನ ಬುಧವಾರ ನಡೆಯಿತು. ಹಂಗಾಮಿ ಸ್ಪೀಕರ್‌ ಕಾಳಿದಾಸ ಕೋಲಂಬಕರ್‌ ಅವರು 285 ನೂತನ ಶಾಸಕರಿಗೆ ಪ್ರಮಾಣವಚನ ಬೋಧಿಸಿದರು.

ತಿಂಗಳ ಕಚ್ಚಾಟ:  ಅ.21ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿತ್ತು. ಬಿಜೆಪಿ- ಶಿವಸೇನೆ ಮಿತ್ರಕೂಟಕ್ಕೆ ಸ್ಪಷ್ಟಬಹುಮತ ಇತ್ತಾದರೂ, ಮುಖ್ಯಮಂತ್ರಿ ಸ್ಥಾನವನ್ನು ಎರಡೂವರೆ ವರ್ಷಗಳ ಕಾಲ ಹಂಚಿಕೊಳ್ಳಬೇಕು ಎಂಬ ಶಿವಸೇನೆ ಷರತ್ತು ಸರ್ಕಾರ ರಚನೆಗೆ ಅಡ್ಡಿಯಾಗಿತ್ತು. ಬಿಜೆಪಿ ಇದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಎನ್‌ಸಿಪಿ, ಕಾಂಗ್ರೆಸ್‌ ಜತೆ ಶಿವಸೇನೆ ಮಾತುಕತೆ ಆರಂಭಿಸಿತ್ತು. ಆದರೆ ನ.12ರಂದು ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದರು. ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್‌ ನಡುವೆ ಮಾತುಕತೆ ನಡೆಯುತ್ತಿರುವಾಗಲೇ, ಎನ್‌ಸಿಪಿಯ ಅಜಿತ್‌ ಪವಾರ್‌ ಜತೆಗೂಡಿ ದೇವೇಂದ್ರ ಫಡ್ನವೀಸ್‌ ಅವರು ನ.23ರಂದು ಸರ್ಕಾರ ರಚಿಸಿದ್ದರು. ಇದಕ್ಕಾಗಿ ಅಂದೇ ಬೆಳಗಿನ ಜಾವ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂಪಡೆಯಲಾಗಿತ್ತು. ಇದರ ವಿರುದ್ಧ ಮಹಾ ಅಘಾಡಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದವು. ಬುಧವಾರ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂಕೋರ್ಟ್‌ ಸೂಚನೆ ನೀಡಿತ್ತಾದರೂ, ಅಜಿತ್‌ ಪವಾರ್‌ ಹಾಗೂ ದೇವೇಂದ್ರ ಫಡ್ನವೀಸ್‌ ಮಂಗಳವಾರವೇ ರಾಜೀನಾಮೆ ನೀಡಿದ್ದರು. ಬಳಿಕ ಉದ್ಧವ್‌ ಠಾಕ್ರೆ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು.

Latest Videos
Follow Us:
Download App:
  • android
  • ios