* 5000 ರು. ಕೊಟ್ಟು ನಂಬರ್‌ ಖರೀದಿಸಿದ್ದ ಹಂತಕ!* ಮುಂಬೈ ಉಗ್ರ ದಾಳಿಯ ಸಂಕೇತಾಕ್ಷರವಾದ 2611* ಅಖ್ತರಿಗೆ ಪಾಕ್‌ ಲಿಂಕ್‌ ಬಗ್ಗೆ ಇನ್ನು ಇನ್ನಷ್ಟುತನಿಖೆ

ಉದಯಪುರ (ಜು.02): ಇಲ್ಲಿ ಕಳೆದ 28ರಂದು ಹಿಂದೂ ಟೈಲರ್‌ ಕನ್ಹಯ್ಯಾಲಾಲ್‌ ಶಿರಚ್ಛೇದ ಮಾಡಿದ ಇಬ್ಬರು ಹಂತಕರು ಪಾಕಿಸ್ತಾನದ ನಂಟು ಹೊಂದಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ, ಹಂತಕರಲ್ಲಿ ಒಬ್ಬನಾದ ರಿಯಾಜ್‌ ಅಖ್ತರಿ, 2008ರ ನ.26ರಂದು ನಡೆದ ಮುಂಬೈ ಭಯೋತ್ಪಾದಕ ದಾಳಿಯ ಸಂಕೇತಾಕ್ಷರವಾದ ‘2611’ ಸಂಖ್ಯೆಯಲ್ಲಿ ತನ್ನ ಬೈಕ್‌ ನೋಂದಣಿ ಮಾಡಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.

ಮುಂಬೈ ದಾಳಿ ನ.26ರಂದು ನಡೆದ ಕಾರಣ (26 ದಿನಾಂಕ, 11ನೇ ತಿಂಗಳು) ಆ ದಾಳಿ ‘26/11’ ದಾಳಿ ಎಂದೇ ಬಿಂಬಿತವಾಗಿತ್ತು. ಆ ದಾಳಿಯನ್ನು ಪಾಕಿಸ್ತಾನದ ಕಸಬ್‌ ನೇತೃತ್ವದ ಲಷ್ಕರ್‌ ಎ ತೊಯ್ಬಾ ಉಗ್ರರು ನಡೆಸಿದ್ದರು.

ಈಗ ರಿಯಾಜ್‌ ಬೈಕ್‌ ನೋಂದಣಿ ಸಂಖ್ಯೆ ‘ಆರ್‌ಜೆ 27 ಎಎಸ್‌ 2611’ ಎಂದಾಗಿದೆ. ಇದೇ ನೋಂದಣಿ ಸಂಖ್ಯೆ ಬೇಕೆಂದು 5,000 ರು. ಹೆಚ್ಚು ಹಣವನ್ನು ಆರ್‌ಟಿಒಗೆ ಅಖ್ತರಿ ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಕನ್ಹಯ್ಯಾನನ್ನು ಕೊಲೆ ಮಾಡಿ ಇದೇ ಬೈಕ್‌ನಲ್ಲಿ ರಿಯಾಜ್‌ ಪರಾರಿ ಆಗುತ್ತಿದ್ದಾಗ ಸಿಕ್ಕಿಬಿದ್ದಿದ್ದ. ಬೈಕ್‌ ಈಗ ಉದಯಪುರದ ಮಂಡಿ ಪೊಲೀಸ್‌ ಠಾಣೆ ವಶದಲ್ಲಿದೆ.

ಇನ್ನು ನಂಬರ್‌ ಪ್ಲೇಟ್‌ ಆಧರಿಸಿ ಅಖ್ತರಿಯ ಪಾಕ್‌ ಸಂಪರ್ಕದ ಕುರಿತು ಮತ್ತಷ್ಟುತನಿಖೆ ನಡೆಯಲಿದೆ. ಏಕೆಂದರೆ 2014ರಲ್ಲಿ ಅಖ್ತರಿ ಪಾಕ್‌ಗೆ ಹೋಗಿ ಬಂದಿದ್ದ ಹಾಗೂ ದಾವತ್‌ ಎಂಬ ಪಾಕಿಸ್ತಾನಿ ಇಸ್ಲಾಮಿಕ್‌ ಧಾರ್ಮಿಕ ಸಂಘಟನೆ ಸದಸ್ಯನಾಗಿದ್ದ. ಆತ ಪಾಕ್‌ಗೆ ಹಲವಾರು ಬಾರಿ ಕರೆ ಮಾಡಿದ್ದನ್ನೂ ಪತ್ತೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.