ಕೊನೆಗೂ ಅಂತ್ಯಗೊಂಡ ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾ| ಶಿವಸೇನೆ, ಕಾಂಗ್ರೆಸ್-ಎನ್’ಸಿಪಿ ಮೈತ್ರಿಕೂಟ ಅಸ್ತಿತ್ವಕ್ಕೆ| ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಶಿವಸೇನೆಯ ಉದ್ಧವ್ ಠಾಕ್ರೆ ಪ್ರಮಾಣವಚನ| ಉದ್ಧವ್ ಠಾಕ್ರೆಗೆ ಪ್ರತಿಜ್ಞಾವಿಧಿ ಬೋಧಿಸಿದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ| ಭಗವಂತನ ಹೆಸರಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಉದ್ಧವ್ ಠಾಕ್ರೆ| ಮೂರು ಪಕ್ಷಗಳ ಒಟ್ಟು 6 ಶಾಸಕರಿಂದ ಪ್ರಮಾಣವಚನ| ಉದ್ಧವ್ ಠಾಕ್ರೆ ಪ್ರಮಾಣವಚನ ಸಮಾರಂಭದಲ್ಲಿ ದೇಶದ ವಿಪಕ್ಷಗಳ ಪ್ರಮುಖ ನಾಯಕರು| ಅಣ್ಣನ ಪ್ರಮಾಣವಚನ ಕಣ್ತುಂಬಿಕೊಟ್ಟ ಸಹೋದರ ರಾಜ್ ಠಾಕ್ರೆ|
ಮುಂಬೈ(ನ.28): ತಿಂಗಳಿಗೂ ಹೆಚ್ಚಿನ ಕಾಲದ ಹಗ್ಗ ಜಗ್ಗಾಟದ ಬಳಿಕ, ಕೊನೆಗೂ ಮಹಾರಾಷ್ಟ್ರದಲ್ಲಿ ಸಾಂವಿಧಾನಿಕ ಸರ್ಕಾರವೊಂದು ಅಸ್ತಿತ್ವಕ್ಕೆ ಬಂದಿದೆ.
ಮುಂಬೈನ ಐತಿಹಾಸಿಕ ಛತ್ರಪತಿ ಶಿವಾಜಿ ಮಹಾರಾಜ್ ಪಾರ್ಕ್’ನಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಶಿವಾಜಿ ಪಾರ್ಕ್’ನಲ್ಲಿ ನಿರ್ಮಿಸಲಾಗಿದ್ದ ಭವ್ಯ ವಿಶಾಲ ವೇದಿಕೆಯಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನೂತನ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಭಗವಂತನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಉದ್ಧವ್ ಠಾಕ್ರೆ, ಮಹಾರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಯ ಶಪಥ ಮಾಡಿದರು. ಪ್ರಮಾಣವಚನ ಸ್ವೀಕರಿಸಿದ ಬಳಿಕ ಉದ್ಧವ್ ವೇದಿಕೆಯ ನೆಲಕ್ಕೆ ಒರಗಿ ನಮಸ್ಕರಿಸಿದ್ದು ವಿಶೇಷವಾಗಿತ್ತು.
ಈ ವೇಳೆ ಮೂರು ಪಕ್ಷಗಳಿಂದ ಒಟ್ಟು 6 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಇಂದು ಪ್ರಮಾಣವಚನ ಸ್ವೀಕರಿಸಿದ ಸಚಿವರುಗಳ ಪಟ್ಟಿ ಇಲ್ಲಿದೆ.
1. ಉದ್ಧವ್ ಠಾಕ್ರೆ-ಶಿವಸೇನೆ
2. ಏಕನಾಥ್ ಶಿಂಧೆ-ಶಿವಸೇನೆ
3. ಸುಭಾಷ್ ದೇಸಾಯಿ-ಶಿವಸೇನೆ
4. ಜಯಂತ್ ಪಾಟಲ್-ಎನ್‌ಸಿಪಿ
5. ಛಗನ್ ಬುಜ್ಲ್-ಎನ್‌ಸಿಪಿ
6. ಬಾಳಾಸಾಹೇಬ್ ಥೋರಟ್-ಕಾಂಗ್ರೆಸ್
7. ನಿತಿನ್ ರಾವುತ್
ಇನ್ನು ಉದ್ಧವ್ ಠಾಕ್ರೆ ಪ್ರಮಾಣವಚನ ಸ್ವೀಕಾರ ಸಮಾರಂಭಲ್ಲಿ ದೇಶದ ವಿಪಕ್ಷಗಳ ಪ್ರಮುಖ ನಾಯಕರು ಭಾಗವಹಿಸಿದ್ದರು. ಪ್ರಮುಖವಾಗಿ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್, ಕಾಂಗ್ರೆಸ್ ನಾಯಕರಾದ ಅಹ್ಮದ್ ಪಟೇಲ್, ಕಪಿಲ್ ಸಿಬಲ್, ಮಧ್ಯಪ್ರದೇಶ ಸಿಎಂ ಕಮಲ್ ನಾಥ್, ಶಿವಸೇನೆಯ ಸಂಜಯ್ ರಾವುತ್, ಎಂಎನ್’ಎಸ್ ಮುಖ್ಯಸ್ಥ ಹಾಗೂ ಉದ್ಧವ್ ಠಾಕ್ರೆ ಸಹೋದರ ರಾಜ್ ಠಾಕ್ರೆ, ಎನ್’ಸಿಪಿ ಯ ಛಗನ್ ಬುಜ್ಬಲ್ ಸೇರಿದಂತೆ ಪ್ರಮುಖ ನಾಯಕರು ಬಾಗವಹಿಸಿದ್ದರು.
ಇನ್ನು ಉದ್ಧವ್ ಠಾಕ್ರೆ ಪ್ರಮಾಣವಚನ ಸಮಾರಂಭದಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭಾಗವಹಿಸಿದ್ದರು. ಸಮಾರಂಭದ ವೇದಿಕೆಯಲ್ಲೇ ಫಡ್ನವೀಸ್ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
ಇಷ್ಟೇ ಅಲ್ಲದೇ ಉದ್ಧವ್ ಠಾಕ್ರೆ ಪ್ರಮಾಣವಚನ ಸಮಾರಂಭದಲ್ಲಿ ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಖೇಶ್ ಅಂಬಾನಿ ಕುಟುಂಬ ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು.
